ಸಾರಾಂಶ
ಕಾವೇರಿ ಕಾಲೇಜಿನಲ್ಲಿ ಹುತಾತ್ಮ ದಿನ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ದಾನ ಮಾತನಾಡಿದರು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಹುತಾತ್ಮ ದಿನ ಆಚರಿಸಲಾಯಿತು.ಭಗತ್ ಸಿಂಗ್, ಸುಖದೇವ್, ರಾಜ್ ಗುರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಆರ್. ಸಲ್ದಾನ, ಈ ಮೂರು ಕ್ರಾಂತಿಕಾರಿಗಳು ಅಸಂಖ್ಯಾತ ಭಾರತೀಯರ ಮನದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ದೇಶಕ್ಕಾಗಿ ಅವರು ಮಾಡಿದ ತ್ಯಾಗ ಬಲಿದಾನ ಸದಾ ಅಚ್ಚಳಿಯದೆ ಇರುತ್ತದೆ. ಈ ಮೂರು ಮಹನೀಯರಲ್ಲಿ ಇದ್ದ ದೇಶ ಪ್ರೇಮ, ದೇಶಾಭಿಮಾನದ ಎಲ್ಲರಲ್ಲೂ ನೆಲೆಯಾಗಬೇಕು. ನಾವೆಲ್ಲ ಭಾರತೀಯರೆಂಬ ಹೆಮ್ಮೆಯಿಂದ ದೇಶ ಸೇವೆಗೆ ಸದಾ ಸಿದ್ಧರಾಗಿರಬೇಕು ಎಂದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರಿಯಾ ಮುದ್ದಪ್ಪ ಮಾತನಾಡಿ, ಮೂವರು ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರು 1931 ಮಾ. 23ರಂದು ಗಲ್ಲಿಗೇರಿಸಿದ್ದರು. ಈ ದಿನವನ್ನು ಹುತಾತ್ಮ ದಿನವೆಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಭಗತ್ ಸಿಂಗ್, ಸುಖದೇವ್, ರಾಜ್ ಗುರು ಅವರ ತ್ಯಾಗ ಮತ್ತು ಶೌರ್ಯದ ಕಥೆ ಭಾರತೀಯ ಸ್ವಾತಂತ್ರ್ಯ ಚಳವಳಿಯ ಅತ್ಯಂತ ಸ್ಫೂರ್ತಿದಾಯಕವಾದದ್ದು. ಯುವ ಜನತೆ ಮೋಜು ಮಸ್ತಿಯಲ್ಲಿ ಜೀವನ ವ್ಯರ್ಥ ಮಾಡದೇ ಸದಾ ಇಂತಹ ಮಹನೀಯರ ಕಥೆಗಳಿಂದ ಪ್ರೇರೆಪಿತರಾಗಿ ದೇಶದ ಅಭಿವೃದ್ಧಿಗೆ ಸದಾ ತಮ್ಮಿಂದಾದ ಕೊಡುಗೆ ನೀಡಬೇಕೆಂದರು.ನಂತರ ವಿದ್ಯಾರ್ಥಿನಿಯರಾದ ರಾಧಿಕಾ, ಕೌಶಲ್ಯ, ಮಹನೀಯರ ಜೀವನ ಹಾಗೂ ಹೋರಾಟದ ಬಗ್ಗೆ ವಿಚಾರ ಮಂಡನೆ ಮಾಡಿದರು. ಸರ್ವರು ಒಂದು ನಿಮಿಷದ ಮೌನಾಚರಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸುದರ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. ಕಾಲೇಜಿನ ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.