ಮಾಸ್ಕ್‌ ಮ್ಯಾನ್‌ ಬೆಟ್ಟ ಅಗೆದ್ರೂ ಇಲಿ ಸಿಗಲಿಲ್ಲ: ಅಶೋಕ್‌

| Published : Aug 19 2025, 01:00 AM IST

ಸಾರಾಂಶ

ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ಮಾಸ್ಕ್‌ ಮ್ಯಾನ್‌ ಬೆಟ್ಟ ಅಗೆದರೂ ಇಲಿ ಸಿಗಲಿಲ್ಲ. ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಮಾತನಿಂದ ಸೊಳ್ಳೆಯೂ ಸಿಗಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ವಿಧಾನಸಭೆ

ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ಮಾಸ್ಕ್‌ ಮ್ಯಾನ್‌ ಬೆಟ್ಟ ಅಗೆದರೂ ಇಲಿ ಸಿಗಲಿಲ್ಲ. ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಮಾತನಿಂದ ಸೊಳ್ಳೆಯೂ ಸಿಗಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ವ್ಯಂಗ್ಯವಾಡಿದರು.

ಸೋಮವಾರ ಧರ್ಮಸ್ಥಳ ಗ್ರಾಮ ಪ್ರಕರಣ ಸಂಬಂಧ ಗೃಹ ಸಚಿವರ ಉತ್ತರ ನೀಡಿದ ಬಳಿಕ ಮಾತನಾಡಿ, ಉಪಮುಖ್ಯಮಂತ್ರಿಗಳೇ ಧರ್ಮಸ್ಥಳ ವಿಚಾರದಲ್ಲಿ ಅನ್ಯಾಯ, ಮೋಸ ಆಗಿದೆ, ಇದರ ಹಿಂದೆ ಷಡ್ಯಂತ್ರ ನಡೆದಿದೆ ಎಂದು ಹೇಳುತ್ತಾರೆ. ಗೃಹ ಸಚಿವರು ಏನೂ ಇಲ್ಲ. ಟೆಸ್ಟ್‌ಗೆ ಕಳುಹಿಸಿದ್ದೇವೆ. ವರದಿ ಬಂದಿಲ್ಲ ಎನ್ನುತ್ತಾರೆ. ಸರ್ಕಾರ ಯಾರ ಒತ್ತಡಕ್ಕೆ ಮಣಿದು ಎಸ್‌ಐಟಿ ರಚನೆ ಮಾಡಿದೆ? ಪ್ರಗತಿಪರರು, ನಗರ ನಕ್ಸಲರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ ಬಳಿಕ ಎಸ್ಐಟಿ ರಚನೆಯಾಗಿದೆಯೇ ಹೊರತು ಈ ವಿಚಾರದಲ್ಲಿ ನಾವು ಅವರ ಬಳಿ ಹೋಗಿದ್ದೆವಾ ಎಂದು ಪ್ರಶ್ನಿಸಿದರು.

ಧರ್ಮಸ್ಥಳದಲ್ಲಿ ಅತ್ಯಾಚಾರ, ಕೊಲೆ, ಅನಾಚಾರ ಆಗಿದೆ ಎಂಬ ಆರೋಪವನ್ನು ಕೋಟ್ಯಂತರ ಜನ ನೋಡಿದ್ದಾರೆ. ಮುಖ್ಯಮಂತ್ರಿಗಳು 28 ಕೊಲೆ ಮಾಡಿದ್ದಾರೆ. ಜೈಲಿಗೆ ಹಾಕಿ ಎಂದು ವ್ಯಕ್ತಿಯೊಬ್ಬ ಮಾತನಾಡಿದ್ದಾನೆ. ಆಗ ನಮ್ಮ ಸರ್ಕಾರ ಇರಲಿಲ್ಲ ಎಂದು ಸಚಿವರು ಹೇಳಿದ್ದಾರೆ. 2023ರ ಮೇ 13ರಂದು ಚುನಾವಣೆ ನಡೆಯಿತು. ಮೇ 28ರಂದು ನಿಮ್ಮದೇ ಸರ್ಕಾರ ಅಧಿಕಾರದಲ್ಲಿತ್ತು. ಇಂತವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಸದನಕ್ಕೆ ಬೆಲೆ ಇಲ್ಲವೇ? ಧರ್ಮಸ್ಥಳದ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ ಎಂದು ಡಿ.ಕೆ.ಶಿವಕುಮಾರ್ ಈಗಾಗಲೇ ಸ್ಪಷವಾಗಿ ಹೇಳಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಬುರುಡೆ ತಂದವನ ಬಂಧನ ಏಕಿಲ್ಲ?:

ಮಾಸ್ಕ್‌ ಮ್ಯಾನ್ ಮೊದಲ ದಿನ ಸಿನಿಮಾ ಶೈಲಿಯಲ್ಲಿ ಬುರುಡೆ ಹಿಡಿದುಕೊಂಡು ಬಂದಿದ್ದ. ಆ ಬುರುಡೆ ಎಲ್ಲಿಂದ ತಂದ? ಕಾನೂನು ಪ್ರಕಾರ ಹೂತ ಹೆಣ ತೆಗೆಯಲು ನ್ಯಾಯಾಲಯದ ಅನುಮತಿ ಬೇಕು. ಆದರೆ, ಆತ ಬುರುಡೆಯನ್ನೇ ತೆಗೆದುಕೊಂಡು ಬಂದಿದ್ದಾನೆ. ಆತ ಅನುಮತಿ ಇಲ್ಲದೆ ಬುರುಡೆ ಹೇಗೆ ತೆಗೆದ? ಏಕೆ ಆತನನ್ನು ಬಂಧಿಸಲಿಲ್ಲ? ಆ ಬುರುಡೆ ಏಕೆ ಪರಿಶೀಲಿಸಲಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಶಾಸಕ ಸುನೀಲ್‌ ಕುಮಾರ್‌ ದನಿ ಗೂಡಿಸಿದರು.

ಇದಕ್ಕೆ ಸಚಿವ ಪರಮೇಶ್ವರ್‌ ಪ್ರತಿಕ್ರಿಯಿಸಿ, ಇನ್ನೂ ತನಿಖೆ ಆಗಿಲ್ಲ. ಆತನ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ವಾ? ನೀವು ಸದನದಲ್ಲಿ ಹೇಳಿದ ತಕ್ಷಣ ಕ್ರಮ ತೆಗೆದುಕೊಳ್ಳಬೇಕಾ ಎಂದು ಮರು ಪ್ರಶ್ನೆ ಹಾಕಿದರು.

ಇದರ ಹಿಂದಿನ ಗ್ಯಾಂಗ್‌ ಯಾವುದು?:

ಬಳಿಕ ಮಾತು ಮುಂದುವರೆಸಿದ ಆರ್‌.ಅಶೋಕ್‌, ಮಾಸ್ಕ್‌ ಮ್ಯಾನ್‌ ನಾನು ತಮಿಳುನಾಡಿನಲ್ಲಿದ್ದೆ. ಮನೆ ಕಟ್ಟಿಸಿಕೊಡುತ್ತೇವೆ, ಹಣ ಕೊಡುತ್ತೇವೆ ಎಂದು ಮಹಿಳೆಯೊಬ್ಬಳು ಹೇಳಿದಳು. ಹೀಗಾಗಿ ನಾನು ಬಂದೆ ಎಂದು ಹೇಳಿದ್ದಾನೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ನೀವು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಹೇಳುತ್ತಿರುವಿರಿ. ನಿತ್ಯ ಒಂದು ಸಾವಿರ ದೂರುಗಳು ಬರುತ್ತವೆ. ಎಲ್ಲದಕ್ಕೂ ಎಸ್‌ಐಟಿ ರಚನೆ ಮಾಡುವಿರಾ? ಇದರ ಹಿಂದೆ ಯಾರಿದ್ದಾರೆ? ಆ ಗ್ಯಾಂಗ್‌ ಯಾವುದು ಎಂದು ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.

ಮುಸುಕುಧಾರಿ ಹಿಂದಿರುವ ವ್ಯಕ್ತಿ ಸಮಗ್ರ ತನಿಖೆ ನಡೆಸಿ: ಬಿವೈವಿ:ಧರ್ಮಸ್ಥಳ ಗ್ರಾಮ ಪ್ರಕರಣದ ದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಸುಕುಧಾರಿಯು ಧರ್ಮಸ್ಥಳದ ವಿಷಯದಲ್ಲಿ ಸಾಕಷ್ಟು ಪ್ರಚಾರ ತೆಗೆದುಕೊಂಡು ರಾಜ್ಯ ಸರ್ಕಾರ ಎಸ್ಐಟಿ ಸ್ಥಾಪಿಸುವ ಮಟ್ಟಕ್ಕೂ ಹೋಗಿದ್ದ. ಕಳೆದ 2-3 ವಾರಗಳಿಂದ ತನಿಖೆ ಜೊತೆಗೆ ಧರ್ಮಸ್ಥಳ, ಮಂಜುನಾಥೇಶ್ವರನ ಕ್ಷೇತ್ರದ ಕುರಿತು ಸಾಕಷ್ಟು ಅಪಪ್ರಚಾರಗಳು ನಡೆದಿದ್ದವು. ರಾಜ್ಯ-ರಾಷ್ಟ್ರೀಯ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಒಳಗಾಗಿತ್ತು ಎಂದರು.

ರಾಜ್ಯ ಸರ್ಕಾರದ ಕ್ರಮ ಹಿಟ್ ಆ್ಯಂಡ್‌ ರನ್ ಆಗಬಾರದು. ದೂರುದಾರ, ದೂರುದಾರನ ಹಿಂದಿರುವ ಪ್ರಭಾವಿ ವ್ಯಕ್ತಿಗಳೇ ಇರಬಹುದು; ಎಡಪಂಥೀಯ ಸಂಘಟನೆಗಳೇ ಇರಬಹುದು. ಇವರೆಲ್ಲರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಪ್ರತಿಪಾದಿಸಿದರು.ಕೆಲವು ವ್ಯಕ್ತಿಗಳು ಸಂಘಟನೆ ಮಾಡಿಕೊಂಡು ಧರ್ಮಸ್ಥಳದ ವಿರೋಧವಾಗಿ ಚರ್ಚೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಬಗ್ಗೆ ಆರೋಪ ಮಾಡಿದ್ದಾರೆ. ಆರೆಸ್ಸೆಸ್ ಪ್ರಚಾರಕರ ಬಗ್ಗೆ ಆಗಲಿ ಅಥವಾ ಸಂತೋಷ್ ಅವರ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದು ನನ್ನನ್ನೂ ಒಳಗೊಂಡಂತೆ ರಾಜ್ಯದ ಅನೇಕ ಸ್ವಯಂಸೇವಕರಿಗೆ ನೋವಾಗಿದೆ. ಪ್ರಚಾರಕರು, ಆರ್‌ಎಸ್‌ಎಸ್‌ಗೆ ಅಗೌರವ ತರುವುದನ್ನು ನೋಡಿಕೊಂಡು ರಾಜ್ಯ ಸರ್ಕಾರ ಸುಮ್ಮನೇ ಕೂಡಬಾರದು. ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಯುಟ್ಯೂಬ್‌ ಚರ್ಚೆ, ಹಣ ತನಿಖೆ ನಡೆಸಿ: ಸುನೀಲ್:ಧರ್ಮಸ್ಥಳ ಗ್ರಾಮ ಪ್ರಕರಣಕ್ಕೆ ಸಂಬಂಧಿಸಿ ಮುಸುಕುಧಾರಿ ಹಿಂದೆ ಹತ್ತಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಯುಟ್ಯೂಬ್‌ ಚರ್ಚೆಗಳು, ಹಣಕಾಸು ನೆರವು ನೀಡುತ್ತಿರುವ ಬಗ್ಗೆ ತನಿಖೆಯಾಗಬೇಕು ಎಂದು ಬಿಜೆಪಿ ಸದಸ್ಯ ವಿ.ಸುನೀಲ್‌ಕುಮಾರ್ ಆಗ್ರಹಿಸಿದ್ದಾರೆ.ಪ್ರಕರಣ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸುದೀರ್ಘ ಉತ್ತರ ನೀಡಿದ ಬಳಿಕ ಪ್ರತಿಕ್ರಿಯಿಸಿದ ಅವರು, ಎಸ್‌ಐಟಿ ರಚನೆಗೆ ನಾವು ವಿರೋಧ ಮಾಡಿಲ್ಲ. ಈ ತನಿಖೆ ನೆಪದಲ್ಲಿ ಧಾರ್ಮಿಕ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ಷಡ್ಯಂತ್ರ ಇದೆ ಎಂಬ ಮಾತನ್ನು ಉಪಮುಖ್ಯಮಂತ್ರಿಗಳೇ ಹೇಳಿದ್ದಾರೆ. ಧರ್ಮಸ್ಥಳದ ಹೆಸರಿಗೆ ಕೆಸರು ಎರಚುವ ಹುನ್ನಾರ ನಡೆಯುತ್ತಿದೆ. ಸರ್ಕಾರದ ಉದ್ದೇಶವೂ ಅದೇ ಆಗಿದೆ ಎಂದರು.

ಇದಕ್ಕೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸ್ಪೀಕರ್‌ ಖಾದರ್‌ ಅವರು ಆ ಪದವನ್ನು ಕಡತದಿಂದ ತೆಗೆಯುವಂತೆ ಸೂಚಿಸಿದಾಗ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ಸರ್ಕಾರವೇ ಕಾರಣ ಎಂದು ನೇರವಾಗಿ ಆರೋಪಿಸಿದರು. ಬಳಿಕ ಸದನದಲ್ಲಿ ಗದ್ದಲ ಏರ್ಪಟ್ಟಿತು.ಗದ್ದಲದ ನಡುವೆಯೇ ಮಾತು ಮುಂದುವರೆಸಿದ ಸುನೀಲ್‌ ಕುಮಾರ್‌, ಸರ್ಕಾರ ಎಸ್ಐಟಿ ರಚನೆ ಮಾಡಿ ಹಿಂದೂ ಧಾರ್ಮಿಕ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದೆ. ಇದರ ವಿರುದ್ಧ ಜನ ರಸ್ತೆಗೆ ಬಂದಿದ್ದಕ್ಕೆ ಈಗ ಬ್ಯಾಲೆನ್ಸ್‌ ಮಾಡುವ ನಾಟಕ ಮಾಡುತ್ತಿದೆ. ಈ ಅಪಪ್ರಚಾರದ ಹಿಂದೆ ತಮಿಳುನಾಡು, ಕೇರಳದ ಮುಸುಕುಧಾರಿಗಳು ತುಂಬಾ ಜನ ಇದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ ನಿರ್ದೇಶನದ ಮೇರೆಗೆ ಸರ್ಕಾರವೇ ಈ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.