ಉಪ್ಪಿನಂಗಡಿ: ಉಪ್ಪಿನಗಂಡಿ ಸರ್ಕಾರಿ ಮಾದರಿ ವಿದ್ಯಾ ಸಂಸ್ಥೆಯ ಬಳಿ ಚರಂಡಿ ತ್ಯಾಜ್ಯ ನೀರು ಸಂಗ್ರಹಣೆಗೊಂಡು ಸೊಳ್ಳೆ ಉತ್ಪಾದನಾ ಕೇಂದ್ರವಾಗಿದ್ದು, ಸಮಸ್ಯೆ ನಿವಾರಣೆಗೆ ಸಂಬಂಧಿಸಿ ಆಡಳಿತ ವ್ಯವಸ್ಥೆಗೆ ನೀಡಿದ ಮನವಿಗೆ ಬೆಲೆ ದೊರೆತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿದ್ದಾರೆ.ಅಲ್ಲಿ ಸಮಸ್ಯೆ ಬಗೆಹರಿಯಿತು. ಇಲ್ಲಿ ಸಮಸ್ಯೆ ಉದಯಿಸಿತು
ಉಪ್ಪಿನಂಗಡಿಯ ರಾಜ ಕಾಲುವೆಯು ಕಳೆದ ನಾಲ್ಕು ದಶಕಗಳಿಂದ ಸಮಸ್ಯೆಯ ಕೂಪವಾಗಿ ಕಾಡುತ್ತಿದ್ದ ಸಮಯದಲ್ಲಿ ಪುತ್ತೂರು ಸಹಾಯಕ ಕಮಿಷನರ್ ಆಗಿದ್ದ ಜುಬಿನ್ ಮಹಾಪಾತ್ರ ಹೆದ್ದಾರಿ ಕಾಮಗಾರಿ ನಿರತ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಉಪ್ಪಿನಂಗಡಿ ಸಂಪರ್ಕ ರಸ್ತೆಯಲ್ಲಿನ ಕಿರಿದಾದ ಮೋರಿ ತೆರವುಗೊಳಿಸಿ ಚೌಕಾಕಾರದ ೫ ಅಡಿ ವ್ಯಾಸದ ಕಾಂಕ್ರೀಟ್ ಮೋರಿ ಅಳವಡಿಸಿ ಹೆದ್ದಾರಿಯಿಂದ ಉಪ್ಪಿನಂಗಡಿ ಸಂಪರ್ಕ ಸಾಧಿಸುವ ರಸ್ತೆಯ ಬಳಿ ಉಂಟಾಗಿದ್ದ ಸುಧೀರ್ಘ ಕಾಲದ ಸಮಸ್ಯೆ ನಿವಾರಿಸಿದ್ದರು. ಅಲ್ಲಿಂದ ಹರಿದು ಬಂದ ಚರಂಡಿ ನೀರು ಶಾಲೆಯ ಬಳಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿಗಡ್ಡವಾಗಿ ಹೊಸದಾಗಿ ನಿರ್ಮಿಸಲಾದ ಚರಂಡಿಯಲ್ಲಿ ಹರಿಯದೆ ಕಿರಿದಾದ ಹಳೇ ಚರಂಡಿಯಲ್ಲಿಯೇ ಹರಿಯುವಂತಾಗಿತ್ತು. ಇದರಿಂದಾಗಿ ಈ ಭಾಗದಲ್ಲಿ ನೀರಿನ ಸರಾಗ ಹರಿಯುವಿಕೆಗೆ ಅಡೆತಡೆಯಾಗಿತ್ತು. ಹೆದ್ದಾರಿಗಡ್ಡವಾಗಿ ನಿರ್ಮಿಸಲಾದ ಚರಂಡಿಯು ನೀರು ಹರಿಯುವ ಪ್ರಾಕೃತಿಕ ಮಟ್ಟದಿಂದ ಎತ್ತರವಿದ್ದ ಕಾರಣ ಚರಂಡಿ ನೀರು ಹೊಸದಾದ ಚರಂಡಿಯಲ್ಲಿ ಹರಿಯದೆ ಹಳೆಯ ಕಿರಿದಾದ ಚರಂಡಿಯಲ್ಲಿ ಹರಿಯುತ್ತಿತ್ತಾದರೂ ತಕ್ಕ ಮಟ್ಟಿಗೆ ಸಮಾಧಾನ ತಂದಿತ್ತು. ಆದರೆ ಹೆದ್ದಾರಿ ಅಗಲೀಕರಣದ ವೇಳೆ ಕಾಮಗಾರಿಯಲ್ಲಿ ಉಳಿಕೆಯಾದ ಕಾಂಕ್ರೀಟ್ ಮಿಶ್ರಣವನ್ನು ವಿಲೇವಾರಿ ಮಾಡಲು ಸುಲಭವಾಗುತ್ತದೆ ಎಂಬ ಕಾರಣಕ್ಕೆ ಹೆದ್ದಾರಿ ಬದಿಯ ಚರಂಡಿಗೆ ಸುರಿದ ಕಾರಣ ಮಂದಗತಿಯಲ್ಲಿ ಹರಿದುಹೋಗುತ್ತಿದ್ದ ತ್ಯಾಜ್ಯ ನೀರು ಇದೀಗ ಹರಿದು ಹೋಗಲಾಗದೆ ಚರಂಡಿಯಲ್ಲಿಯೇ ಸಂಗ್ರಹಗೊಂಡು ದುರ್ನಾತ ಹಾಗೂ ಸೊಳ್ಳೆ ಉತ್ಪಾದನೆಗೆ ಕಾರಣವಾಗಿದೆ.ಬಡವರ ಮಕ್ಕಳಿಗೆ ಆರೋಗ್ಯ ಭಾಗ್ಯ ನೀಡಿ ಎಲ್ಲೆಡೆ ಸರ್ಕಾರಿ ಶಾಲೆ ಮುಚ್ಚುತ್ತಿದ್ದರೆ ಉಪ್ಪಿನಂಗಡಿಯ ಸರ್ಕಾರಿ ಶಾಲೆ ದಿನೇ ದಿನೇ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಾ ಗಮನ ಸೆಳೆಯುತ್ತಿದೆ. ಆದರೆ ನಮ್ಮ ಶಾಲಾ ಬಳಿಯ ಚರಡಿಯಲ್ಲಿ ಮಲಿನ ನೀರು ಶೇಖರಣೆಗೊಂಡು ರೋಗಾಣುಗಳು ಉತ್ಪಾದನೆಗೊಳ್ಳುತ್ತಿರುವುದರಿಂದ ಶಾಲಾ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಕಳವಳಕಾರಿಯಾಗಿದೆ. ನಾವೆಲ್ಲಾ ಬಡವರು. ನಮ್ಮ ಮಕ್ಕಳು ದಿನ ನಿತ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಬಡವರ ಮಕ್ಕಳಿಗೂ ಆರೋಗ್ಯ ಭಾಗ್ಯವನ್ನು ನೀಡಿ ಎಂದು ಕಂಡ ಕಂಡವರಲ್ಲಿ ಮನವಿ ಕೊಟ್ಟು ಯಾಚಿಸಿದ್ದೇವೆ. ಯಾರಿಂದಲೂ ಸ್ಪಂದನವಿಲ್ಲ. ಇನೂ ಬೀದಿಗಿಳಿಯುವುದೇ ನಮಗಿರುವ ಏಕೈಕ ಹಾದಿ ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಮಜೀದ್ ಎಚ್ಚರಿಸಿದ್ದಾರೆ. ಗಂಭೀರತೆ ಅರ್ಥವಾಗುತ್ತಿಲ್ಲ
ನಮ್ಮೂರ ಸರ್ಕಾರಿ ಮಾದರಿ ಶಾಲೆ ಜನಾಕರ್ಷಣೆಯ ಶಾಲೆ. ಇಲ್ಲಿ ೫೦೦ ಕ್ಕೂ ಹೆಚ್ಚಿನ ಮಕ್ಕಳು ಕಲಿಯುತ್ತಿದ್ದರೂ ಶಾಲಾ ಪರಿಸರದ ಸನಿಹದಲ್ಲೇ ಚರಂಡಿ ಸಮಸ್ಯೆ ಸುದೀರ್ಘ ಸಮಯದಿಂದ ಜೀವಂತವಾಗಿರುವುದು ಖೇದಕರ ಸಂಗತಿ. ಅಧಿಕಾರಿಗಳಿಂದ ಮೊದಲುಗೊಂಡು ಜನಪ್ರತಿನಿಧಿಗಳವರೆಗೆ ದೂರು, ಮನವಿ ಕೊಟ್ಟರೂ ಯಾರೊಬ್ಬರಿಗೂ ಸಮಸ್ಯೆಯ ಗಂಭೀರತೆ ಅರ್ಥವಾಗದಿರುವುದು ಪ್ರಶ್ನಾರ್ಹವಾಗಿದೆ. ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪೋಷಕರು ಕೈಗೊಳ್ಳುವ ಯಾವುದೇ ತೀರ್ಮಾನಕ್ಕೆ ಶಾಲಾಹಿರಿಯ ವಿದ್ಯಾರ್ಥಿ ಸಂಘ ಸಂಪೂರ್ಣ ಬೆಂಬಲವನ್ನು ನೀಡಲಿದೆ ಎಂದು ಈ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ ಕುಮಾರ್ ಕಲ್ಲಳಿಕೆ ತಿಳಿಸಿದ್ದಾರೆ.