ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಹಿಂದೆ ಕೊಡವ ಸಮಾಜಗಳು ಮದುವೆ ಸಮಾರಂಭಗಳಿಗೆ ವೇದಿಕೆ ಕಲ್ಪಿಸುವುದಕ್ಕೆ ಮಾತ್ರ ಸೀಮಿತವಾಗಿದ್ದು, ಆದರೆ ಇದೀಗ ಕೊಡವ ಸಮಾಜಗಳು ಕೊಡವ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಮಕ್ಕಳಿಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಹಾಗೂ ಅರಿವಿಕೆಯನ್ನು ಮೂಡಿಸುತ್ತಿರುವುದು ಪ್ರಶಂಸನೀಯ ಎಂದು ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅಭಿಪ್ರಾಯಪಟ್ಟರು.ಪೊನ್ನಂಪೇಟೆಯಲ್ಲಿ ಕೊಡವ ಹಿತಾರಕ್ಷಣಾ ಬಳಗ ಕ್''''''''ಗ್ಗಟ್ಟ್ ನಾಡ್, ಪೊನ್ನಂಪೇಟೆ ಇವರ ಆಶ್ರಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ‘ಕಕ್ಕಡ ಪದ್ ‘ನೆಟ್ಟ್’ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಸ್ಕೃತಿಯ ಬೇರಾಗಿರುವ ಬತ್ತದ ಕೃಷಿಯಲ್ಲಿ ನಿರಾಸಕ್ತಿ ತಾಳಿದ್ದು ಕೊಡಗಿನಲ್ಲಿ 30 ಸಾವಿರ ಹೆಕ್ಟರ್ ಪ್ರದೇಶದಲ್ಲಿದ್ದ ಕೃಷಿ, ಇದೀಗ 19 ಸಾವಿರ ಹೆಕ್ಟರ್ ಪ್ರದೇಶಕ್ಕೆ ಕುಸಿತವಾಗಿರುವ ವರದಿ ಅತ್ಯಂತ ಆತಂಕಕಾರಿ ಎಂದು ಹೇಳಿದರು.ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರು ಮಾತನಾಡಿ ಕಕ್ಕಡ 18 ಆಚರಣೆಯ ವಿಶೇಷತೆಯಲ್ಲಿ ತೀವ್ರ ಚಳಿ ಶೀತ ವಾತಾವರಣ ಹಾಗೂ ಕೃಷಿ ಚಟುವಟಿಕೆಯಲ್ಲಿ ನಿರತರಾದ ಸಂದರ್ಭ ಜನರ ಆರೋಗ್ಯ ರಕ್ಷಣೆಗೆ ಆಹಾರವನ್ನು ಪೂರ್ವಜರು ವೈಜ್ಞಾನಿಕವಾಗಿ ನಿರ್ಧರಿಸಿದ್ದಾರೆ. ಪ್ರಕೃತಿಯಿಂದ ನಾವು ಆಹಾರವನ್ನು ಪಡೆಯುತ್ತೇವೆ. ಅದರಿಂದ ಪ್ರಕೃತಿಯನ್ನು ರಕ್ಷಿಸಬೇಕು ಹಾಗೂ ಪೂಜೆ ಮಾಡಬೇಕು ಎಂದಿಗೂ ನಾಶ ಮಾಡ ಬಾರದು ಎಂದು ಕಿವಿ ಮಾತು ಹೇಳಿದರು.
ಸಾಧಕರಿಗೆ ಸನ್ಮಾನ: ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಹಿರಿಯ ವೈದ್ಯಾಧಿಕಾರಿ ಡಾ. ಬಿಜ್ಜಂಡ ಕಾರ್ಯಪ್ಪ ಮತ್ತು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ಮುಕ್ಕಾಟೀರ ಗ್ರೀಷ್ಮ ಬೋಜಮ್ಮ ಅವರನ್ನು ಸನ್ಮಾನಿಸಲಾಯಿತು.ಹತ್ತನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ಲಯನ್ಸ್ ಶಾಲಾ ವಿದ್ಯಾರ್ಥಿ ಕಾಟಿಮಾಡ ಭಾಷಿತ ದೇವಯ್ಯ ಹಾಗೂ ಪೊನ್ನಂಪೇಟೆ ಸಿಐಟಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಚೆಪ್ಪುಡೀರ ಹರ್ಷಿಣಿ ಪ್ರದೀಪ್ ಅವರನ್ನು ಈ ಸಂದರ್ಭ ಸನ್ಮಾನಿಸಿ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು.
ಡಾ. ಬಿಜ್ಜಂಡ ಕಾರ್ಯಪ್ಪ ಮಾತನಾಡಿ ಕೊಡವ ಮಕ್ಕಳು ವ್ಯಾಸಂಗಕ್ಕಾಗಿ ಹೊರಗೆ ಹೋಗುವ ಸಂದರ್ಭ ಕೊಡವಾಮೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಹಾಗೆಯೇ ವ್ಯಾಸಂಗ ವಾದ ನಂತರ ಕೊಡಗಿನಲ್ಲಿಯೂ ಸೇವೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.ಡಾ. ಮುಕ್ಕಾಟೀರ ಗ್ರೀಷ್ಮ ಬೋಜಮ್ಮ ಮಾತನಾಡಿ, ಸಮಾಜದಲ್ಲಿ ಎಲ್ಲಾ ವರ್ಗದ ಜನರಿದ್ದಾರೆ. ಇಂದಿಗೂ ಶೇ. 65 ರಷ್ಟು ಜನರು ಸರ್ಕಾರಿ ಆರೋಗ್ಯ ಸೇವೆಯನ್ನು ಅವಲಂಬಿಸಿದ್ದಾರೆ. ಕೊಡಗಿನ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಕೊಡಗಿನಲ್ಲಿ ಸರ್ಕಾರಿ ಸೇವೆ ಸಲ್ಲಿಸಲು ಅವಕಾಶಗಳಿವೆ. ನಮ್ಮ ಮಕ್ಕಳು ಸರ್ಕಾರಿ ಸೇವೆಗೆ ಸೇರಬೇಕು ಹಣ ಮಾಡುವುದು ಒಂದೇ ಗುರಿ ಆಗಬಾರದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಹಿತಾರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಕೊಡಗಿನಲ್ಲಿ ಅಂಬಲಗಳು ನ್ಯಾಯ ತೀರ್ಮಾನದ ಕೇಂದ್ರಗಳಾಗಿದ್ದವು ಅವುಗಳು ಇದ್ದರೆ ಊರಿಗೆ ಒಳಿತಾಗುತ್ತದೆ, ಹಾಗೆಯೇ ಮಂದ್ ಗಳು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕೇಂದ್ರಗಳಾಗಿದ್ದು ಅವುಗಳು ಉಳಿದರೆ ನಾಡಿಗೆ ಒಳಿತಾಗುತ್ತದೆ ಎಂಬ ಮಾತಿದೆ ಎಂದರು.ಪಟ್ಟೋಲೆ ಪಳಮೆ ಕೃತಿಗೆ ನೂರು ವರ್ಷ: ನಡಿಡಿಕೇರಿಯಂಡ ಚಿಣ್ಣಪ್ಪ ಅವರು ಬರೆದಿರುವ ಕೊಡವರ ಭಗವದ್ಗೀತೆ ಎಂದೇ ಕರೆಯುವ ಪಟ್ಟೋಲೆ ಪಳಮೆ ಕೃತಿ ರಚನೆಯಾಗಿ ನೂರು ವರ್ಷ ಆದ ಸಂದರ್ಭ ಇಂದಿನ ವೇದಿಕೆಗೆ ‘ಕೃತಿಯ’ ಹೆಸರಿಡಲಾಗಿತ್ತು. ನಡಿಕೇರಿಯಂಡ ಚೆಣ್ಣಪ್ಪ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನವನ್ನು ಗಣ್ಯರು ಸಲ್ಲಿಸಿದರು.
ಕಾಳಿಮಾಡ ಮೋಟಯ್ಯ ಮಾತನಾಡಿ ಕೊಡಗಿನಲ್ಲಿ 1924ರಲ್ಲಿ ಯಾವುದೇ ಸಂಪರ್ಕಗಳು, ವಾಹನಗಳು ಸೌಲಭ್ಯ ಇಲ್ಲದ ಸಂದರ್ಭದಲ್ಲಿ ಕೊಡಗಿನ ಉದ್ದಗಲಕ್ಕೆ ನಡೆದು ಕೊಡಗಿನ ಸಂಸ್ಕೃತಿ, ಭೌಗೋಳಿಕ ವಿಚಾರ, ಇತಿಹಾಸ ಅಧ್ಯಯನ ಮಾಡಿ ಪಟ್ಟೋಲೆ ಪಳಮೆಯನ್ನು ರಚಿಸಿರುವ ಚಿಣ್ಣಪ್ಪ ಅವರ ಸಾಧನೆ ಮಹತ್ತರವಾಗಿದೆ. ಅವರು ಕೊಡವ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.ಹಿತರಕ್ಷಣ ಬಳಗದ ಅಧ್ಯಕ್ಷರಾಗಿದ್ದ ಕಾಯಪಂಡ ಸನ್ನಿ ಬೋಪಣ್ಣ ಅವರ ಅಕಾಲಿಕ ನಿಧನಕ್ಕೆ ಮೌನಚರಣೆ ಮಾಡಲಾಯಿತು.
ಬಳಗದ ಉಪಾಧ್ಯಕ್ಷ ಚೆಕ್ಕೇರ ರಮೇಶ್ ಹಾಜರಿದ್ದರು. ಚೆಟ್ಟಂಗಡ ಲೇಖನ ಪ್ರಾರ್ಥಿಸಿ, ರಾಜಾ ನಂಜಪ್ಪ ಸ್ವಾಗತಿಸಿದರು. ಸನ್ಮಾನಿತರ ಪರಿಚಯವನ್ನು ಚೊಟ್ಟೆ ಕಾಳಪಂಡ ಆಶಾ ಪ್ರಕಾಶ್ ಹಾಗೂ ಬಲ್ಲಡಿಚಂಡ ಕಸ್ತೂರಿ ಮಾಡಿದರು. ಉಳುವಂಗಡ ಲೋಹಿತ್ ಭೀಮಯ್ಯ ನಿರೂಪಿಸಿ, ಬೋಡಂಗಡ ಜಗದೀಶ್ ವಂದಿಸಿದರು.ಮಂದತವ್ವ ತಂಡದಿಂದ ಗೆಜ್ಜೆತಂಡ್ ನೃತ್ಯ ಯಂಗ ಕಲಾರಂಗ ತಂಡದಿಂದ ಕೊಡವ ಕಿರು ನಾಟಕ ಹಾಡು ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.
ಇದೇ ಸಂದರ್ಭ ಕಟ್ಟಡ 18ರ ವಿಶೇಷ ಸಾಂಪ್ರದಾಯಿಕ ಊಟೋಪಚಾರ ವ್ಯವಸ್ಥೆ ಮಾಡಲಾಗಿತ್ತು.ಪೊನ್ನಂಪೇಟೆಯಲ್ಲಿ ಕಕ್ಕಡ ಪದ್ ನೆಟ್ಟ್ ಪ್ರಯುಕ್ತ ಪಂಜಿನ ಮೆರವಣಿಗೆ: ಕೊಡವ ಹಿತರಕ್ಷಣಾ ಬಳಗ ಕ್''''''''''''''''ಗ್ಗಟ್ಟ್ ನಾಡ್, ಪೊನ್ನಂಪೇಟೆ ಇವರ ಆಶ್ರಯದಲ್ಲಿ 13ನೇ ವರ್ಷದ ಕಕ್ಕಡ ಪದ್''''''''''''''''ನೆಟ್ಟ್ ಪಂಜಿನ ಮೆರವಣಿಗೆ ಕಾರ್ಯಕ್ರಮ ಪೊನ್ನಂಪೇಟೆಯಲ್ಲಿ ಶನಿವಾರ ಸಂಜೆ ನಡೆಯಿತು.
ಪೊನ್ನಂಪೇಟೆ ಕೊಡವ ಸಮಾಜದಿಂದ ಆರಂಭವಾದ ಮೆರವಣಿಗೆ ಮುಖ್ಯಬೀದಿಯಲ್ಲಿ ಸಾಗಿ ಬಸವೇಶ್ವರ ದೇವಸ್ಥಾನ ವೃತ್ತದಲ್ಲಿ ಸಾಗಿ ಬಸ್ ನಿಲ್ದಾಣದಲ್ಲಿ ಒಡ್ಡೋಲಗದೊಂದಿಗೆ ವಾಲಗತಾಟ್ ಗೆ ಹೆಜ್ಜೆ ಹಾಕಿದ ಮಹಿಳೆಯರು, ಮಕ್ಕಳು ಸೇರಿ ಸಾಮೂಹಿಕವಾಗಿ ಕುಣಿದು ಸಂಭ್ರಮಿಸಿದರು.;Resize=(128,128))
;Resize=(128,128))