ಸಾರಾಂಶ
ಕನ್ನಡಪ್ರಭ ವಾರ್ತೆ ಬೆಟ್ಟದಪುರಗುಣಮಟ್ಟದ ವಿದ್ಯಾರ್ಥಿಗಳು ಸಮಾಜದ ಬೆನ್ನೆಲುಬು, ಅವರು ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ, ಅವರನ್ನು ಸೃಷ್ಟಿಸಲು ಶಿಕ್ಷಕರು, ಪೋಷಕರು ಮತ್ತು ಸಮಾಜದ ಎಲ್ಲ ವರ್ಗಗಳು ಸಹಕರಿಸಬೇಕು ಎಂದು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ವಿಜಯಗಿರಿ ಎಜುಕೇಷನ್ ಟ್ರಸ್ಟ್ ಡಿ.ಟಿ.ಎಂ.ಎನ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ವಸಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕೊಡಿಸುವುದು ಅಷ್ಟು ಸುಲಭದ ಮಾತಲ್ಲ, ಈ ಸಂಸ್ಥೆ ಕಳೆದ 23 ವರ್ಷಗಳಿಂದ ಬೆಳೆದು ಬಂದಿರುವ ಪರಿ ನಿಜಕ್ಕೂ ಮೆಚ್ಚುವಂಥದ್ದು, ಅಲ್ಲದೆ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಸಿಬಿಎಸ್.ಸಿ ಹಾಗೂ ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ಮಾಡಲು ಹೊರಟಿರುವುದು ಪ್ರಶಂಸಿಸಬೇಕಾದ ವಿಚಾರವಾಗಿದೆ, ಕೇವಲ ಪುಸ್ತಕ ಜ್ಞಾನ ಸಾಕಾಗುವುದಿಲ್ಲ, ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಪ್ರಾಯೋಗಿಕವಾಗಿ ಅನ್ವಯಿಸುವ ಅವಕಾಶವನ್ನು ಈ ಸಂಸ್ಥೆ ಒದಗಿಸಿಕೊಡುತ್ತಿದೆ, ನಾವು ಕಲಿಯುವಂತಹ ಶಿಕ್ಷಣ ಸಮಾಜಕ್ಕೆ ಕೊಡುಗೆಯಾಗಿರಬೇಕು ಸಮಾಜವನ್ನು ಬೆಳಸಿ ಮುನ್ನಡೆಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ರವಿಪ್ರಸನ್ನ ಮಾತನಾಡಿ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಮುಂದೆ ಬರುವ ಉದ್ದೇಶ ಶಿಕ್ಷಣ ಸಂಸ್ಥೆಯದ್ದಾಗಿದೆ, ಈ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಶ್ರಮ ಜೊತೆಗೆ ಗುಣಮಟ್ಟದ ಶಿಕ್ಷಣ ಲಭಿಸಿದರೆ ವಿದ್ಯಾರ್ಥಿಯು ಉನ್ನತ ವ್ಯಕ್ತಿಯಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ, ಈಗಿನ ಕಾಲಘಟ್ಟದಲ್ಲಿ ಮೊಬೈಲ್ ಎಲ್ಲರನ್ನು ಆವರಿಸಿದೆ, ಮೊಬೈಲ್ ನಿಂದ ಮಕ್ಕಳು ದೂರವಿರುವಂತೆ ಪೋಷಕರು ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.ಪ್ರಾಥಮಿಕ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹಾಗೂ ಉತ್ತಮ ಹಾಜರಾತಿ ಇರುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಪುಟಾಣಿ ಮಕ್ಕಳ ನೃತ್ಯ ಎಲ್ಲರ ಗಮನ ಸೆಳೆಯಿತು.ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಶ್ರೀಶೈಲ, ಖಜಾಂಚಿ ಪಿ. ರವಿ, ಆಡಳಿತ ಅಧಿಕಾರಿ ಜೆ.ಸಿ. ನಟರಾಜ್, ನಿರ್ದೇಶಕ ಸಿ.ಟಿ. ಗುರುದತ್ತ, ವಿಜಯ್ ಕುಮಾರ್, ಕೃಷ್ಣಮೂರ್ತಿ, ಜ್ಞಾನಾನಂದ, ಸರೋಜಮ್ಮ, ಪಿಡಿಒ ಮಂಜುನಾಥ್, ಕಾರ್ಯದರ್ಶಿ ಪಾಂಡು, ಸಿಆರ್.ಪಿ. ಚಂದ್ರಶೇಖರ್, ಪುಟ್ಟಸ್ವಾಮಿ, ಚಿತ್ರ ಪೂರ್ಣಿಮಾ, ಕೌಸಲ್ಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಜಯಂತಿ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಮುರಳಿಕೃಷ್ಣ, ಕಾಲೇಜು ವಿಭಾಗ ಪ್ರಾಂಶುಪಾಲ ಎಸ್. ಸತೀಶ್, ಬೋಧಕ ಮತ್ತು ಬೋಧಕೇತರ, ಸಿಬ್ಬಂದಿ, ಗ್ರಾಮಸ್ಥರು ಹಾಗೂ ಪೋಷಕರು ಇದ್ದರು.