ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಸಾಮೂಹಿಕ ಗಣೇಶ ವಿಸರ್ಜನಾ ಶೋಭಾಯಾತ್ರೆ ಭಾನುವಾರ ಸಂಭ್ರಮದಿಂದ ಜರುಗಿತು.ಬಿಇಒ ಕಚೇರಿ ಆವರಣದ ಮಹಾ ಗಣಪತಿ ಶ್ರೀನಿವಾಸ ನಾಯಕ ಬಡಾವಣೆಯಲ್ಲಿ
ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಸೇರಿ ಎರಡೂ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಯಿಂದ ನೆರವೇರಿತು.ಪಟ್ಟಣದ ನುಂಕಿಮಲೆ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಜಂಟಿಯಾಗಿ ಮೆರವಣಿಗೆಗೆ ಚಾಲನೆ ನೀಡಿದರು.
ನುಂಕಿಮಲೆ ಸಿದ್ದೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಕೆಇಬಿ ವೃತ್ತ ದಾಟಿಕೊಂಡು ಮುಖ್ಯ ರಸ್ತೆಯಲ್ಲಿ ಸಾಗುತ್ತಾ ಬಸ್ ನಿಲ್ದಾಣ ಬಳಸಿಕೊಂಡು ಪಟ್ಟಣ ಪಂಚಾಯಿತಿ ವೃತ್ತದಿಂದ ದೊಡ್ಡ ಪೇಟೆಗೆ ತೆರಳಿ ಗಣಪತಿಗಳ ಧಾರ್ಮಿಕ ಪೂಜಾ ಕಾರ್ಯ ನೆರವೇರಿಸುವ ಮೂಲಕ ಕೋಟೆ ಬಡಾವಣೆಯ ಬಾವಿಯಲ್ಲಿ ವಿಸರ್ಜನೆ ನೆರವೇರಿಸಲಾಯಿತು.--
*ಡಿಜೆ ಇಲ್ಲದೆ ಸಪ್ಪೆಯಾಗಿದ್ದ ಮೆರವಣಿಗೆ: ಪ್ರತಿಬಾರಿ ಗಣೇಶ ವಿಸರ್ಜನೆ ವೇಳೆ ಡಿಜೆಯ ಭರ್ಜರಿ ಸಂಗೀತಕ್ಕೆ ಕುಣಿದು ಕುಪ್ಪಳಿಸುತ್ತಿದ್ದ ಯುವಕರ ದಂಡು ಈ ಬಾರಿಯ ಶೋಭಾಯಾತ್ರೆ ವೇಳೆ ವಿರಳವಾಗಿತ್ತು.ಡಿಜೆಯ ಸದ್ದು ಇಲ್ಲದೆ ಮೆರವಣಿಗೆ ಸಪ್ಪೆಯಂತೆ ಕಂಡು ಬಂತು. ಸಣ್ಣ ಧ್ವನಿವರ್ಧಕ ಸಂಗೀತ ಮತ್ತು ಡೊಳ್ಳು, ತಮಟೆಯ ಸದ್ದಿಗೆ ಕೆಲ ಯುವಕರು ಹೆಜ್ಜೆ ಹಾಕಿದರೆ. ಇನ್ನು ಕೆಲವರು ಸಪ್ಪೆ ಮೊರೆ ಹಾಕಿಕೊಂಡು ಮೆರವಣಿಗೆಯಲ್ಲಿ ಸಾಗಿದ್ದು ಸಾಮಾನ್ಯವಾಗಿ ಕಂಡು ಬಂತು. ಪಟ್ಟಣದ ತುಂಬೆಲ್ಲಾ ಕೇಸರಿ ಬಾವುಟಗಳು ರಾರಾಜಿಸಿದವು. ಕೇಸರಿ ಶಾಲುಗಳನ್ನು ಧರಿಸಿದ್ದ ಭಕ್ತರು ಗಣೇಶನಿಗೆ ಜೈಕಾರ ಹಾಕುತ್ತಾ ಸಾಗಿದ್ದು ವಿಶೇಷವಾಗಿ ಕಂಡುಬಂತು.
*ಪ್ರಸಾದದ ವ್ಯವಸ್ಥೆ: ಗಣೇಶ ವಿಸರ್ಜನೆಯ ಶೋಭಾಯಾತ್ರೆ ವೇಳೆ ಶೋಭಾ ಯಾತ್ರೆಯಲ್ಲಿ ಭಕ್ತರಿಗೆ ನೆರವಾಗಲು ಮುಖ್ಯ ರಸ್ತೆಯ ಇಕ್ಕೆಲೆಗಳ ಕೆಲವೆಡೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಇನ್ನು ಕೆಲವರು ನೀರಿನ ವ್ಯವಸ್ಥೆ ಮಾಡಿದ್ದರು. ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತು ಕೈಗೊಂಡಿದ್ದರು. ಪಟ್ಟಣದಲ್ಲಿ ಎಲ್ಲಿ ನೋಡಿದರೂ ಪೊಲೀಸರ ದಂಡು ಕಂಡು ಬಂತು. ಪೊಲೀಸರ ಬಿಗಿ ನಿಲುವುಗಳ ನಡುವೆ ಗಣೇಶ ವಿಸರ್ಜನಾ ಕಾರ್ಯ ಶಾಂತಿಯುತವಾಗಿ ಕೊನೆಗೊಂಡಿತು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀರಾಮರೆಡ್ಡಿ, ಮಲ್ಲೇಶ್, ನಿಕಟ ಪೂರ್ವ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ಇ.ರಾಮರೆಡ್ಡಿ, ಜೆಡಿಎಸ್ ಮುಖಂಡ ವೀರಭದ್ರಪ್ಪ, ಮುಖಂಡರಾದ ಚಂದ್ರ ಶೇಖರಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಮಾಜಿ ಅಧ್ಯಕ್ಷರಾದ ಲಕ್ಷ್ಮಣ, ಟಿ.ಟಿ.ರವಿಕುಮಾರ್, ಮುಖಂಡ ತಿಮ್ಮಪ್ಪ, ಯುವ ಮುಖಂಡ ಚಿತ್ರದುರ್ಗ ಸೋಮು, ನಾಯಕನಹಟ್ಟಿ ಶಿವಣ್ಣ, ತಿಮ್ಮಾಪುರ ಮೂರ್ತಿ, ರಾಮಸಾಗರ ತಿಪ್ಪೇಸ್ವಾಮಿ, ಹರೀಶ್ ಕಡೆತೋಟ, ಮೊಗಲ ಹಳ್ಳಿ ಸಿದ್ಧಾರ್ಥ, ಪ್ರಭಾಕರ, ಮಂಜಣ್ಣ, ದೇವಸಮುದ್ರ ಚಂದ್ರಣ್ಣ, ಎಂ.ವೈ.ಟಿ ಸ್ವಾಮಿ, ಪಾಪೇಶ್ ನಾಯಕ ಇದ್ದರು.
ಡಿಜೆ ಅನುಮತಿಗಾಗಿ ಮಾಜಿ ಸಚಿವ ಶ್ರೀರಾಮುಲು ಪ್ರತಿಭಟನೆ:
ಮಹಾಗಣಪತಿ ವಿಸರ್ಜನೆ ಮುನ್ನಾ ಮಾಜಿ ಸಚಿವ ಬಿ.ಶ್ರೀರಾಮುಲು ಡಿಜೆ ಅನುಮತಿಗಾಗಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.ನುಂಕಪ್ಪನ ದೇವಸ್ಥಾನ ಮುಂಭಾಗದ ಮುಖ್ಯರಸ್ತೆಯಲ್ಲಿ ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯುವಕರು, ಯುವತಿಯರು ರಾಮುಲು ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿ ಬೇಕೇ ಬೇಕು ಡಿಜೆ ಬೇಕು ಎಂದು ಘೋಷಣೆ ಕೂಗುತ್ತಾ ಪಟ್ಟು ಹಿಡಿದರು. ಈ ವೇಳೆ ಪೊಲೀಸರು ರಾಮುಲು ಅವರನ್ನು ಮನವೊಲಿಸುವ ಯತ್ನ ನಡೆಸಿದರು.
ಎರಡು ಬಾಕ್ಸ್ ಗಳಿಗೆ ಅನುಮತಿ ನೀಡುವಂತೆ ಪಟ್ಟು ಹಿಡಿದರೂ ಜಗ್ಗದ ಪೊಲೀಸರ ಕ್ರಮಕ್ಕೆ ರೊಚ್ಚಿಗೆದ್ದ ರಾಮುಲು ಏನು ಮಾಡುತ್ತೀರಾ ಮಾಡಿ ನಾನು ಇಲ್ಲೇ ಕುಳಿತುಕೊಳ್ಳುತ್ತೇನೆಂದು ಆಕ್ರೋಶಗೊಂಡರು. ತೀವ್ರ ಪ್ರತಿಭಟನೆಗೆ ಮಣಿದ ಪೊಲೀಸ್ ಇಲಾಖೆ ಎರಡು ಸ್ಪೀಕರ್‌ಗಳನ್ನು ತರಿಸಿ ಸಹಕರಿಸುವಂತೆ ಮನವಿ ಮಾಡಿದಾಗ ಸ್ವತಃ ಶ್ರೀರಾಮುಲು ಗಣೇಶ ಮೂರ್ತಿಯ ಹೊತ್ತ ಟ್ರಾಕ್ಟರ್‌ಗೆ ಚಾಲಕರಾಗಿ ಮೆರವಣಿಗೆಗೆ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಶ್ರೀರಾಮುಲು, ರಾಜ್ಯ ಸರ್ಕಾರ ಗಣಪತಿ ವಿಸರ್ಜನೆ ವೇಳೆ ಡಿಜೆಗೆ ಅನುಮತಿ ನೀಡದೆ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದೆ. ಇದೊಂದು ಜನವಿರೋಧಿ ಸರ್ಕಾರ ಪಕ್ಷ ಬೇಧ ಮರೆತು ಸಾಮರಸ್ಯದಿಂದ ಆಚರಿಸುವ ಗಣೇಶ ಹಬ್ಬದ ಸಂಭ್ರಮವನ್ನು ಕಸಿದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಗಣೇಶನ ಶಾಪ ತಟ್ಟಲಿದೆ ಎಂದು ವಾಗ್ದಾಳಿ ನಡೆಸಿದರು.