ಧಾರವಾಡ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಸ್ಥರಿಗೆ ತಮ್ಮ ಮಕ್ಕಳ ವಿವಾಹ ಮಾಡಲು ಕಷ್ಟಸಾಧ್ಯ. ಅಂತಹ ಕುಟುಂಬಗಳಿಗೆ ಸಾಮಾಜಿಕ ಸಂಘ-ಸಂಸ್ಥೆಗಳು ಉಚಿತ ವಿವಾಹದಂತಹ ಅವಕಾಶ ನೀಡಿದರೆ ಉತ್ತಮ ಎಂದು ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ವೀಣಾ ಹೊಸಮನಿ ಹೇಳಿದರು.

ಇಲ್ಲಿಯ ಚರಂತಿಮಠ ಗಾರ್ಡನ್‌ಲ್ಲಿರುವ ಬನಶಂಕರಿ ಭವನ ನೆರವೇರಿದ ಉಚಿತ ವಿವಾಹ, ಸಾಧಕರಿಗೆ ಗೌರವ ಮತ್ತು ವಿವಿಧ ಮಹಿಳಾ ಮಂಡಳಗಳಿಗೆ ಬನಶ್ರೀ ಪ್ರಶಸ್ತಿ ಪ್ರದಾನದಲ್ಲಿ ಅವರು ಮಾತನಾಡಿ, ಆರ್ಥಿಕ ಸ್ಥಿತಿವಂತರೆಲ್ಲರೂ ಸೇರಿ ಪ್ರತಿ ವರ್ಷಕ್ಕೊಮ್ಮೆ ಉಚಿತ ವಿವಾಹ ಕಾರ್ಯಕ್ರಮ ಆಯೋಜಿಸಿದರೆ ಬಡ ಕುಟುಂಬಸ್ಥರಿಗೆ ಅನುಕೂಲವಾಗಲಿದೆ ಎಂದರು.

ಬನಶಂಕರಿ ಭವನ ಅಧ್ಯಕ್ಷ ಶಿವಾನಂದ ಲೋಲೆನವರ ಅಧ್ಯಕ್ಷತೆ ವಹಿಸಿ, ವರ್ಷದುದ್ದಕ್ಕೂ ನಮ್ಮ ಭವನದಲ್ಲಿ ಅನೇಕ ವಿಧದ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿದ್ಯಾರ್ಥಿ ಪುರಸ್ಕಾರ, ಶಿಷ್ಯವೇತನ, ಆಟೋ ಚಾಲಕರಿಗೆ ಗ್ರಹ ಉಪಯೋಗಿ ವಸ್ತು ವಿತರಣೆ, ಸರ್ಕಾರಿ ಶಾಲೆಗಳಿಗೆ ಅವಶ್ಯವಿರುವ ಸೌಲಭ್ಯ ಒದಗಿಸಿಕೊಡುವುದು ಹಾಗೂ ಸಾಧಕರಿಗೆ ಸನ್ಮಾನ ಮಾಡಲಾಗುತ್ತಿದೆ ಎಂದರು.

ಡಾ. ಮಾಧುರಿ ಕಬಾಡಿ ಪೂಜಾರಿ, ಡಾ. ರಾಮಚಂದ್ರ ಹೆಗಡೆ, ಡಾ. ಬಸವರಾಜ ಹೊಂಗಲ ಇದ್ದರು. ಡಾ. ಶ್ರೀವತ್ಸ ನವಲೂರಗೆ ಸನ್ಮಾನಿಸಲಾಯಿತು. ಸಾಧಕ ಪತ್ರಕರ್ತರಿಗೆ ಸನ್ಮಾನ ಹಾಗೂ ವಿವಿಧ ಮಹಿಳಾ ಮಂಡಳಗಳಿಗೆ ಬನಶ್ರೀ ಪ್ರಶಸ್ತಿ ನೀಡಲಾಯಿತು. ಸಂಗೀತಾ ಮಠಪತಿ ನಿರೂಪಿಸಿದರು. ರವಿಕುಮಾರ ಸ್ವಾಗತಿಸಿದರು. ರಾಘವೇಂದ್ರ ವಂದಿಸಿದರು.