ಸಾಮೂಹಿಕ ವಿವಾಹ ಬಡ, ಮಧ್ಯಮ ವರ್ಗಕ್ಕೆ ವರದಾನ

| Published : Jul 01 2024, 01:49 AM IST

ಸಾರಾಂಶ

ಬೆಲೆ ಏರಿಕೆಯ ಇಂದಿನ ದುಬಾರಿ ದಿನಗಳಲ್ಲಿ ಬಡ, ಮಧ್ಯಮ ವರ್ಗಕ್ಕೆ ಸರಳ ಸಾಮೂಹಿಕ ವಿವಾಹಗಳು ವರದಾನವಾಗಿವೆ. ಇಂತಹ ಸಾಮೂಹಿಕ ವಿವಾಹಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಹಿರಿಯ ಹೋಟೆಲ್ ಉದ್ಯಮಿ ಪ್ರಭಾಕರ ಶೆಟ್ಟಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಡಾ.ಅಂಬೇಡ್ಕರ್‌, ಬಾಬು ಜಗಜೀವನರಾಂ ಜಯಂತಿ ಅಂಗವಾಗಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪ್ರಭಾಕರ ಶೆಟ್ಟಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಬೆಲೆ ಏರಿಕೆಯ ಇಂದಿನ ದುಬಾರಿ ದಿನಗಳಲ್ಲಿ ಬಡ, ಮಧ್ಯಮ ವರ್ಗಕ್ಕೆ ಸರಳ ಸಾಮೂಹಿಕ ವಿವಾಹಗಳು ವರದಾನವಾಗಿವೆ. ಇಂತಹ ಸಾಮೂಹಿಕ ವಿವಾಹಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಹಿರಿಯ ಹೋಟೆಲ್ ಉದ್ಯಮಿ ಪ್ರಭಾಕರ ಶೆಟ್ಟಿ ಹೇಳಿದರು.

ನಗರದ ರೋಟರಿ ಬಾಲಭ‍ವನ ಹಿಂಭಾಗದ ಶ್ರೀ ಕೇಶವಮೂರ್ತಿ ಸಭಾಂಗಣದಲ್ಲಿ ಭಾನುವಾರ ಬಹುಜನ ಸಮಾಜ ಸೇವಾ ಸಂಘದಿಂದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ ಹಾಗೂ ಬಾಬು ಜಗಜೀವನರಾಂ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ 6ನೇ ವರ್ಷದ ಸರಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮಾಂಗಲ್ಯ ವಿತರಿಸಿ ಅವರು ಮಾತನಾಡಿದರು.

ಅದೆಷ್ಟೋ ಕುಟುಂಬಗಳು ತಮ್ಮ ಆರ್ಥಿಕ ಸ್ಥಿತಿಗತಿ ಲೆಕ್ಕಿಸದೇ, ಸಾಲ ಮಾಡಿಯಾದರೂ ಅದ್ಧೂರಿಯಾಗಿ ಮಕ್ಕಳ ಮದುವೆಯನ್ನು ಮಾಡಿ, ಸಾಲದ ಶೂಲಕ್ಕೆ ಸಿಲುಕುತ್ತಿವೆ. ಮದುವೆ ಹೆಸರಿನಲ್ಲಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ, ಹೆಣ್ಣು ಹೆತ್ತವರ ಆರ್ಥಿಕ ಹೊರೆ ತಪ್ಪಿಸುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹಗಳ ಪಾತ್ರ ಮಹತ್ವದ್ದಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಷ್ಟೇ ಸರಳವಾಗಿ ಮದುವೆ ಮಾಡುತ್ತೇವೆಂದರೂ ಕನಿಷ್ಠ ₹1.5ರಿಂದ ₹2 ಲಕ್ಷ ಖರ್ಚು ಮಾಡಬೇಕಾದ ಸ್ಥಿತಿ ಇದೆ ಎಂದು ತಿಳಿಸಿದರು.

ಬಹುಜನ ಸಮಾಜ ಸೇವಾ ಸಂಘ ಜಿಲ್ಲಾಧ್ಯಕ್ಷ ಎಂ.ಆಂಜನೇಯ ಮಾತನಾಡಿ, 6 ವರ್ಷದಿಂದಲೂ ಸಂಘಟನೆಯಿಂದ ಸರಳ ಸಾಮೂಹಿಕ ವಿವಾಹ ನಡೆಸುತ್ತಾ ಬಂದಿದ್ದೇವೆ. ಪ್ರತಿ ವರ್ಷ 15-20 ಜೋಡಿಗಳು ದಾಂಪತ್ಯ ಜೀವನಕ್ಕೆ ಅಡಿ ಇಡುತ್ತಿದ್ದವು. ಈ ಸಲ 6 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ ಎಂದರು.

ನವ ಜೋಡಿಗಳು ಆದರ್ಶ ಬಾಳು ಬಾಳಬೇಕು. ಇತರರಿಗೂ ಮಾದರಿ ಆಗುವಂತೆ ಜೀವನ ನಡೆಸಬೇಕು. ಕಷ್ಟ-ಸುಖ, ನೋವು, ನಲಿವು ಪ್ರತಿಯೊಬ್ಬರ ಬದುಕಿನಲ್ಲೂ ಸಹಜ. ನವದಂಪತಿ ಪರಸ್ಪರರನ್ನು ಅರಿತು ಬಾಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶದ ಸತ್ಪ್ರಜೆಗಳನ್ನಾಗಿ ಬೆಳೆಸಬೇಕು. ಶಿಕ್ಷಣ, ಸಂಘಟನೆ, ಹೋರಾಟವೆಂಬ ತತ್ವವನ್ನು ನಿಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.

ಸೇವಾ ಸಂಘದ ಗೌರವಾಧ್ಯಕ್ಷ ಹೆಗ್ಗೆರೆ ರಂಗಪ್ಪ ಮಾತನಾಡಿ, ಅಂಬೇಡ್ಕರ್‌ ಹಾಗೂ ಜಗಜೀವನರಾಮ್‌ ಜಯಂತಿ ಅಂಗವಾಗಿ ಪ್ರತಿವರ್ಷ ಸಂಘಟನೆ ಸರಳ ಸಾಮೂಹಿಕ ವಿವಾಹ ಆಚರಿಸುತ್ತಾ ಬಂದಿದೆ. ಬಡ, ಗ್ರಾಮೀಣ ಕುಟುಂಬಗಳು, ಮಧ್ಯಮ ವರ್ಗದ ಕುಟುಂಬಗಳ ಹೆಣ್ಣು ಹೆತ್ತವರಿಗೆ ಸಾಮೂಹಿಕ ವಿವಾಹಗಳು ಆಸರೆಯಾಗಿವೆ. ನಗರ, ಗ್ರಾಮೀಣ ಪ್ರದೇಶವೆನ್ನದೇ ಎಲ್ಲಾ ಕಡೆಗಳಲ್ಲೂ ಸಾಮೂಹಿಕ ವಿವಾಹಗಳ ಸಂಖ್ಯೆಯೂ ಹೆಚ್ಚಾಗಬೇಕಿದೆ ಎಂದರು.

ಸಂಘದ ಮುಖಂಡರಾದ ಜಗಳೂರು ಕುಬೇರಪ್ಪ, ಹರಿಹರದ ನಾಗೇಂದ್ರಪ್ಪ, ಹಿಂಡಸಘಟ್ಟ ಹನುಮಂತಪ್ಪ ಇತರರು ಇದ್ದರು. ಇದೇ ವೇಳೆ ಹೆಗ್ಗೆರೆ ರಂಗಪ್ಪ ಕ್ರಾಂತಿ ಗೀತೆ ಹಾಡಿದರು.

- - -

ಕೋಟ್‌

ಇಂದಿನ ದುಬಾರಿ ದುನಿಯಾದಲ್ಲಿ, ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಸಂಘ-ಸಂಸ್ಥೆಗಳು, ಸಂಘಟನೆಗಳು, ಧಾರ್ಮಿಕ ಸಂಸ್ಥೆಗಳು, ದಾನಿಗಳು ಮಾನವೀಯ ಸೇವಾ ಕಾರ್ಯದ ಭಾಗವಾಗಿ ಸರಳ, ಸಾಮೂಹಿಕ ವಿವಾಹ ಆಯೋಜಿಸುವ ಮೂಲಕ ಹೆಣ್ಣು ಹೆತ್ತವರ ಆರ್ಥಿಕ ಹೊರೆ ಇಳಿಸುವ ಕೆಲಸವನ್ನು ಮಾಡುತ್ತಿವೆ. ಹೀಗೆ ಸರಳ ಸಾಮೂಹಿಕ ವಿವಾಹಗಳ ಸಂಖ್ಯೆ ಹೆಚ್ಚಾಗಬೇಕಿದೆ

- ಪ್ರಭಾಕರ ಶೆಟ್ಟಿ, ಹೋಟೆಲ್‌ ಉದ್ಯಮಿ

- - - -30ಕೆಡಿವಿಜಿ1, 2:

ದಾವಣಗೆರೆಯಲ್ಲಿ ಭಾನುವಾರ ಬಹುಜನ ಸಮಾಜ ಸೇವಾ ಸಂಘದಿಂದ ಡಾ.ಅಂಬೇಡ್ಕರ್‌ ಹಾಗೂ ಡಾ.ಬಾಬು ಜಗಜೀವನರಾಂ ಜಯಂತಿ ಅಂಗವಾಗಿ ಸರಳ ಸಾಮೂಹಿಕ ವಿವಾಹ ಮಹೋತ್ಸವ ನಡೆಯಿತು.