ಕನ್ನಡಪ್ರಭ ವಾರ್ತೆ ಇಳಕಲ್ಲ

ಇಂದು ನೀವು ಶರಣ ಬಸವೇಶ್ವರ ದೇವರ ಸನ್ನಿಧಿಯಲ್ಲಿ ಮಾಡಿಕೊಂಡ ವಿವಾಹ ಭಾಗ್ಯವಂತರ ವಿವಾಹ ಎಂದು ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು ತಿಳಿಸಿದರು.

ಇಳಕಲ್ಲ ತಾಲೂಕಿನ ಚಿಕ್ಕಶಿವನಗುತ್ತಿ ಗ್ರಾಮದಲ್ಲಿಯ ಶರಣಬಸವೇಶ್ವರ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಈ ಸಮಾರಂಭದಲ್ಲಿ ಮದುವೆ ಆಗುತ್ತಿರುವ ನೀವು ಅತಿ ಪುಣ್ಯವಂತರು. ಕಾರಣ ನಿಮ್ಮ ಮದುವೆಗೆ ದೇವಸ್ಥಾನ ಸಾಕ್ಷಿ, ಹರಗುರ ಚರಮೂರ್ತಿಗಳು, ಗಣ್ಯಾತಿ ಗಣ್ಯರು ಮತ್ತು ಪ್ರೀತಿಯಿಂದ ಹಾರೈಸಲು ಬಂದ ಜನತೆ ಸಾಕ್ಷಿಯಾಗಿದ್ದಾರೆ. ಇಲ್ಲಿ ಸೇರಿದ ಅಪಾರ ಜನಸಮೂಹ ನೋಡಿ, ನಿಮ್ಮ ಮನೆಯ ಮುಂದೆ ಮದುವೆ ಸಮಾರಂಭ ಮಾಡಿಕೊಂಡಿದ್ದರೂ ಇಷ್ಟು ಜನ ಸೇರುತ್ತಿರಲಿಲ್ಲ. ನಿಮ್ಮ ಸಂಸಾರ ಚಿಕ್ಕ ಸಂಸಾರ ಚೊಕ್ಕ ಸಂಸಾರ ಆಗಿರಲಿ. ನಿಮ್ಮ ಬಾಳು ಬಂಗಾರವಾಗಲಿ, ಮದುವೆಯಾಗುವ ಹೆಣ್ಣು ಗಂಡನ ತಂದೆ ತಾಯಿಯನ್ನು ಅತ್ತೆ ಮಾವ ಎಂದು ಕರೆಯದೆ ಅಪ್ಪ ಅವ್ವ ಎಂದು ಕರೆಯಬೇಕು ಎಂದು ತಿಳಿಸಿ, ಹೆಣ್ಣು ಕುಟುಂಬದ ಕಣ್ಣಾಗಬೇಕು ಎಂದು ಕಿವಿಮಾತು ಹೇಳಿದರು.

ಜಾತ್ರಾ ಮಹೋತ್ಸವ ನಿಮಿತ್ತ ಶರಣ ಬಸವೇಶ್ವರ ದೇವರ ಮೂರ್ತಿಗೆ ಮಹಾ ರುದ್ರಾಭಿಷೇಕ ಮಾಡಲಾಯಿತು. ನಂತರ ಮಹಾ ಮಂಗಳಾರತಿ, ಮಹಾಪ್ರಸಾದ ನಡೆಯಿತು. ನಂತರ ಸಂಜೆ ೬ ಗಂಟೆಗೆ ಸರಿಯಾಗಿ ಶರಣ ಬಸವೇಶ್ವರ ರತೋಥ್ಸವ ವೈಭವದಿಂದ ಜರುಗಿತು. ಇದೇ ವೇಳೆ ಹತ್ತು ದಿನಗಳವರೆಗೆ ನಿರಂತರ ಪ್ರವಚನ ಮಾಡಿದ ಪ್ರವಚನಕಾರ್ತಿ ಎಸ್. ಅಕ್ಕಮಾಹಾದೇವಿ, ಸಂಗಿತ ವಾದಕ ಎಸ್. ಉಮಾಪತಿ, ತಬಲಾ ವಾದಕ ವಿರೇಶ ಕಮ್ಮಾರ ಹಾಗು ದಾನಿಗಳಾದ ಶಾಸಕ ವಿಜಯಾನಂದ ಕಾಶಪ್ಪನವರ, ಶಿವಣ್ಣ ಗೊಂದಿ, ಮಲ್ಲಪ್ಪ ಕೂಡ್ಲಪ್ಪನವರ, ಮಹಾಂತೇಶ ಅಂಗಡಿ ಇತರರನ್ನು ಸತ್ಕರಿಸಲಾಯಿತು.