ಸಾರಾಂಶ
ಗದಗ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರಶರಣರ ಮಠದಲ್ಲಿ ಚನ್ನವೀರಶರಣರ 30ನೇ ಪುಣ್ಯಸ್ಮರಣೋತ್ಸವ ಜಾತ್ರಾಮಹೋತ್ಸವದ ಅಂಗವಾಗಿ ಮಂಗಳವಾರ ಸಾಮೂಹಿಕ ವಿವಾಹ ಕಲ್ಯಾಣ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿದವು.
ಇದೇ ಸಂದರ್ಭದಲ್ಲಿ ಸಾನ್ನಿಧ್ಯ ವಹಿಸಿದ್ದ ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ದುಂದುವೆಚ್ಚದ ಮದುವೆಗೆ ನಮ್ಮ ಜನರು ಆಸ್ತಿ, ಬಂಗಾರ, ಹಣ ಕಳೆದುಕೊಂಡು ಹಣಕಾಸಿನ ತೊಂದರೆ ಅನುಭವಿಸುತ್ತಾರೆ. ಹೊಲ, ಮನೆ ಮೇಲೆ ಸಾಲ ಮಾಡಿ ಸೂಲದಲ್ಲಿ ಸಿಲುಕುತ್ತಾರೆ. ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ನೆಮ್ಮದಿಯ ಬದುಕಿಗೆ ಸಹಾಯವಾಗುವುದು. ಚನ್ನವೀರಶರಣರು ಶಿವಯೋಗಿಗಳಾಗಿದ್ದು, ತ್ರಿಕಾಲಜ್ಞಾನಿಗಳಾಗಿದ್ದವರು ಎಂದರು.ಕನಕಗಿರಿಯ ಸುವರ್ಣಗಿರಿ ವಿರಕ್ತಮಠದ ಡಾ.ಚನ್ನಮಲ್ಲ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮನುಷ್ಯ ಜನ್ಮ ಹೊತ್ತು ಭೂಮಿಗೆ ಬಂದ ನಾವು ಸಮಾಜಕ್ಕೆ ವಿಶೇಷ ಕೊಡುಗೆ ನೀಡುವ ಕಾರ್ಯ ಮಾಡಬೇಕು. ಸಮಾಜದಲ್ಲಿ ಸರ್ವರನ್ನೂ ಪ್ರೀತಿಸುವ ಸರ್ವರ ಬಗ್ಗೆ ಅಂತಃಕರಣ ಹೊಂದಿರಬೇಕು. ಸಮಾಜವೇ ನನ್ನ ಕುಟುಂಬ ಎಂದು ನಂಬಿ ಬಾಳಿದವರು ಶರಣರು. ಅವರ ನುಡಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜೀವನದ ಸಾರ್ಥಕತೆ ಹೆಚ್ಚಿಸಿಕೊಳ್ಳಬೇಕು, ತನ್ನನ್ನು ತಾನು ಅರಿತು ನಡೆಯುವುದೇ ಜೀವನದಲ್ಲಿ ಶ್ರೇಷ್ಠತೆ ಅಡಗಿದೆ ಎಂದರು.
ಮುದಗಲ್ಲ ಮಹಾಂತಸ್ವಾಮೀಜಿ ಮಾತನಾಡಿ, ವಿವಾಹ ಕಲ್ಯಾಣ ಮಹೋತ್ಸವದಲ್ಲಿ ವಿವಾಹವಾದ ದಂಪತಿಗಳು ಭಾಗ್ಯಶಾಲಿಗಳು. ಶರಣರ ಭಕ್ತಿ ಪರಂಪರೆ ಬೆಳೆಸಿಕೊಂಡು ಶರಣ ಧರ್ಮದ ಜೀವನ ನಿರ್ವಹಿಸಿ ದಾಂಪತ್ಯ ಧರ್ಮ ಪಾಲಿಸಲು ತಿಳಿಸಿದರು.ಇದೇ ಸಂದರ್ಭದಲ್ಲಿ ಅರಹುಣಸಿಯ ನಿವೃತ್ತ ಶಿಕ್ಷಕ ದಿ.ಕೆ.ಬಿ. ಕಂಬಳಿ ವಿರಚಿತ ಶ್ರೀ ಚನ್ನವೀರ ಶರಣರ ಲೀಲಾಮೃತ ಮೌನಯೋಗಿ 4ನೇ ಮುದ್ರಣ ಗ್ರಂಥ ಲೋಕಾರ್ಪಣೆಗೊಳಿಸಲಾಯಿತು.
ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ನಾಟಕಕಾರ ಗುಂಡೂರಿನ ಎಸ್.ವಿ. ಪಾಟೀಲ ಅವರಿಗೆ ಶರಣರಮಠ ಬಳಗಾನೂರ ಹಾಗೂ ಸಿದ್ದಲಿಂಗನಗೌಡ ಎಸ್.ಜಂಗ್ಲೆಪ್ಪಗೌಡ್ರ ಮೆಮೋರಿಯಲ್ ಉಮಾ ವಿದ್ಯಾಶ್ರೀ ಟ್ರಸ್ಟ್ ನವಲಗುಂದ ಸಹಯೋಗದಲ್ಲಿ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಪ್ರಶಸ್ತಿ ಪುರಸ್ಕೃತ ಎಸ್.ವಿ. ಪಾಟೀಲ ತಮ್ಮ ಅಭಿಪ್ರಾಯ ಹಂಚಿಕೊಂಡರು. ಹಿರೇಮಾಗಡಿಯ ಶಿವಮೂರ್ತಿ ಮುರಘರಾಜೇಂದ್ರ ಮಹಾಸ್ವಾಮಿಗಳು ಸನ್ನಿಧಾನ ವಹಿಸಿದ್ದರು. ಶಿವಪ್ರಕಾಶ ಶರಣರು ಶಿವಯೋಗಿ ದೇವರು ವೇದಿಕೆಯಲ್ಲಿದ್ದರು.ಇದೇ ಸಂದರ್ಭದಲ್ಲಿ ಭಕ್ತರಿಂದ ಶಿವಶಾಂತವೀರ ಶರಣರ ತುಲಾಭಾರ ಜರುಗಿತು.
ಶರಣರ ವಿದ್ಯಾಪೀಠದ ಮಕ್ಕಳಿಂದ ಯೋಗ ಪ್ರದರ್ಶನ, ಉಡುಪಿಯ ಸ್ವರ ಚಿತ್ತಾರ ಕಲರ್ಸ್ ಕನ್ನಡ ಖ್ಯಾತಿಯ ಕಲಾಸಿಂಧು ಕಲಾವತಿ ದಯಾನಂದ ಹಾಗೂ ತಂಡದವರಿಂದ ಜರುಗಿದ ಭಕ್ತಿ ರಸಮಂಜರಿ ಜರುಗಿತು. ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲಅನ್ವರಿ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಜಿಪಂ ಮಾಜಿ ಸದಸ್ಯ ಹಾಲಪ್ಪ ಗಾದಿಗನೂರ, ಭೀಮಸಿಂಗ ರಾಠೋಡ, ಪಿ.ಸಿ. ಹಿರೇಮಠ ವೇದಿಕೆಯಲ್ಲಿದ್ದರು.ಬೆಂಗಳೂರಿನ ಗೀತಾ ಭತ್ತದ ಹಾಗೂ ತಂಡದವರಿಂದ ಸಂಗೀತ ಸೇವೆ ಜರುಗಿತು. ಬಿ.ವೈ.ಡೊಳ್ಳಿನ ಶರಣಶ್ರೀ ಪ್ರಶಸ್ತಿ ವಾಚನ ಮಾಡಿದರು. ಶಿವಲಿಂಗಶಾಸ್ತ್ರಿ ಸಿದ್ದಾಪುರ ಸ್ವಾಗತಿಸಿದರು. ಬೆಂಗಳೂರಿನ ಆಕಾಶವಾಣಿ ನಿರೂಪಕಿ ಸವಿತಾ ಶಿವಕುಮಾರ ನಿರೂಪಿಸಿದರು. ಶಿವಶರಣಗೌಡ ಯರಡೋಣಿ ವಂದಿಸಿದರು. ಸಾಮೂಹಿಕ ವಿವಾಹದಲ್ಲಿ 39 ಜತೆ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.