ಬ್ಯಾಡಗಿಯಲ್ಲಿ ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ಸಾಮೂಹಿಕ ಅರ್ಜಿ ಸಲ್ಲಿಕೆ ಇಂದು

| Published : Aug 02 2025, 12:00 AM IST

ಬ್ಯಾಡಗಿಯಲ್ಲಿ ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ಸಾಮೂಹಿಕ ಅರ್ಜಿ ಸಲ್ಲಿಕೆ ಇಂದು
Share this Article
  • FB
  • TW
  • Linkdin
  • Email

ಸಾರಾಂಶ

ಬೆಳೆನಷ್ಟ ಪರಿಹಾರ ಹಾಗೂ ಬೆಳೆವಿಮೆಗೆ ಮಧ್ಯಂತರ ಪರಿಹಾರ ನೀಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆಯೊಂದಿಗೆ ಆ. 2ರಂದು ಬೆಳಗ್ಗೆ 10 ಗಂಟೆಗೆ ಅರ್ಜಿ ಸಲ್ಲಿಸಲಾಗುವುದು.

ಬ್ಯಾಡಗಿ: ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಕೂಡಲೇ ರಾಜ್ಯ ಸರ್ಕಾರ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಯೋಜನೆಯಡಿ ಬೆಳೆನಷ್ಟ ಪರಿಹಾರ ಹಾಗೂ ಬೆಳೆವಿಮೆ ಮಧ್ಯಂತರ ಪರಿಹಾರ ನೀಡುವಂತೆ ಆಗ್ರಹಿಸಿ ಆ. 2ರಂದು ರೈತರು ಸಾಮೂಹಿಕವಾಗಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಹಾರ ಪಡೆದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸಾಮೂಹಿಕ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದು, ಬೆಳೆಹಾನಿಯಾದ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ರೈತ ಸಂಘದ ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆಗಳನ್ನು ಸಿದ್ಧಪಡಿಸಿದ್ದು ಎಲ್ಲ ರೈತರು ಇದನ್ನು ಪಡೆದುಕೊಂಡು ಅರ್ಜಿ ಸಲ್ಲಿಸಬಹುದು ಎಂದರು.

ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 75ರಷ್ಟು ಹೆಚ್ಚು ಮಳೆಯಾಗಿದೆ. ಈ ಕುರಿತು ಸರ್ಕಾರದ ಬಳಿ ದಾಖಲೆಗಳಿವೆ. ಪ್ರಸ್ತುತ ವರ್ಷ ಎರಡೆರಡು ಬಾರಿ ಬಿತ್ತನೆ ಮಾಡಲಾಗಿದೆ. ಅದಾಗ್ಯೂ ಕೈಬಿಡದೇ ಬೆಂಬತ್ತಿರುವ ಮಳೆಯು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಕೆಲವೆಡೆಗಳಲ್ಲಿ ಇನ್ನೂ ಹೊಲಗಳಿಗೆ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ನಷ್ಟಕ್ಕೊಳಗಾಗಿರುವ ರೈತರ ನೆರವಿಗೆ ಧಾವಿಸುವಂತೆ ಆಗ್ರಹಿಸಿದರು.ಕೃಷಿ ಸಚಿವರನ್ನು ಹುಡುಕಿಕೊಡಿ: ಗಂಗಣ್ಣ ಎಲಿ ಮಾತನಾಡಿ, ರಾಜ್ಯದ ಕೃಷಿ ಸಚಿವ ರಣಹೇಡಿಯಾಗಿದ್ದಾರೆ. ಮಂತ್ರಿಯಾದ ಮೇಲೆ ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಯಾವುದೇ ಜಿಲ್ಲೆಗೆ ಬಂದು ಹೋಗಿರುವ ಅಥವಾ ಅವರ ಸಮಸ್ಯೆಗಳಿಗೆ ಸ್ಪಂದಿಸಿದ ಉದಾಹರಣೆಗಳಿಲ್ಲ. ರಾಜ್ಯದಲ್ಲೇ ಅತಿ ಹೆಚ್ಚು ರೈತರು ಹಾವೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇಲ್ಲಿಯವರೆಗೂ ಸಚಿವರು ಭೇಟಿ ನೀಡಿಲ್ಲ ಎಂದು ಟೀಕಿಸಿದರು.ತಾಲೂಕು ಘಟಕದ ಕಾರ್ಯಾಧ್ಯಕ್ಷ ಮೌನೇಶ ಕಮ್ಮಾರ ಮಾತನಾಡಿ, ಬೆಳೆನಷ್ಟ ಪರಿಹಾರ ಹಾಗೂ ಬೆಳೆವಿಮೆಗೆ ಮಧ್ಯಂತರ ಪರಿಹಾರ ನೀಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆಯೊಂದಿಗೆ ಆ. 2ರಂದು ಬೆಳಗ್ಗೆ 10 ಗಂಟೆಗೆ ಅರ್ಜಿ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಚಿಕ್ಕಪ್ಪ ಛತ್ರದ, ಡಾ. ಕೆ.ವಿ. ದೊಡ್ಡಗೌಡ್ರ, ಬಸವರಾಜ ಕುಮ್ಮೂರ, ಶಿವರುದ್ರಪ್ಪ ಮೂಡೇರ, ಫಕ್ಕೀರೇಶ ಹಿರೇಹಳ್ಳಿ ಇತರರು ಇದ್ದರು.