ಸಾರಾಂಶ
ರಾಣಿಬೆನ್ನೂರು: ನಗರದ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಬುಧವಾರ ಸಾರ್ವಜನಿಕ ಗಣೇಶ ಮೂರ್ತಿಗಳ ಸಾಮೂಹಿಕ ಶೋಭಾಯಾತ್ರೆ ಅದ್ಧೂರಿಯಾಗಿ ಜರುಗಿತು.
ನಗರದ ಪೋಸ್ಟ್ ಸರ್ಕಲ್ ಬಳಿ ವಿರಾಟ ಹಿಂದೂ ಮಹಾಸಭಾ ಸಮಿತಿಯ ಗಣೇಶ, ಮೆಡ್ಲೇರಿ ರಸ್ತೆ ಗಂಗಾಜಲ ಚೌಡೇಶ್ವರಿ ದೇವಸ್ಥಾನದ ಬಳಿಯ ಅನ್ನದಾತ ಸಂಸ್ಥೆಯ ಗಣೇಶ ಹಾಗೂ ಕಾಕಿ ಗಲ್ಲಿಯ ವಿಜಯಲಕ್ಷ್ಮೀ ಹವ್ಯಾಸಿ ಕ್ರೀಡಾ ಸಂಘದ ಗಣೇಶ ಮೂರ್ತಿಗಳ ಶೋಭಾಯಾತ್ರೆಗೆ ಮಾಜಿ ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿದರು.ಈ ಸಮಯದಲ್ಲಿ ಮಾತನಾಡಿದ ಅವರು, ನಗರದಲ್ಲಿ ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಕೂಡಲ ಸಂಗಮದಲ್ಲಿ ಮೂರು ನದಿಗಳ ತ್ರಿವೇಣಿ ಸಂಗಮದಂತಾಗಿದೆ. ಈ ಬಾರಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಯಾವುದೇ ಜಾತಿ, ಮತ, ಪಂಥ ಹಾಗೂ ಭೇದ-ಭಾವ ಎನ್ನದೇ ಶೋಭಾಯಾತ್ರೆಯಲ್ಲಿ ಜನರು ಸೇರಿರುವುದು ನಾವೆಲ್ಲ ಒಂದು ಎನ್ನುವ ಭಾವನೆ ಮೂಡಿಸಿದೆ. ನಮ್ಮ ಧರ್ಮ, ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದರು.
ಮೆರವಣಿಗೆಯಲ್ಲಿ ಮಹಿಳೆಯರು ಮತ್ತು ಪುರುಷರ ನೃತ್ಯಕ್ಕಾಗಿ ಆಯೋಜಿಸಲಾಗಿದ್ದ ಪ್ರತ್ಯೇಕವಾಗಿ 6 ಡಿಜೆ ಸಂಗೀತ ಶೋಭಾಯಾತ್ರೆಯ ವಿಶೇಷ ಆಕರ್ಷಣೆಯಾಗಿದ್ದವು. ದಾರಿಯುದ್ದಕ್ಕೂ ಯುವ ಜನಾಂಗ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದರು. ಇನ್ನೂ ಮೆರವಣಿಗೆಯಲ್ಲಿ 11 ಜ್ಯೋತಿಲಿಂಗ ದೇವಸ್ಥಾನಗಳ ಕಲಾಕೃತಿಗಳು, ಸಂಗೊಳ್ಳಿ ರಾಯಣ್ಣ, ಮಂತ್ರಾಲಯ ರಾಘವೇಂದ್ರ ಸ್ವಾಮೀಜಿ, ಭಾರತೆಮಾತೆ ಮೂರ್ತಿಗಳು ಮೆರವಣಿಗೆಯ ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ದಾರಿಯುದ್ದಕ್ಕೂ 30 ಸಾವಿರ ಜನರಿಗೆ ಊಟ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು.ನಗರದ ಅಂಚೆ ವೃತ್ತದಿಂದ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾದ ಶೋಭಾಯಾತ್ರೆ ಸಂಗಮ್ ವೃತ್ತ, ರಂಗನಾಥ ನಗರ, ಕುಂಬಾರ ಓಣಿ, ಸುಭಾಶ ಚೌಕ್, ದೊಡ್ಡಪೇಟೆ, ತಳವಾರ ಗಲ್ಲಿ, ಚಕ್ಕಿಮಿಕ್ಕಿ ಸರ್ಕಲ್, ಎಂ.ಜಿ. ರಸ್ತೆ, ದುರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಹಲಗೇರಿ ಕ್ರಾಸ್, ಬಸ್ ನಿಲ್ದಾಣಕ್ಕೆ ಬಂದು ಸೇರಿತ್ತು. ಆನಂತರ ಸಂಜೆ ಬಸ್ ನಿಲ್ದಾಣದ ಬಳಿ ಮಹಾ ಮಂಗಳಾರತಿ ಹಾಗೂ ವಿಶೇಷ ಸಿಡಿಮದ್ದು ಪ್ರದರ್ಶನ ನೆರೆದ ಲಕ್ಷಾಂತರ ಜನರ ಮಧ್ಯ ಬಹು ವಿಜೃಂಭಣೆಯಿಂದ ನೋಡುಗರ ಗಮನ ಸೆಳೆಯಿತು. ಇದಾದ ಆನಂತರ ಮೆರವಣಿಗೆಯು ಎನ್.ವಿ. ಹೋಟೆಲ್ ವರೆಗೆ ಸಾಗಿ, ಅಲ್ಲಿಂದ ಹರಿಹರ ಬಳಿ ತುಂಗಭದ್ರಾ ನದಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ವಿರಾಟ ಹಿಂದೂ ಸಮಿತಿ ಅಧ್ಯಕ್ಷ ನಾಗರಾಜ ಪವಾರ, ಅನ್ನದಾತ ಸಂಸ್ಥೆಯ ನಾಗರಾಜ ಸಾಲಗೇರಿ, ಕಾಕಿಗಲ್ಲಿಯ ಹವ್ಯಾಸಿ ಕ್ರೀಡಾ ಸಂಘದ ಅಧ್ಯಕ್ಷ ಲಿಂಗರಾಜ ಬೂದನೂರ, ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ, ಚೋಳಪ್ಪ ಕಸವಾಳ, ಸಿದ್ದು ಚಿಕ್ಕಬಿದರಿ, ಶ್ರೀನಿವಾಸ ಸುರಹೊನ್ನೆ, ಅಭಿಷೇಕ ಗೌಡಶಿವಣ್ಣನವರ, ರಾಜು ಬೂದನೂರ, ಪವನಕುಮಾರ ಮಲ್ಲಾಡದ, ಅಮೋಘ ಬಾದಾಮಿ, ಮಂಜುನಾಥ ಕಬ್ಬಿಣದ, ಮೈಲಪ್ಪ ಗೋಣಿಬಸಮ್ಮನವರ, ಮೌನೇಶ ತಳವಾರ, ಅಭಿಲಾಷ ಬಾದಾಮಿ, ಮೃತ್ಯುಂಜಯ ಕಾಕೋಳ, ಅಶೋಕ ಪಾಸಿಗಾರ, ಕೊಟ್ರೇಶ ಕಮದೋಡ, ಭಾರತಿ ಜಂಬಗಿ, ರಾಜು ಬಣಕಾರ, ಸುಜಾತಾ ಆರಾಧ್ಯಮಠ, ಭರಮಪ್ಪ ಪೂಜಾರ, ಕುಬೇರಪ್ಪ ಕೊಂಡಜ್ಜಿ, ಮಾಳಪ್ಪ ಪೂಜಾರ, ಬಸವರಾಜ ಹುಲ್ಲತ್ತಿ, ದಯಾನಂದ ಪಾಟೀಲ, ಮೃತ್ಯುಂಜಯ ಪಾಟೀಲ, ಜಗದೀಶ ಎಲಿಗಾರ, ಶಿವಕುಮಾರ ಹರ್ಕನಾಳ, ರವಿ ತಳವಾರ ಮತ್ತಿತರರಿದ್ದರು.