ರಂಜಾನ್ ಅಂಗವಾಗಿ ಶನಿವಾರ ಚಿತ್ರದುರ್ಗದ ಎಪಿಎಂಸಿ ಈದ್ಗಾದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೋಟೆನಾಡು ಚಿತ್ರದುರ್ಗದಲ್ಲಿ ಮುಸ್ಲಿಂ ಬಾಂಧವರು ಶನಿವಾರ ಸಾಮೂಹಿಕ ಪ್ರಾರ್ಥನೆ ನೆರವೇರಿಸುವುದರ ಮೂಲಕ ಪವಿತ್ರ ರಂಜಾನ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಏರುತ್ತಿರುವ ಬಿಸಿಲ ಪ್ರಖರ ಲೆಕ್ಕಿಸಿದೆ ಸಾಮೂಹಿಕ ಪುಟ್ಟ ಮಕ್ಕಳು ಪ್ರಾರ್ಥನೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.ಬೆಳಗ್ಗೆ ಏಳುವರೆ ಹೊತ್ತಿಗೆ ಶುಭ್ರ ಶ್ವೇತಧಾರಿಗಳಾಗಿ ಬೀದಿಗಿಳಿದ ಮುಸ್ಲಿಂ ಸಮುದಾಯದವರು ಗುಂಪು ಗುಂಪಾಗಿ ಈದ್ಗಾ ಮೈದಾನದ ಕಡೆ ಹೆಜ್ಜೆ ಹಾಕಿದರು. ದಾವಣಗೆರೆ ರಸ್ತೆಯಲ್ಲಿರುವ ಎಪಿಎಂಸಿ ಈದ್ಗಾದಲ್ಲಿ ಬೆಳಗ್ಗೆ ಎಂಟು ಗಂಟೆಗೆ ಪ್ರಾರ್ಥನೆ ಆರಂಭಗೊಂಡಿತು. ಚೇಳುಗುಡ್ಡದ ಕೊಹಿನೂರ್ ಈದ್ಗಾ, ಚಂದ್ರವಳ್ಳಿಯ ಈದ್ಗಾ ಮೈದಾನ ಸೇರಿದಂತೆ ಮೂರೂ ಕಡೆ ಮುಸ್ಲೀಂಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರತನಕ ಪ್ರಾರ್ಥನೆಯಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮನೆಯಿಂದಲೆ ಕೆಲವರು ಚಾಪೆ, ಬೆಡ್‍ಶೀಟ್, ಜಮಖಾನಗಳನ್ನು ತೆಗೆದುಕೊಂಡು ಹೋಗಿ ಮೈದಾನದಲ್ಲಿ ಹಾಸಿಕೊಂಡು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ದಾವಣಗೆರೆ ರಸ್ತೆಯ ಆಜಾದ್‍ಮಿಲ್ ಸಮೀಪ ರಸ್ತೆಯ ಎರಡು ಕಡೆ ಪೊಲೀಸ್ ಬ್ಯಾರಿಕೇಡ್‍ಗಳನ್ನಿಟ್ಟು ವಾಹನಗಳ ಸಂಚಾರವನ್ನು ನಿಯಂತ್ರಿಸಲಾಯಿತು.ಇದರಿಂದಾಗಿ ಬೆಂಗಳೂರು ಹಾಗೂ ದಾವಣಗೆರೆ ಕಡೆಯಿಂದ ಚಿತ್ರದುರ್ಗ ನಗರ ಪ್ರವೇಶಿಸುವ ವಾಹನಗಳ ಸಂಚಾರವನ್ನು ಬದಲಿಸಲಾಗಿತ್ತು. ದಾವಣಗೆರೆ ಕಡೆಯಿಂದ ಬರುವ ವಾಹನಗಳು ಹೊಸಪೇಟೆ ಕ್ರಾಸ್‌ಗೆ ಆಗಮಿಸಿ ನಂತರ ಜೆಸಿಆರ್ ಮುಖ್ಯ ರಸ್ತೆ ಮೂಲಕ ಸಾರಿಗೆ ನಿಲ್ದಾಣದ ಕಡೆ ಸಂಚರಿಸದವು. ಅದೇ ರೀತಿ ಬೆಂಗಳೂರು ಕಡೆಯಿಂದ ಬರುವ ವಾಹನಗಳು ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಜೆಸಿಆರ್ ಮೂಲಕ ಹೆದ್ದಾರಿ ತಲುಪಿದವು.
ಬೆಳಗ್ಗೆ ಪ್ರಾರ್ಥನೆ ಆರಂಭವಾದಾಗ ಬಿಸಿಲ ತಾಪ ನಿಧಾನವಾಗಿ ಏರುತ್ತಿತ್ತು. ಬಹುತೇಕರು ತಲೆಯ ಮೇಲೆ ಟೋಪಿಗಳನ್ನು ಧರಿಸಿದ್ದರೆ ಇನ್ನು ಕೆಲವರು ಕರವಸ್ತ್ರಗಳನ್ನು ಸುತ್ತಿಕೊಂಡು ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ನಂತರ ಪರಸ್ಪರ ಅಪ್ಪುಗೆಯ ಮೂಲಕ ರಂಜಾನ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ, ಜಿಲ್ಲಾ ವಕ್ಫ್ ಮಂಡಳಿ ಮಾಜಿ ಚೇರ್ಮನ್ ಎಂಸಿ ಓ ಬಾಬು, ನಗರಸಭೆ ಮಾಜಿ ಉಪಾಧ್ಯಕ್ಷ ಸೈಯದ್ ಅಲ್ಲಾಭಕ್ಷಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಎ.ಜಾಕೀರ್ ಹುಸೇನ್, ಮೊಹಮದ್ ಸೈಫುಲ್ಲಾ, ಸೈಯದ್ ತಬ್ರೇಜ್ ಆಶ್ಮಿ ಸೇರಿದಂತೆ ಮುಸ್ಲಿಂ ಸಮಾಜದ ಅನೇಕ ಮುಖಂಡರುಗಳು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.