ಸಾರಾಂಶ
ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ಮತ್ತು ಮಹಿಳಾ ಘಟಕದ ಸಹಯೋಗದೊಂದಿಗೆ ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಠಣ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ದೇಶದಲ್ಲಿ ಗೋವುಗಳ ಮೇಲೆ ನಡೆಯುತ್ತಿರುವ ಹಿಂಸೆ, ಕ್ರೌರ್ಯ, ಗೋಹತ್ಯೆ ಇತ್ಯಾದಿಗಳು ಕೊನೆಗೊಂಡು ಗೋಸಂರಕ್ಷಣೆ ಮೂಲಕ ನಾಡಿನ ಶಾಂತಿ, ನೆಮ್ಮದಿ ಸಮೃದ್ಧಿಗಾಗಿ ಭಗವಂತನಲ್ಲಿ ಪ್ರಾರ್ಥಿಸುವಂತೆ ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಕರೆ ನೀಡಿದ್ದರು. ಅದರಂತೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ಮತ್ತು ಮಹಿಳಾ ಘಟಕದ ಸಹಯೋಗದೊಂದಿಗೆ ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಠಣ ನಡೆಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ಅರ್ಚಕ ವೇದಮೂರ್ತಿ ರಾಮಚಂದ್ರ ಹೊಳ್ಳರು ಶ್ರೀ ದೇವರಿಗೆ ಅಲಂಕಾರ ಪೂಜೆ ಸೇವೆ ಸಮರ್ಪಿಸಿ, ಲೋಕದ ಸುಖ, ಶಾಂತಿ, ನೆಮ್ಮದಿಗಾಗಿ ಪ್ರಾರ್ಥಿಸಿದರು. ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಕಾರ್ಯದರ್ಶಿ ರಾಜಪ್ರಸಾದ್ ಪೋಲ್ನಾಯ, ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಜಯಾ ಅನಂತಕೃಷ್ಣ ಆರ್ಮುಡತ್ತಾಯ, ಉಜಿರೆ ವಲಯಾಧ್ಯಕ್ಷ ಗಿರಿರಾಜ ಬಾರಿತ್ತಾಯ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಮತ್ತು ವಿಪ್ರ ಬಾಂಧವರು ಹಾಗೂ ಮಹಿಳೆಯರು ಭಾಗವಹಿಸಿದ್ದರು.