ಸಾರಾಂಶ
ಕನ್ನಡಪ್ರಭ ವಾರ್ತೆ ಕಡೂರು
ಕಂದಾಯ, ಅರಣ್ಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಕರವೇ ಪ್ರವೀಣ್ ಶೆಟ್ಟಿ ಬಳಗದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಅಧ್ಯಕ್ಷ ದಿನೇಶ್ ಶಿವಪುರ ತಿಳಿಸಿದರು.ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ನಮ್ಮ ವೇದಿಕೆಯು ಜನಪರ ಕಾಳಜಿಯಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಯಾವುದೇ ಇಲಾಖೆಯಿಂದ ತೊಂದರೆಯಾದರೆ ಕೂಡಲೇ ಸ್ಪಂದಿಸಿ ನ್ಯಾಯ ಕೊಡಿಸಲು ಶ್ರಮಿಸುತ್ತಿದೆ ಎಂದರು.ಎಸ್. ಬಿದರೆ ಗ್ರಾಮದ ಸಮೀಪ ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಖಾಸಗಿ ವ್ಯಕ್ತಿ ಓರ್ವರು ಮಣ್ಣನ್ನು ತೆಗೆದು ಮಾರಾಟ ಮಾಡುತ್ತಿದ್ದ ವಿಷಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಆನಂತರ ಎಸ್. ಬಿದರೆ ಗ್ರಾಮಸ್ಥರು ಹಾಗೂ ಕರವೇ ಕಾರ್ಯಕರ್ತರ ಹೋರಾಟದಿಂದ ಅಕ್ರಮವಾಗಿ ಮಣ್ಣು ಬಗೆಯುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸ್‍ಗೆ ದೂರು ನೀಡಿದ ನಂತರ ಎಫ್‍ಐಆರ್ ದಾಖಲಾಗಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯ ವಿರುದ್ಧ ಅನೇಕ ದೂರುಗಳಿದ್ದು ಅವುಗಳನ್ನು ಮುಂದಿಟ್ಟುಕೊಂಡು ಅ.3 ರಂದು ಚಿಕ್ಕಮಗಳೂರಿನ ಡಿಎಫ್‍ಓ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತಾಲೂಕು ಕಚೇರಿ ಮತ್ತು ಗ್ರಾಮ ಒನ್ ನಲ್ಲಿ ವಿಧವಾ,ವೃದ್ದಾಪ್ಯ ವೇತನ ಪಡೆಯಲು ಅಧಿಕಾರಿಗಳು ಹಣಕ್ಕಾಗಿ ಪೀಡಿಸುತ್ತಾರೆ ಎಂದು ದಿನೇಶ್ ಆರೋಪಿಸಿದರು.ಕರವೇ ಜಿಲ್ಲಾ ಸಂಚಾಲಕ ವಿಜಯಕುಮಾರ್ ಮಾತನಾಡಿ, ಕಡೂರು ತಾಲೂಕಿನ 70 ನೇ ಸರ್ವೆ ನಂ ನಲ್ಲಿ ಈಗಾಗಲೇ 70 ವರ್ಷಗಳಿಂದ ವಾಸವಾಗಿದ್ದು ಜಮೀನುಗಳನ್ನು ಉಳುಮೆ ಮಾಡಿರುವವರ ವಿರುದ್ಧ ಅರಣ್ಯ ಇಲಾಖೆಯವರು ಸುಮಾರು 300 ಜನರಿಗೆ ಭೂ ಕಬಳಿಕೆ ವಿಷಯವಾಗಿ ನೋಟಿಸ್ ನೀಡಿದ್ದಾರೆ. ಇದು ಸ್ಥಳೀಯರನ್ನು ಒಕ್ಕಲೆಬ್ಬಿಸುವ ಹುನ್ನಾರ. ನಮ್ಮ ವೇದಿಕೆ ರೈತರ ಪರವಾಗಿ ಹೋರಾಟ ಮಾಡಲಿದೆ. ಜನಪ್ರತಿನಿಧಿಗಳು ರೈತರ ಪರವಾಗಿ ಇರಬೇಕು ಎಂದರು.
ಎಮ್ಮೆದೊಡ್ಡಿ ಭಾಗದ 13 ಸಾವಿರ ಎಕರೆ ಭೂಮಿಯನ್ನು ಅರಣ್ಯ ಇಲಾಖೆ ಎಂಆರ್ ಮಾಡಿಸಿಕೊಳ್ಳಲು ಉಪ ವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ವಿರುದ್ಧ ಸಂಬಂಧಿಸಿದ ರೈತರೊಂದಿಗೆ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು.ಈ ಹಿಂದಿನ ಶಾಸಕರು 94 ಸಿ ಅಡಿಯಲ್ಲಿ ನೀಡಿದ ಹಕ್ಕು ಪತ್ರಗಳಿಗೆ ರಿಜಿಸ್ಟರ್ ಕಚೇರಿಯಲ್ಲಿ ಮತ್ತು ತಾಲೂಕು ಕಚೇರಿಯಲ್ಲಿ ಯಾವುದೇ ಮಾಹಿತಿ ನೀಡದೆ ಗೊಂದಲ ಸೃಷ್ಟಿಸುತ್ತಿದ್ದಾರೆ. ತಹಸೀಲ್ದಾರ್ ಅವರು ಈ ವಿಷಯದ ಬಗ್ಗೆ ಪರಿಶೀಲನೆ ಮಾಡಲಿ. ಕಡೂರು ಕ್ಷೇತ್ರದಲ್ಲಿ ಕಾಮಗಾರಿಗಳು, ರಸ್ತೆ, ಚರಂಡಿಗಳು ಗುಂಡಿ ಬಿದ್ದಿದ್ದು ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿಸಿದ ಅವರು ಶಾಸಕರು ಗಮನ ಹರಿಸಲಿ ಎಂದರು.ಸುದ್ದಿಗೋಷ್ಠಿಯಲ್ಲಿ ವಿ.ಎಲ್. ನಗರದ ಸತೀಶ್, ಗೋವಿಂದಪ್ಪ, ಜೀವನ್, ರಾಮನಾಯ್ಕ, ಸುರೇಶ್, ರಹಿಮ್ ಸಾಬ್, ಹರ್ಷದ್, ರಮೇಶ್ ಮತ್ತು ಮೂರ್ತಣ್ಣ ಇದ್ದರು.