ಗೌರಿಬಿದನೂರು ಕಾರ್ಖಾನೆಯಲ್ಲಿ ಭಾರೀ ಅಗ್ನಿ ದುರಂತ

| Published : Feb 06 2025, 12:17 AM IST

ಸಾರಾಂಶ

ತಾಲೂಕಿನ ಕುಟುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿರುವ ಎ-1 ಸ್ಟೀಲ್ ಇಂಡಿಯಾ ಲಿಮಿಟೆಡ್ ಕಾರ್ಖಾನೆಯಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಸಂಭವಿಸಿದ ಭಾರಿ ಅಗ್ನಿ ಅನಾಹುತದಲ್ಲಿ ಕಾರ್ಖಾನೆಯಲ್ಲಿದ್ದ ಕಚ್ಚಾವಸ್ತುಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನ ಕುಟುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿರುವ ಎ-1 ಸ್ಟೀಲ್ ಇಂಡಿಯಾ ಲಿಮಿಟೆಡ್ ಕಾರ್ಖಾನೆಯಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಸಂಭವಿಸಿದ ಭಾರಿ ಅಗ್ನಿ ಅನಾಹುತದಲ್ಲಿ ಕಾರ್ಖಾನೆಯಲ್ಲಿದ್ದ ಕಚ್ಚಾವಸ್ತುಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲಲ್ಲ.

ಅಗ್ನಿ ದುರಂತದಿಂದಾಗಿ ಇಡೀ ಕೈಗಾರಿಕಾ ಪ್ರದೇಶ ಹೊಗೆಯಿಂದ ಆವರಿಸಿತ್ತು. ಕಾರ್ಖಾನೆಯಲ್ಲಿ ಹೊತ್ತಿಕೊಂಡ ಬೆಂಕಿ ನೋಡು ನೋಡುತ್ತಿದ್ದಂತೆ ಕಾರ್ಖಾನೆ ತುಂಬೆಲ್ಲ ಆವರಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಮಿಕರು ಕಾರ್ಖಾನೆಯಿಂದ ಹೊರಗೆ ಓಡಿಬಂದು ಅಪಾಯದಿಂದ ಪಾರಾಗಿದ್ದಾರೆ.

ಕಾರ್ಖಾನೆಯಲ್ಲಿ 150ಟನ್ ನಷ್ಟು ಕಚ್ಚಾವಸ್ತುಗಳಷ್ಟು ಸಂಗ್ರಹಣೆ ಮಾಡಲಾಗಿತ್ತು. ಅದರಲ್ಲಿ 30ಟನ್ ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಗೌರಿಬಿದನೂರು, ಗುಡಿಬಂಡೆಯಿಂದ ಆಗಮಿಸಿದ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿದವು. ಪ್ಲಾಂಟಿನ ಕಬ್ಬಿಣ ತಯಾರಿಕಾ ಘಟಕದ ಪಕ್ಕದಲ್ಲಿದ್ದ ಮೂರು ಅಂತಸ್ತಿನ ಕಟ್ಟಡದ ಮುಂದೆ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆಯು ಆಕಾಶದೆತ್ತರಕ್ಕೆ ಏರಿತ್ತು. ಸತತವಾಗಿ 5ಗಂಟೆಗಳ ಕಾರ್ಯಾಚರಣೆ ನಡೆಸಿದರೂ ಸಹ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಲಿಲ್ಲ. ಎರಡು ಅಗ್ನಿಶಾಮಕ ದಳದ ತಂಡ ಬೆಂಕಿ ನಂದಿಸಲು ಹರಸಾಹಸ ಪಟ್ಟರು ನಿಯಂತ್ರಣಕ್ಕೆ ಬರದೆ ಕಾರ್ಖಾನೆಯಲ್ಲಿದ್ದ ವಸ್ತುಗಳು ಬೆಂಕಿಯ ಕೆನ್ನಾಲಗಿಗೆ ಸುಟ್ಟು ಭಸ್ಮವಾಗಿದೆ. ಅಗ್ನಿ ಅವಘಡಕ್ಕೆ ನಿಖರವಾದ ಕಾರಣ ಮಾತ್ರ ತಿಳಿದುಬಂದಿಲ್ಲ.ಕಳೆದ ವರ್ಷವೂ ಸಂಭವಿಸಿತ್ತು

ಇದೇ ಕಾರ್ಖಾನೆಯಲ್ಲಿ ಕಳೆದ ವರ್ಷವೂ ಸಹ ಬೆಂಕಿ ಅವಘಡ ಸಂಭವಿಸಿತ್ತು. ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿನ ಎ-1 ಸ್ಟೀಲ್ ಇಂಡಿಯಾ ಲಿಮಿಟೆಡ್ ಕಾರ್ಖಾನೆಯಲ್ಲಿ ಯಾವುದೇ ಸುರಕ್ಷತೆ ಮತ್ತು ಭದ್ರತೆ ಪರಿಕರಗಳು ಇಲ್ಲದೆ ಇರುವುದರಿಂದ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಯಾವಾಗಲೂ ಜೀವ ಭಯ ಕಾಡುತ್ತಿರುತ್ತದೆ. ಬೆಂಕಿಯನ್ನು ನಂದಿಸಲು ನೀರನ್ನು ಹೊರಗಿನಿಂದ ಟ್ಯಾಂಕರ್ಗಳ ಮೂಲಕ ಸಾಗುಸುತ್ತಿದ್ದರು.ಬೆಂಕಿ ಅವಘಡ ಸಂಭವಿಸಿದ್ದರೂ ಸಹ ಸಂಬಂಧಪಟ್ಟ ಮಾಲಿಕನಾಗಲಿ ಅಥವಾ ವ್ಯವಸ್ಥಾಪಕನಾಗಲಿ ಘಟನಾ ಸ್ಥಳದಲ್ಲಿ ಹಾಜರಿರಲಿಲ್ಲ. ಪೊಲೀಸ್‌ ವೃತ್ತ ನಿರೀಕ್ಷಕರಾದ ಕೆ.ಪಿ.ಸತ್ಯನಾರಾಯಣರವರು ಬೆಂಕಿ ಅವಘಡ ಸಂಭವಿಸಿದ ಸ್ಥಳ ಪರಿಶೀಲಿಸಿ, ಕೂಡಲೆ ಕಾರ್ಖಾನೆಯ ಮಾಲಿಕನ್ನು ಕರೆಸಿ ಪ್ರಕರಣ ದಾಖಲಿಸುವಂತೆ ಪಿ.ಎಸ್.ಐ. ರಮೇಶ್‌ ಗುಗ್ಗುರಿ ರವರಿಗೆ ತಿಳಿಸಿದರು.

ಬಾಕ್ಸ್‌............

‘ಕನ್ನಡಪ್ರಭ’ ಮೊದಲೇ ಎಚ್ಚರಿಸಿತ್ತು

ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದೆ ಅದನ್ನು ನಿಯಂತ್ರಿಸಲು ವ್ಯವಸ್ಥೆ ಇಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ‘ಕನ್ನಡಪ್ರಭ’ ಫೆ.4ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.