ಕಲಘಟಗಿ ತಾಲೂಕಿನ ತಂಬೂರ ಕ್ರಾಸ್ ಬಳಿ ಹುಬ್ಬಳ್ಳಿ- ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಮೇಲೆ ಗ್ಯಾಸ್ ತುಂಬಿರುವ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆಯಾಗಿದೆ. ಅದರಿಂದ ಹುಬ್ಬಳ್ಳಿ-ಅಂಕೋಲಾ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಉಂಟಾಯಿತು.
ಕಲಘಟಗಿ: ಮೊದಲೇ ಎಲ್‌ಪಿಜಿ ಕೊರತೆಯಿಂದ ಇಡೀ ದೇಶವೇ ತತ್ತರಿಸುತ್ತಿದೆ. ಇದರ ಬೆನ್ನಲ್ಲೇ ಕಲಘಟಗಿ ತಾಲೂಕಿನ ತಂಬೂರ ಕ್ರಾಸ್ ಬಳಿ ಹುಬ್ಬಳ್ಳಿ- ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಮೇಲೆ ಗ್ಯಾಸ್ ತುಂಬಿರುವ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆಯಾಗಿದೆ. ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಟ್ಯಾಂಕರ್‌ನಲ್ಲಿನ ಗ್ಯಾಸ್‌ನ್ನು ಬೇರೆ ಟ್ಯಾಂಕರ್‌ಗೆ ವರ್ಗಾಯಿಸಿ ಸುರಕ್ಷಿತವಾಗಿ ಮತ್ತೆ ಸಾಗಿಸಲಾಗಿದೆ.
ಆಗಿದ್ದೇನು?: ಮಂಗಳೂರಿನಿಂದ ಹೈದರಾಬಾದ್‌ಗೆ ಟ್ಯಾಂಕರ್ ಮೂಲಕ 18 ಟನ್ ಎಲ್‌ಪಿಜಿ ಗ್ಯಾಸ್‌ನ್ನು ಶುಕ್ರವಾರ ಸಾಗಿಸಲಾಗುತ್ತಿತ್ತು. ಶುಕ್ರವಾರ ರಾತ್ರಿ ತಂಬೂರ ಕ್ರಾಸ್ ಬಳಿ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆ ಶುರುವಾಗಿದೆ. ಕೂಡಲೇ ಟ್ಯಾಂಕರ್‌ನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಯಿತು. ಜತೆಗೆ ಆ ಮಾರ್ಗದ ಎಲ್ಲ ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು.ಕಲಘಟಗಿ - ಯಲ್ಲಾಪುರ ರಸ್ತೆ ಬಂದ್ ಮಾಡಿ, ಹುಬ್ಬಳ್ಳಿ- ತಡಸ ಕ್ರಾಸ್ ಮೂಲಕ ಮುಂಡಗೋಡ ಮಾರ್ಗ ಹಾಗೂ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಾಹನಗಳನ್ನು ಹಳಿಯಾಳ ಕ್ರಾಸ್‌ನಿಂದ ಧಾರವಾಡ ಅಲ್ಲಿಂದ ಹುಬ್ಬಳ್ಳಿ ಮಾರ್ಗಕ್ಕೆ ಬದಲಾಯಿಸಲಾಯಿತು.
ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗೆ ಬೆಳಗ್ಗೆ 7 ಗಂಟೆ ವರೆಗೆ ಸೋರಿಕೆಯಾಗಿದೆ. ನಂತರ ಗ್ಯಾಸ್ ವರ್ಗಾವಣೆ ಕಾರ್ಯಾಚಾರಣೆ ಆರಂಭಿಸಲಾಯಿತು. ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟು ಪರಿಸ್ಥಿತಿ ನಿಭಾಯಿಸಿದರು. ಮಧ್ಯಾಹ್ನ 3 ಗಂಟೆ ವರೆಗೆ ಸರಿಸುಮಾರು 8 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಗ್ಯಾಸ್‌ನ್ನು ಬೇರೆ ಟ್ಯಾಂಕರ್‌ಗೆ ವರ್ಗಾಯಿಸಲಾಯಿತು.ಸಕಾಲಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಮುನ್ನೆಚ್ಚರಿಕೆ ತೆಗೆದುಕೊಂಡು ಮಾರ್ಗ ಬದಲಾವಣೆ ಹಾಗೂ ಗ್ಯಾಸ್ ಬೇರೆ ಟ್ಯಾಂಕರ್‌ಗೆ ಭರ್ತಿ ಮಾಡದಿದ್ದಲ್ಲಿ ಭಾರೀ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.