ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಆಶ್ರಯದಲ್ಲಿ ಇಲ್ಲಿನ ಇಂದಿರಾ ಗ್ಲಾಸ್‌ ಹೌಸ್‌ನಲ್ಲಿ ಜ.10 ಹಾಗೂ 11ರಂದು ಬೃಹತ್‌ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದ ಹಿನ್ನೆಲೆಯಲ್ಲಿ ಆರೋಗ್ಯದ ಹಲವು ವಿಷಯಗಳ ಕುರಿತು ತಜ್ಞ ವೈದ್ಯರ ತಂಡ ಸಂವಾದ ಕೂಡ ನಡೆಸಲಿದೆ.

ಹುಬ್ಬಳ್ಳಿ:

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಆಶ್ರಯದಲ್ಲಿ ಇಲ್ಲಿನ ಇಂದಿರಾ ಗ್ಲಾಸ್‌ ಹೌಸ್‌ನಲ್ಲಿ ಜ.10 ಹಾಗೂ 11ರಂದು ಬೃಹತ್‌ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದ ಹಿನ್ನೆಲೆಯಲ್ಲಿ ಆರೋಗ್ಯದ ಹಲವು ವಿಷಯಗಳ ಕುರಿತು ತಜ್ಞ ವೈದ್ಯರ ತಂಡ ಸಂವಾದ ಕೂಡ ನಡೆಸಲಿದೆ.

ಶಿಬಿರಕ್ಕೆ 10ರಂದು ಬೆಳಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಲಬು ಮತ್ತು ಕೀಲು ತಜ್ಞ ಡಾ. ವಿವೇಕ ಪಾಟೀಲ ಆಗಮಿಸಲಿದ್ದು ಅಧ್ಯಕ್ಷತೆಯನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಸಂಪಾದಕ ಅಜಿತ್‌ ಹನುಮಕ್ಕನವರ ವಹಿಸುವರು. ಸುವರ್ಣ ನ್ಯೂಸ್‌ನ ಸುದ್ದಿ ಸಂಪಾದಕ ಪ್ರಶಾಂತ ನಾಥು, ಸುವರ್ಣ ನ್ಯೂಸ್‌ನ ಹಿರಿಯ ಉಪಾಧ್ಯಕ್ಷ ಅನೀಲ್‌ ಸುರೇಂದ್ರ ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕ ಸಲೀಂಅಹ್ಮದ, ಶಾಸಕರಾದ ಮಹೇಶ ಟೆಂಗಿನಕಾಯಿ, ಎನ್‌.ಎಚ್‌. ಕೋನರಡ್ಡಿ, ಮೇಯರ್‌ ಜ್ಯೋತಿ ಪಾಟೀಲ, ಉಪಮೇಯರ್‌ ಸಂತೋಷ ಚವ್ಹಾಣ ಸೇರಿದಂತೆ ಹಲವರು ಆಗಮಿಸಲಿದ್ದಾರೆ.ಉದ್ಘಾಟನೆ ಬಳಿಕ ಮಧ್ಯಾಹ್ನ 12ರಿಂದ 1ರ ವರೆಗೆ ಹೃದ್ರೋಗ ತಜ್ಞ ವಿಜಯಕೃಷ್ಣ ಕೊಳೂರ ಹೃದಯ ಕಾಯಿಲೆಗಳ ಬಗ್ಗೆ ಉಪನ್ಯಾಸ ನೀಡಿ, ಸಂವಾದ ನಡೆಸಲಿದ್ದಾರೆ. 2.30ರಿಂದ 3.15ರ ವರೆಗೆ ಮಕ್ಕಳಲ್ಲಿನ ಸ್ಥೂಲಕಾಯತೆಗೆ ಅಪಾಯಕಾರಿ ಅಂಶಗಳು ವಿಷಯ ಕುರಿತು ಡಾ. ಶ್ರೀಹರ್ಷ ಬಡಿಗೇರ, 3.30ರಿಂದ 4ರ ವರೆಗೆ ಆಯುರ್ವೇದ, ಪಂಚಕರ್ಮ ಚಿಕಿತ್ಸೆ ಕುರಿತು ಡಾ. ಶ್ರೀನಿವಾಸ ಬನ್ನಿಗೋಳ, ಸಂಜೆ 4.15ರಿಂದ 4.45ರ ವರೆಗೆ ಎಂ.ಎಂ. ಜೋಶಿ ನೇತ್ರ ಸಂಸ್ಥೆಯ ಡಾ. ಕೃಷ್ಣ ಪ್ರಸಾದ ಅವರು ಚಿಕ್ಕಮಕ್ಕಳಲ್ಲಿ ಉಂಟಾಗುವ ಕಣ್ಣಿನ ಸಮಸ್ಯೆ ಕುರಿತು ಉಪನ್ಯಾಸ ನೀಡಿ ನಂತರ ಸಂವಾದ ನಡೆಸಲಿದ್ದಾರೆ.

ಜ. 11ರಂದು ಬೆಳಗ್ಗೆ 11ರಿಂದ 11.45ರ ವರೆಗೆ ಕೋವಿಡ್‌ ನಂತರದ ಹೃದಯಾಘಾತದ ಪ್ರಕರಣ ಹೆಚ್ಚಳ ವಿಷಯ ಕುರಿತು ಹೃದ್ರೋಗ ತಜ್ಞ ಡಾ. ಅಮಿತ್‌ ಸತ್ತೂರ ಸಂವಾದ ನಡೆಸಲಿದ್ದರೆ, ಬೆಳಗ್ಗೆ 11.45ರಿಂದ 12.15ರ ವರೆಗೆ ಕ್ಯಾನ್ಸರ್‌ ಚಿಕಿತ್ಸಾ ವಿಧಾನದ ಕುರಿತು ಡಾ. ಪವನಕುಮಾರ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 12.30ರಿಂದ 1.15ರ ವರೆಗೆ ನಾರಾಯಣ ಹೃದಯಾಲಯದ ಡಾ. ವಿವೇಕಾನಂದ ಗಜಪತಿ ಅವರು ಚಳಿಗಾಲದಲ್ಲಿ ಹೃದಯ ಸ್ಥಂಭನಗಳು ಕುರಿತು ಸಂವಾದ ನಡೆಸಲಿದ್ದಾರೆ.

ಸಮಾರೋಪ:

ಸಂಜೆ 4ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಅತಿಥಿಗಳಾಗಿ ಕೊಳಗೇರಿ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕ ಪ್ರಸಾದ ಅಬ್ಬಯ್ಯ, ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಕೆಎಂಸಿಆರ್‌ಐನ ನಿರ್ದೇಶಕ ಡಾ.ಈಶ್ವರ ಹೊಸಮನಿ ಆಗಮಿಸಲಿದ್ದಾರೆ. ವಿವಿಧ ಆಸ್ಪತ್ರೆಗಳು ಮಳಿಗೆಗಳನ್ನು ತೆರೆದಿವೆ.