ಕೊಪ್ಪಳ: ಸರ್ಕಾರದ ವಿದ್ಯುತ್ ಖಾಸಗೀಕರಣ ನಡೆಯಿಂದ ರೈತರಿಗೆ ಮರಣ ಶಾಸನ ಬರೆದಂತಾಗುತ್ತದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಚಿಲವಾಡಗಿ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಖಾಸಗೀಕರಣ ಖಂಡಿಸಿ ನಗರದ ಗವಿಮಠದಿಂದ ಅಶೋಕ ವೃತ್ತದ ಮೂಲಕ ಕೊಪ್ಪಳ ಕೆಪಿಟಿಸಿಎಲ್ ಕಚೇರಿ ವರೆಗೆ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ಕೆಪಿಟಿಸಿಎಲ್ ಸರಕಾರದ ಸ್ವಾಯತ್ತತೆಯಲ್ಲಿರುವ ಸಂಸ್ಥೆಯನ್ನು ಇಂದು ಖಾಸಗೀಕರಣ ಮಾಡಿದಲ್ಲಿ ಮುಂದೆ ಇದು ರೈತರ ಮರಣ ಶಾಸನ ಬರೆದಂತಾಗುತ್ತದೆ. ಖಾಸಗೀಕರಣದಿಂದ ಮುಂದಿನ ದಿನಗಳಲ್ಲಿ ರೈತರು ತೀವ್ರ ತೊಂದರೆಗೊಳಗಾಗಲಿದ್ದು, ಸರ್ಕಾರ ಟಾಟಾ ಪವರ್ ಕಂಪನಿಗೆ ಕೊಡವ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಒಂದು ವೇಳೆ ಹಟಕ್ಕೆ ಬಿದ್ದು ಸರ್ಕಾರ ಖಾಸಗೀಕರಣ ಹಿಂಪಡೆಯದೇ ಇದ್ದಲ್ಲಿ ಇಡೀ ರಾಜ್ಯದ ರೈತ ಸಂಘಟನೆಗಳು ಉಗ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
25 ವರ್ಷಗಳ ಹಿಂದೆ ತಾಲೂಕಿನ ಹಿರೇಬಗನಾಳದಲ್ಲಿ ಮೀಟರ್ ಕೂಡಿಸುವ ಸಂದರ್ಭದಲ್ಲಿ ಇಡಿ ರಾಜ್ಯಾದ್ಯಂತ ಹೋರಾಟ ಮಾಡಿ ಕೊಪ್ಪಳ ಜಿಲ್ಲೆಯಿಂದ ಏನು ಉತ್ತರ ಕೊಟ್ಟಿದ್ದೇವೋ ಹಾಗೇ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ರಾಜ್ಯ ರೈತ ಸಂಘ ಹಸಿರು ಸೇನೆ ಹೋರಾಟದ ಮೂಲಕ ಸರಕಾರವನ್ನು ಎಚ್ಚರಿಸುತ್ತೇವೆ ಎಂದರು.ಖಾಸಗೀಕರಣ ಮಾಡುವ ನಿರ್ಧಾರ ತೆಗೆದುಕೊಂಡರ ಈ ಹಿಂದೆ ನರಗುಂದ ಬಂಡಾಯ ಆಗುವ ಸಂದರ್ಭದಲ್ಲಿ ಗುಂಡೂರಾವ್ ಸರಕಾರ ಹೇಗೆ ಬಿತ್ತೋ ಹಾಗೆಯೇ ಈ ಸರ್ಕಾರವೂ ಬೀಳುತ್ತದೆ ಎಂದು ಮತ್ತೊಮ್ಮೆ ಎಚ್ಚರಿಸಿದ ಅವರು ರಾಜ್ಯದ ರೈತರು ಸಿಡಿದೇಳುವ ಮುನ್ನ ಸರಕಾರ ಜಾಗೃತವಾಗಬೇಕು ಎಂದರು.
ಬೃಹತ್ ಪ್ರತಿಭಟನೆ ನಗರದ ಕೆಪಿಟಿಸಿಎಲ್ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ತೆರಳಿ ಗುಲ್ಬುರ್ಗಾ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕಿನ್ನಾಳ ಗ್ರಾಮದಿಂದ ಸುಮಾರು 25 ಟ್ರ್ಯಾಕ್ಟರ್ ಮೂಲಕ ನೂರಾರು ರೈತರು ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಸುಕುಮುನಿ ಬಿ., ಕಿನ್ನಾಳ ಗ್ರಾಮ ಘಟಕದ ಅಧ್ಯಕ್ಷ ಪರಶುರಾಮ ಬಿಸರಳ್ಳಿ, ಉಪಾಧ್ಯಕ್ಷರಾದ ಶಂಕ್ರಪ್ಪ ಚೀಲವಾಡಗಿ, ನಾಗರಾಜ ಮೇಟಿ, ಆನಂದ ಆರೇರ್, ಶರಣಪ್ಪ ಬುರಡಿ, ಪಂಪಾಪತಿ ಟಂಕಸಾಲಿ, ಚಿನ್ನಪ್ಪ ಸಜ್ಜನ್, ಶಿವು ಸಜ್ಜನ್, ಇನ್ನಿತರರು ಇದ್ದರು.