ಕೇಂದ್ರ ಸರ್ಕಾರ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ ಏಳನೇ ಅಧಿಸೂಚನೆ ವಿರೋಧಿಸಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆ ವತಿಯಿಂದ ಸಾಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು. ಬೆಳಗ್ಗೆ ಆವಿನಹಳ್ಳಿಯಿಂದ ಸಾಗರ ಪಟ್ಟಣದವರೆಗೆ (೧೧ಕಿ.ಮೀ.) ಬೃಹತ್ ಪಾದಯಾತ್ರೆ ನಡೆಯಿತು.
ಕನ್ನಡಪ್ರಭ ವಾರ್ತೆ ಸಾಗರ
ಕೇಂದ್ರ ಸರ್ಕಾರ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ ಏಳನೇ ಅಧಿಸೂಚನೆ ವಿರೋಧಿಸಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆ ವತಿಯಿಂದ ಸಾಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು. ಬೆಳಗ್ಗೆ ಆವಿನಹಳ್ಳಿಯಿಂದ ಸಾಗರ ಪಟ್ಟಣದವರೆಗೆ (೧೧ಕಿ.ಮೀ.) ಬೃಹತ್ ಪಾದಯಾತ್ರೆ ನಡೆಯಿತು. ಪಾದಯಾತ್ರೆಗೆ ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ.ರಾಮಪ್ಪ ಸಹಕಾರಿ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು. ವಿವಿಧ ಗ್ರಾಮಗಳಲ್ಲಿ ಸಂಚರಿಸಿದ ಮೆರವಣಿಗೆ ಸಾಗರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ನಂತರ ಗಾಂಧಿ ಮೈದಾನದಲ್ಲಿ ಸಭೆ ನಡೆಯಿತು.ಸಂಸ್ಕೃತಿ, ಸಂಪ್ರದಾಯಕ್ಕೆ ಕುತ್ತು:
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, ಕಸ್ತೂರಿರಂಗನ್ ವರದಿ ಜಾರಿಯಾದರೆ ಮಲೆನಾಡಿನ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಕ್ಕೂ ಕುತ್ತು ಬರುವ ಅಪಾಯವಿದೆ ಎಂದು ಉದಾಹರಣೆ ಸಹಿತವಾಗಿ ವಿವರಿಸಿದರು.ಶರಾವತಿ ಮುಳುಗಡೆ, ಭದ್ರಾ ಮುಳುಗಡೆ ಸಂತ್ರಸ್ತರಿಗೆ ಈತನಕ ಸರಿಯಾದ ಪರಿಹಾರ, ಮೂಲಭೂತ ಸೌಕರ್ಯ ಸಿಕ್ಕಿಲ್ಲ. ಆ ಸಂದರ್ಭದಲ್ಲಿ ಸಂತ್ರಸ್ತರಿಗೆ ಬೇಕಾದ ಸೌಲಭ್ಯ ದೊರಕಿಸಿಕೊಡುವ ಭರವಸೆ ನೀಡಲಾಗಿತ್ತು. ಆದರೆ ಅದು ಹುಸಿಯಾಗಿದ್ದು, ಈಗ ಪರಿಸರ ಸೂಕ್ಷ್ಮವಲಯವೆಂದು ಗುರುತಿಸಿರುವ ಕಸ್ತೂರಿರಂಗನ್ ವರದಿ ಜಾರಿಯಾದರೆ ಮಲೆನಾಡಿನ ಜನರ ಇಡೀ ಬದುಕು ಸರ್ವನಾಶವಾಗಲಿದೆ. ಮಲೆನಾಡು ಪ್ರದೇಶದಲ್ಲಿ ಖಾತೆದಾರರಿಗಿಂತ ಬಗರ್‌ಹುಕುಂ ರೈತರ ಸಂಖ್ಯೆಯೇ ಜಾಸ್ತಿಯಿದೆ. ವರದಿಯಿಂದ ಬಗರ್‌ಹುಕುಂ ರೈತರ ಬದುಕು ಬೀದಿಗೆ ಬರುವುದರಲ್ಲಿ ಸಂಶಯವಿಲ್ಲ ಎಂದರು.
ಜನಪರವಾದ ವಿಷಯದಲ್ಲಿ ರಾಜಕೀಯ ಸಣ್ಣತನ ಬಿಟ್ಟು ಮುತ್ಸದ್ಧಿತನ ತೋರಬೇಕಾದ ತುರ್ತು ಇದೆ. ನಾಗರಿಕವಾಗಿ ಯೋಚನೆ ಮಾಡಬೇಕಿದೆ. ಈ ನೆಲೆಯಲ್ಲಿ ಜನವಿರೋಧಿಯಾದ ಕಸ್ತೂರಿರಂಗನ್ ವರದಿಯನ್ನು ಪಕ್ಷಾತೀತವಾಗಿ ವಿರೋಧಿಸಬೇಕಾಗಿದೆ. ಇದಕ್ಕಾಗಿ ಪಕ್ಷಾತೀತವಾದ ಸಹಕಾರ ವೇದಿಕೆ ಹುಟ್ಟುಹಾಕಿ ಚಳವಳಿ ರೂಪಿಸಲಾಗಿದೆ. ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲಿ ಹೋರಾಟ ನಡೆಸಿ ಅಂತಿಮವಾಗಿ ಶಿವಮೊಗ್ಗದಲ್ಲಿ ಬೃಹತ್ ಹೋರಾಟ ರೂಪಿಸಿ, ಅಲ್ಲಿಗೆ ಮುಖ್ಯಮಂತ್ರಿಗಳನ್ನು ಕರೆಸಿ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.ಸರ್ವೆ ಅವೈಜ್ಞಾನಿಕ:
ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಲೆನಾಡು ಭಾಗದ ರೈತರು ಅರಣ್ಯ ಇಲಾಖೆಯ ಕಠಿಣ ಕಾನೂನು, ಕೊಳೆರೋಗ, ಎಲೆಚುಕ್ಕಿ ರೋಗ, ಕಾಡು ಪ್ರಾಣಿಗಳ ಹಾವಳಿ ಮುಂತಾದವುಗಳಿಂದ ಸತ್ತು ಬದುಕುತ್ತಿದ್ದಾರೆ. ಇದೀಗ ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಸ್ಯಾಟಲೈಟ್ ಮೂಲಕ ಸರ್ವೆ ಮಾಡಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿರುವುದೇ ಅವೈಜ್ಞಾನಿಕವಾಗಿದೆ. ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ನೈಜ ವರದಿ ನೀಡಬೇಕಿತ್ತು ಎಂದರು.ಯಾವುದೇ ಕಾರಣಕ್ಕೂ ಮಲೆನಾಡು ರೈತರಿಗೆ ಮರಣ ಶಾಸನವಾಗಲಿರುವ ಕಸ್ತೂರಿ ರಂಗನ್ ವರದಿ ಜಾರಿಯಾಗಲು ಬಿಡಬಾರದು ಎಂದ ಶಾಸಕರು, ಈಗಾಗಲೆ ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಮುಖ್ಯಮಂತ್ರಿಗಳು ಸದ್ಯದಲ್ಲಿ ವಿಶೇಷ ಅಧಿವೇಶನ ಕರೆದು ಕಸ್ತೂರಿ ರಂಗನ್ ವರದಿ ವಿರುದ್ದ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ವರದಿ ವಜಾಗೊಳಿಸುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ರೈತರಿಂದ ಕಾಡು:ಮಾಜಿ ಸಚಿವ ಎಚ್.ಹಾಲಪ್ಪ ಮಾತನಾಡಿ, ಕಳೆದ ೧೬ವರ್ಷಗಳಿಂದ ಕಸ್ತೂರಿರಂಗನ್ ವರದಿ ಎನ್ನುವ ತೂಗುಕತ್ತಿ ಮಲೆನಾಡಿಗರ ಮೇಲೆ ತೂಗುತ್ತಿದೆ. ನಿಜವಾಗಿ ಈ ವರದಿ ಯಾರಿಗೂ ಬೇಕಾಗಿಲ್ಲ. ಯಾವ ಸರ್ಕಾರಗಳು ಮಲೆನಾಡಿಗರ ಜನಜೀವನವನ್ನು ನಿಜವಾಗಿ ಅರ್ಥಮಾಡಿಕೊಂಡಿಲ್ಲ ಎಂದರಲ್ಲದೆ, ಯಾವುದೇ ಅಧಿಕಾರಿ ಅರಣ್ಯವನ್ನು ಉಳಿಸಿಲ್ಲ. ಪರಿಸರ, ಅರಣ್ಯ ಉಳಿಸುವಲ್ಲಿ ಅಧಿಕಾರಿಗಳ ಪಾತ್ರ ಸ್ವಲ್ಪವೂ ಇಲ್ಲ. ನಿಜವಾಗಿ ಕಾಡು ಉಳಿದಿದ್ದರೆ ಅದು ರೈತರಿಂದ ಮಾತ್ರ ಎಂದು ಪ್ರತಿಪಾದಿಸಿದರು. ಬೇರೆಬೇರೆ ಯೋಜನೆಗಳಿಂದ ಮಲೆನಾಢು ಭಾಗದ ರೈತರ ಸಂಕಷ್ಟದಲ್ಲಿದ್ದಾರೆ. ಇಂತಹ ಹೊತ್ತಿನಲ್ಲಿ ಕಸ್ತೂರಿ ರಂಗನ್ ೭ನೇ ಅಧಿಸೂಚನೆ ಇನ್ನಷ್ಟು ಆತಂಕ ಸೃಷ್ಟಿಸುತ್ತಿದೆ ಎಂದು ಹೇಳಿದರು.
ಶಿಮುಲ್ ಅಧ್ಯಕ್ಷ ವಿದ್ಯಾಧರ ಎಚ್.ಎಸ್., ಆಪ್ಸ್ಕೋಸ್ ಅಧ್ಯಕ್ಷ ಬಿ.ಎ. ಇಂದೂಧರ ಗೌಡರು ಮಾತನಾಡಿದರು. ಬಿ.ಆರ್. ಜಯಂತ್ ಪ್ರಾಸ್ತಾವಿಕವಾಗಿ ಮಾತನಾಡಿ ವರದಿಯ ಸಾಧಕ ಬಾಧಕಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಚೇತನರಾಜ್ ಕಣ್ಣೂರು, ಕಲಸೆ ಚಂದ್ರಪ್ಪ, ದೇವೇಂದ್ರಪ್ಪ, ಸೋಮಶೇಖರ ಲ್ಯಾವಿಗೆರೆ, ಸಿಗಂದೂರು ರವಿಕುಮಾರ್, ದಿನೇಶ್ ಬರದವಳ್ಳಿ, ವ.ಶಂ.ರಾಮಚAದ್ರ ಭಟ್, ಅಮೃತೇಶ್, ಪ್ರಸನ್ನ ಕೆರೆಕೈ, ಮಲ್ಲಿಕಾರ್ಜುನ ಹಕ್ರೆ ಇನ್ನಿತರರು ಹಾಜರಿದ್ದರು. ಕೊನೆಯಲ್ಲಿ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಉಪವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.