ಸಾರಾಂಶ
ಈ ವಿದ್ಯುತ್ ಲೈನ್ ಯೋಜನೆ ಬಗ್ಗೆ ಈಗಾಗಲೇ ಅನೇಕ ಬಾರಿ ಜಿಲ್ಲಾಧಿಕಾರಿ, ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು ಹಾಗೂ ಸರ್ಕಾರಕ್ಕೆ ಅನೇಕ ಮನವಿಗಳನ್ನು ನೀಡಲಾಗಿದೆ. ಹಕ್ಕೊತ್ತಾಯ ಪ್ರತಿಭಟನೆಗಳನ್ನು ಕೂಡ ಮಾಡಲಾಗಿದೆ. ಆದರೂ ಇವೆಲ್ಲವನ್ನು ಧಿಕ್ಕರಿಸಿ ಯೋಜನೆಯ ಗುತ್ತಿಗೆ ಪಡೆದುಕೊಂಡಿರುವ, ಸ್ಟೆರ್ ಲೈಟ್ ಕಂಪನಿ ಭೂಮಾಲಕರಿಗೆ ಯಾವುದೇ ಪೂರ್ವ ಮಾಹಿತಿ, ನೋಟಿಸ್ ನೀಡದೇ, ಜಿಲ್ಲಾಧಿಕಾರಿಯವರ ಆದೇಶ ಇದೆ ಎಂದು ಬಲತ್ಕಾರವಾಗಿ ಕಾಮಗಾರಿಗೆ ಮುಂದಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಕಾಪು ತಾಲೂಕಿನ ನಂದಿಕೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಸಮೂಹದ ಯುಪಿಸಿಎಲ್ ವಿದ್ಯುತ್ ಸ್ಥಾವರದಿಂದ 400 ಕೆವಿ ವಿದ್ಯುತ್ ಲೈನ್ ಅಳವಡಿಕೆಯ ವಿರುದ್ಧ ಸ್ಥಳೀಯ ಜನರ ವಿರೋಧದ ನಡುವೆ ಕಾಮಗಾರಿ ನಡೆಯುತ್ತಿದೆ. ಇದನ್ನು ವಿರೋಧಿಸಿ ಜೂನ್ 12ರಂದು ಬೆಳಗ್ಗೆ 10 ಗಂಟೆಗೆ ಇನ್ನಾ ಗ್ರಾ.ಪಂ. ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ.ಈ ಬಗ್ಗೆ ಸೋಮವಾರ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿಯ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ವಿದ್ಯುತ್ ಲೈನ್ ಯೋಜನೆ ಬಗ್ಗೆ ಈಗಾಗಲೇ ಅನೇಕ ಬಾರಿ ಜಿಲ್ಲಾಧಿಕಾರಿ, ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು ಹಾಗೂ ಸರ್ಕಾರಕ್ಕೆ ಅನೇಕ ಮನವಿಗಳನ್ನು ನೀಡಲಾಗಿದೆ. ಹಕ್ಕೊತ್ತಾಯ ಪ್ರತಿಭಟನೆಗಳನ್ನು ಕೂಡ ಮಾಡಲಾಗಿದೆ. ಆದರೂ ಇವೆಲ್ಲವನ್ನು ಧಿಕ್ಕರಿಸಿ ಯೋಜನೆಯ ಗುತ್ತಿಗೆ ಪಡೆದುಕೊಂಡಿರುವ, ಸ್ಟೆರ್ ಲೈಟ್ ಕಂಪನಿ ಭೂಮಾಲಕರಿಗೆ ಯಾವುದೇ ಪೂರ್ವ ಮಾಹಿತಿ, ನೋಟಿಸ್ ನೀಡದೇ, ಜಿಲ್ಲಾಧಿಕಾರಿಯವರ ಆದೇಶ ಇದೆ ಎಂದು ಬಲತ್ಕಾರವಾಗಿ ಕಾಮಗಾರಿಗೆ ಮುಂದಾಗಿದೆ. ತಹಸೀಲ್ದಾರ್ ಉಪಸ್ಥಿತಿಯಲ್ಲಿ, ಪೊಲೀಸ್ ಇಲಾಖೆಯ ರಕ್ಷಣೆಯಲ್ಲಿ ಜೆಸಿಬಿಯಿಂದ ಫಲವತ್ತಾದ ಗದ್ದೆಗಳ ನಡುವೆಯೇ ಕಾಮಗಾರಿ ನಡೆಸಲಾಗುತ್ತಿದೆ ಎಂದವರು ಹೇಳಿದರು.ಕೃಷಿಯನ್ನು ನಂಬಿಕೊಂಡಿರುವ ರೈತರು, ತಮ್ಮ ಫಲವತ್ತಾದ ಕೃಷಿ ಭೂಮಿ, ತೆಂಗು ಕಂಗು ಬೆಳೆಗಳನ್ನು, ಮನೆಗಳನ್ನು ಕಳೆದುಕೊಳ್ಳುವ ಅಪಾಯ ಬಂದೊದಗಿದೆ. ಹಾಗಾಗಿ ಟವರ್ ಲೈನ್ ನಿರ್ಮಾಣ ಯೋಜನೆಯನ್ನು ಕೈ ಬಿಟ್ಟು, ಪರ್ಯಾಯ ಯೋಜನೆ ಮೂಲಕ ವಿದ್ಯುತ್ ಸರಬರಾಜು ಮಾಡಲು ಸಂಬಂಧಪಟ್ಟವರು ಮುಂದಾಗಬೇಕು ಎಂದವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಅಮರನಾಥ್ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯೆ ರೇಶ್ಮಾ ಉದಯ್ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ದೀಪಕ್ ಕೋಟ್ಯಾನ್, ಸಮಿತಿಯ ಸದಸ್ಯರು ದಿನೇಶ್ ಕೋಟ್ಯಾನ್, ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.ಡಿಸಿ ಉತ್ತರಿಸಬೇಕುಜೂನ್ 12ರಂದು ನಡೆಯುವ ಪ್ರತಿಭಟನೆಯ ಸಂದರ್ಭದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಉಡುಪಿ ಜಿಲ್ಲಾಧಿಕಾರಿಯವರು, ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಬೇಕು. ಜನರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದ ಚಂದ್ರಹಾಸ್ ಶೆಟ್ಟಿ, ಪಕ್ಷಾತೀತವಾಗಿ ನಡೆಯುವ ಪ್ರತಿಭಟನೆಯಲ್ಲಿ ಇನ್ನಾ ಹಾಗೂ ಅದರ ಸುತ್ತಮುತ್ತಲಿನ ಗ್ರಾಮಗಳ ಸಂತ್ರಸ್ತರು, ಉಡುಪಿ ಮತ್ತು ದ.ಕ. ಜಿಲ್ಲೆಯ ಸಮಾನ ಮತ್ತು ರೈತ ಸಂಘಟನೆಗಳು ಭಾಗವಹಿಸಲಿವೆ ಎಂದು ತಿಳಿಸಿದರು.