ಸಾರಾಂಶ
ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಹೆಜ್ಜಾಜಿ, ಕಸಾಘಟ್ಟ. ಐನಹಳ್ಳಿ, ಕಾರೇಪುರ, ವೆಂಕಟೇಶಪುರ ಗ್ರಾಮಗಳಲ್ಲಿ ಬಲವಂತದ ಕೆಎಚ್‌ಬಿ ಭೂ-ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಮಂಗಳವಾರ ದೊಡ್ಡಬಳ್ಳಾಪುರ ನಗರದಲ್ಲಿ ಅನ್ನದಾತರ ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನೆ ನಡೆಯಿತು.
ಇಲ್ಲಿನ ನೆಲದಾಂಜನೇಯಸ್ವಾಮಿ ದೇವಾಲಯದ ಮುಂಭಾಗದಿಂದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆ ತಾಲೂಕು ಕಚೇರಿ ವೃತ್ತದಲ್ಲಿ ಸಮಾಪನಗೊಂಡಿತು. ಬಳಿಕ, ತಾಲೂಕು ಕಚೇರಿ ವೃತ್ತದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಿ, ಭೂಸ್ವಾಧೀನ ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು.ಈ ವೇಳೆ ಮಾತನಾಡಿದ ಮುಖಂಡರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೆಐಎಡಿಬಿ, ಟೌನ್ ಷಿಪ್, ಬಿಡಿಎ, ಕೆಹೆಚ್‌ಬಿ. ಕ್ವಿನ್ ಸಿಟಿ, ಹೊರ ವರ್ತುಲ ರಸ್ತೆ, ಹೆದ್ದಾರಿಗಳು, ಏರೋಸ್ಪೇಸ್, ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಫಲವತ್ತಾದ ಲಕ್ಷಾಂತರ ಎಕರೆ ಕೃಷಿ ಭೂಮಿಯನ್ನು ರೈತರ ಒಪ್ಪಿಗೆ ಇಲ್ಲದೆ ಬಲವಂತವಾಗಿ ಸ್ವಾಧೀನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರೇಷ್ಮೆ ಉತ್ಪಾದನೆಗೆ ಇಡೀ ಭಾರತದಲ್ಲಿಯೇ ನಮ್ಮ ಜಿಲ್ಲೆ ಹೆಸರಾಗಿದೆ. ಲಕ್ಷಾಂತರ ಮಹಿಳೆಯರು ಹಾಲು ಉತ್ಪಾದನೆಯಲ್ಲಿ ತೊಡಗಿದ್ದು, ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯ ಗ್ರಾಮೀಣ ಪ್ರದೇಶವು ರಾಗಿಯ ಕಣಜವಾಗಿದೆ. ನಮ್ಮ ಉತ್ಪನ್ನಗಳಾದ ಹೂವು, ಹಣ್ಣು, ತರಕಾರಿ, ಹಾಲು ಮುಂತಾದ ಪದಾರ್ಥಗಳನ್ನು ರಾಜಧಾನಿ ಮತ್ತು ಇತರೆ ಜಿಲ್ಲೆಗಳ ಜನ ಬಳಸುತ್ತಿದ್ದಾರೆ.ಇಂದಿಗೂ ಕೃಷಿ ಚಟುವಟಿಕೆಗಳು ಸಕ್ರಿಯವಾಗಿರುವ ಗ್ರಾಮಾಂತರ ಜಿಲ್ಲೆಯ ಸಾಮಾಜಿಕ, ಆರ್ಥಿಕ, ಪರಿಸರ ಪರಿಣಾಮಗಳ ಅಧ್ಯಯನ ಇಲ್ಲದೆ ಮಾಡುತ್ತಿರುವ ಬಲವಂತದ ಭೂ-ಸ್ವಾಧೀನದಿಂದ ಆಹಾರ ಭದ್ರತೆಗೆ ದಕ್ಕೆಯಾಗುತ್ತಿದೆ. ಪರಿಸರ ನಾಶದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ದೊಡ್ಡಬೆಳವಂಗಲ ಹೋಬಳಿಗೆ ಸೇರಿದ ಮೇಲ್ಕಂಡ ಐದು ಹಳ್ಳಿಗಳ 2670 ಎಕರೆ ಭೂಮಿಯಲ್ಲಿ ಅಡಿಕೆ, ತೆಂಗು, ರೆಷ್ಮೆ, ತರಕಾರಿ ಬೆಳೆಯುವ ತೋಟಗಳಿವೆ. ಕೋಳಿ, ಕುರಿ ಸಾಕಣೆ ಕೇಂದ್ರಗಳಿವೆ. ರೈತರ ಗಮನಕ್ಕೆ ತರದೆ. ಗ್ರಾಮ ಸಭೆಗಳನ್ನು ನಡೆಸದೆ. ಸ್ಥಳೀಯ ಆಡಳಿತದ ಒಪ್ಪಿಗೆಯನ್ನು ಪಡೆಯದೆ ಇಂತಹ ಫಲವತ್ತಾದ ಕೃಷಿ ಭೂಮಿಯನ್ನು ಕರ್ನಾಟಕ ಗೃಹ ಮಂಡಳಿಯು ಸ್ವಾಧೀನ ಪಡಿಸಿಕೊಳ್ಳಲು ಹೊರಟಿರುವುದು ರೈತ ವಿರೋಧಿ ಹಾಗೂ ಜೀವ ವಿರೋಧಿಯಾಗಿದೆ. ಕೃಷಿಯನ್ನು ಬಿಟ್ಟು ಬೇರೆ ಉದ್ಯೋಗಗಳನ್ನು ಮಾಡಲು ಗೊತ್ತಿರದ ಬಹುಪಾಲು ಸಣ್ಣ ರೈತರನ್ನು ಕೃಷಿ ಭೂಮಿಯಿಂದ ಹೊರದಬ್ಬುವುದು ಅತ್ಯಂತ ಕ್ರೂರ ಮತ್ತು ಅಮಾನವೀಯ ಕ್ರಮವಾಗಿದೆ. ಇದರಿಂದ ರೈತರ ಬದುಕೆ ನಾಶವಾಗುತ್ತದೆ. ಸರ್ಕಾರ ತಾವೇ ರೂಪಿಸಿದ ಭೂ-ಸ್ವಾಧೀನ ಕಾಯ್ದೆಗಳ ನಿಯಮಗಳನ್ನು ಉಲ್ಲಂಘನೆ ಮಾಡುವ ಮೂಲಕ ಭೂ ಮಾಲೀಕ ಶಕ್ತಿಗಳನ್ನು ಸೃಷ್ಟಿ ಮಾಡುವ ಮೂಲಕ ಬಾಬಾ ರಾಮ್ ದೇವ್, ಅಂಬಾನಿ, ಅದಾನಿ. ರಿಯಲ್ ಎಸ್ಟೇಟ್. ಕಾರ್ಪೊರೇಟ್ ಬಂಡವಾಳಿಗರಿಗೆ ಲಕ್ಷಾಂತರ ಎಕರೆ ಭೂಮಿಯನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು.ರೈತರಲ್ಲದವರು ಕೃಷಿ ಭೂಮಿಯನ್ನು ಖರೀಸುವ ಕಾನೂನುಗಳನ್ನು ಜಾರಿ ಮಾಡಲಾಗಿದೆ. ಮಂತ್ರಿಗಳು, ಮಾಜಿ ಮಂತ್ರಿಗಳು, ಜನ ಪ್ರತಿನಿಧಿಗಳು, ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿಯ ಒಡೆಯರಾಗಿದ್ದಾರೆ. ಭೂಮಿ ಭೂಗಳ್ಳರ ಪಾಲಾಗುತ್ತಿದೆ. ಆದ್ದರಿಂದ ಅನ್ನದಾತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು. ರೈತ ವಿರೋಧಿ ಕೃಷಿ ನೀತಿಗಳನ್ನು ಹಿಮ್ಮೆಟ್ಟಿಸಲು ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಭಾಗಿಯಾದರು. ಭೂಸ್ವಾದೀನ ವಿರೋಧಿ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು, ಕನ್ನಡ ಪಕ್ಷ, ವಿವಿಧ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ ಕೆಲ ಮುಖಂಡರು, ರೈತ, ಕಾರ್ಮಿಕ, ಪ್ರಗತಿಪರ ಸಂಘಟನೆಗಳ ಹತ್ತಾರು ಮುಖಂಡರು ಪಾಲ್ಗೊಂಡಿದ್ದರು.ಇದಕ್ಕೂ ಮುನ್ನ, ಕರ್ನಾಟಕ ಗೃಹ ಮಂಡಲಿ ಭೂ-ಸ್ವಾಧೀನ ವಿರೋಧಿಸಿ ದೊಡ್ಡಹೆಜ್ಜಾಜಿ, ಕಸಾಘಟ್ಟ, ಐನಹಳ್ಳಿ, ಕಾರೇಪುರ, ವೆಂಕಟೇಶಪುರ ಗ್ರಾಮಗಳಲ್ಲಿ ರೈತರಿಂದ ರೈತರ ಬೃಹತ್ ಟ್ರಾಕ್ಟರ್ ರ್ಯಾಲಿ ನಡೆಯಿತು.
28ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ಭೂಸ್ವಾಧೀನ ವಿರೋಧಿಸಿ ಅನ್ನದಾತರ ಬೃಹತ್ ಪ್ರತಿಭಟನೆ ನಡೆಯಿತು.)
)
;Resize=(128,128))
;Resize=(128,128))