ಹುಬ್ಬಳ್ಳಿಯಲ್ಲಿ ಆಟೋ ಚಾಲಕರಿಂದ ಬೃಹತ್‌ ಪ್ರತಿಭಟನೆ

| Published : Nov 26 2024, 12:51 AM IST

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ 400ಕ್ಕೂ ಹೆಚ್ಚು ಆಟೋ ರಿಕ್ಷಾ ನಿಲ್ದಾಣಗಳಿದ್ದು, ಅವುಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಹಾಗೂ ಮಹಾನಗರ ಪಾಲಿಕೆಯ ವತಿಯಿಂದ ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಸಲ್ಲಿಕೆ.

ಹುಬ್ಬಳ್ಳಿ:

ಹು-ಧಾ ಮಹಾನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಆಟೋ ನಿಲ್ದಾಣ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘಟನೆ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಜರುಗಿತು.

ನಗರದ ಚೆನ್ನಮ್ಮ ವೃತ್ತದಿಂದ ತಹಸೀಲ್ದಾರ್ ಕಚೇರಿಯ ವರೆಗೆ ನಡೆದ ಬೃಹತ್‌ ಪ್ರತಿಭಟನಾ ರ‍್ಯಾಲಿಯಲ್ಲಿ ನೂರಾರು ಆಟೋ ಚಾಲಕರು ಮತ್ತು ಮಾಲೀಕರು ಭಾಗವಹಿಸಿದ್ದರು. ಈ ವೇಳೆ ಜಿಲ್ಲಾಡಳಿತ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಿರುದ್ಧ ವಿವಿಧ ಘೋಷಣೆ ಕೂಗಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮಹಾನಗರದಲ್ಲಿ 400ಕ್ಕೂ ಹೆಚ್ಚು ಆಟೋ ರಿಕ್ಷಾ ನಿಲ್ದಾಣಗಳಿದ್ದು, ಅವುಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಹಾಗೂ ಮಹಾನಗರ ಪಾಲಿಕೆಯ ವತಿಯಿಂದ ಮೇಲ್ದರ್ಜೆಗೇರಿಸಬೇಕು. ಆಟೋ ರಿಕ್ಷಾ ಪರ್ಮಿಟ್ ಅವಧಿ ಮುಗಿದಲ್ಲಿ ಆರ್‌ಟಿಒ ಕಚೇರಿಯ ಅಧಿಕಾರಿಗಳು ತಿಂಗಳಿಗೆ ₹ 50 ದಂಡ ವಿಧಿಸುತ್ತಿದ್ದಾರೆ. ಅದರಿಂದ ಆಟೋ ಚಾಲಕರಿಗೆ ಆರ್ಥಿಕ ಹೊರೆಯಾಗುತ್ತಿದ್ದು, ಅದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಹು-ಧಾ ಮಹಾನಗರದ ಆರ್‌ಟಿಒ ಕಚೇರಿಯಲ್ಲಿ ಆಟೋ ರೀಕ್ಷಾ ಚಾಲಕರಿಗೆ ಪ್ರತ್ಯೇಕ ಟ್ರೈಯಲ್ ನೀಡುವ ಮೂಲಕ ಚಾಲನಾ ಪತ್ರ (ಲೈಸನ್ಸ್‌) ನೀಡಬೇಕು. ನಗರದಲ್ಲಿ ಸಂಚರಿಸುತ್ತಿರುವ ಟಾಟಾ ಎಸ್, ಮಿನಿಡೋರ್, ಕ್ರೋಜರ್, ಖಾಸಗಿ ವಾಹನಗಳನ್ನು ನಗರದಿಂದ 4-5 ಕಿಮೀ ದೂರ ಇಡಬೇಕು ಎಂದು ಒತ್ತಾಯಿಸಿದರು.

ನಂತರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಸ್ಮಾರ್ಟ್‌ಸಿಟಿ ಹಾಗೂ ಆರ್‌ಟಿಒ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ, ದಾವಲಸಾಬ ಕುರಹಟ್ಟಿ, ರಫೀಕ ಕುಂದಗೋಳ, ಮುರಳಿ ಇಂಗಳಹಳ್ಳಿ, ಮಹಾವೀರ ಬಿಲಾನಾ, ರಾಜೇಶ ಬಿಜವಾಡ, ಶಂಕರ ಆಚಾರ್ಯ, ಶ್ರೀಕಾಂತ ಘಡದ, ಮಹೇಶ ದೊಡ್ಡಮನಿ, ಅಣ್ಣಪ್ಪ ಗುಡಿಹಾಳ, ಮಾರುತಿ ಅಂಚಟಗೇರಿ, ಆರೀಫ್, ದಾವುದಲಿ ಶೇಖ, ಮಂಜು ಮುಳಗುಂದ, ಅಮರ, ಶಬ್ಬೀರ ಜಮೀನುದಾರ, ಇಸೂಬ್ ಜಾಲಗಾರ, ಶ್ರೀಕಾಂತ ದಾಸ್, ಮಲ್ಲಿಕಾರ್ಜುನ ನಂದಿಹಾಳ, ಕಲ್ಲಪ್ಪ ಅಣ್ಣಿಗೇರಿ, ನಿಂಗಪ್ಪ ಗೊರಕ್ಕನವರ ಸೇರಿದಂತೆ ಹಲವರಿದ್ದರು.