ಕಟ್ಟಡ ಕಾರ್ಮಿಕರ ಬೃಹತ್ ಪ್ರತಿಭಟನೆ

| Published : Jul 15 2025, 11:45 PM IST

ಸಾರಾಂಶ

ಕಾರ್ಮಿಕರ ನೋಂದಣಿಗೆ ಕುಟುಂಬ ಐಡಿ ಅಪ್ಲಿಕೇಶನ್ ರದ್ದು ಮಾಡಬೇಕು. ನೈಜ ಕಾರ್ಮಿಕರ ಅರ್ಜಿ ತಿರಸ್ಕಾರ ಮಾಡುವುದನ್ನು ನಿಲ್ಲಿಸಬೇಕು. ಸೇವಾ ಸಿಂಧುವಿನಲ್ಲಿ ಮಂಜೂರಿಯಾದ ಫಲಾನುಭವಿಗಳಿಗೆ ಕೂಡಲೇ ಬಾಂಡ್ ನೀಡುವುದು ಸೇರಿದಂತೆ ಹಲವಾರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಯಿತು.

ಕೊಪ್ಪಳ:

ಕಾರ್ಮಿಕ ಇಲಾಖೆಯಲ್ಲಿನ ಅಕ್ರಮ ತಡೆಗಟ್ಟಬೇಕು ಮತ್ತು ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಜಿಲ್ಲೆಗಳ ನೋಂದಾಯಿತ ಕಾರ್ಮಿಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಕಟ್ಟಡ ಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸಿದರು.

ಕಾರ್ಮಿಕರ ನೋಂದಣಿಗೆ ಕುಟುಂಬ ಐಡಿ ಅಪ್ಲಿಕೇಶನ್ ರದ್ದು ಮಾಡಬೇಕು. ನೈಜ ಕಾರ್ಮಿಕರ ಅರ್ಜಿ ತಿರಸ್ಕಾರ ಮಾಡುವುದನ್ನು ನಿಲ್ಲಿಸಬೇಕು. ಸೇವಾ ಸಿಂಧುವಿನಲ್ಲಿ ಮಂಜೂರಿಯಾದ ಫಲಾನುಭವಿಗಳಿಗೆ ಕೂಡಲೇ ಬಾಂಡ್ ನೀಡುವುದು ಸೇರಿದಂತೆ ಹಲವಾರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಯಿತು.

ಕಾರ್ಮಿಕರ ಹೆಸರಿನಲ್ಲಿ ಕಾರ್ಮಿಕ ಇಲಾಖೆಯಲ್ಲಿ ಲೂಟಿ ಹೊಡಲಾಗುತ್ತಿದೆ. ಕಾರ್ಮಿಕರ ಹಣ ಎಜೆನ್ಸಿಗಳ ಮೂಲಕ ಇನ್ನಿಲ್ಲದ ಸ್ಕೀಂ ಹೆಸರಿನಲ್ಲಿ ಬೋಗಸ್ ಬಿಲ್ ಮಾಡಿ ಎತ್ತಿ ಹಾಕಲಾಗುತ್ತಿದೆ. ಕಾರ್ಮಿಕರ ಕಲ್ಯಾಣನಿಧಿ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ಕೇವಲ ಐದು ರುಪಾಯಿ ಜಿಲ್ಲಾಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಕ್ಕೆ ಚಿಕಿತ್ತಾ ಶಿಬಿರದ ಹೆಸರಿನಲ್ಲಿ ಪ್ರತಿ ಕಾರ್ಮಿಕರಿಗೆ ಮೂರುವರೆ ಸಾವಿರ ಖರ್ಚು ಹಾಕಿ, ಪ್ರತಿ ಜಿಲ್ಲೆಗೆ ₹9 ಕೋಟಿಗೂ ಅಧಿಕ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕಿಡಿಕಾರಿದರು. ಇದೆಲ್ಲವನ್ನು ತನಿಖೆ ಮಾಡಿ, ಕಾರ್ಮಿಕರ ಕಲ್ಯಾಣ ನಿಧಿ ಬಳಕೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಲಾಯಿತು.

ಅಧ್ಯಕ್ಷ ರಮೇಶ ಜಿ. ಘೋರ್ಪಡೆ, ಉಪಾಧ್ಯಕ್ಷ ಶರಣಪ್ಪ ರೊಟ್ಟಿ, ಕಾರ್ಯದರ್ಶಿ ಮೆಹಬೂಬಸಾಬ್‌ ಮಣ್ಣೂರು, ಖಜಾಂಜಿ ಮಹೇಶ ಗೋಡೆಕಾರ ಶಿವಕುಮಾರ ಸೇರಿದಂತೆ ಅನೇಕರು ಇದ್ದರು.