ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಆದಿವಾಸಿಗಳಿಗೆ ಒಳ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ವತಿಯಿಂದ ನಗರದಲ್ಲಿ ಬೃಹತ್ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ನಗರದ ಲ್ಯಾಂಪ್ಸ್ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆಯಲ್ಲಿ ಗುಂಡ್ಲುಪೇಟೆ ವೃತ್ತ ಡಿವಿಯೇಷನ್ ರಸ್ತೆ, ಪಚ್ಚಪ್ಪ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಮೆರವಣಿಯುದ್ದಕ್ಕೂ ನಮಗೆ ಒಳ ಮೀಸಲಾತಿ ನೀಡಿ ನಮ್ಮನ್ನು ರಕ್ಷಿಸಿ ಎಂಬ ಘೋಷಣೆಗಳನ್ನು ಕೂಗಿದರು. ಜಿಲ್ಲಾಡಳಿತ ಭವನದ ಆವರಣದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಡಳಿತದ ಮೂಲಕ ಒಳ ಮೀಸಲಾತಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಜಿಲ್ಲೆಯ ಹನೂರು, ಕೊಳ್ಳೇಗಾಲ, ಚಾಮರಾಜನಗರ, ಯಳಂದೂರು ಮತ್ತು ಗುಂಡ್ಲುಪೇಟೆ ತಾಲೂಕುಗಳ ಬಿಳಿಗಿರಿರಂಗಸ್ವಾಮಿ ದೇವಸ್ಥಾನ ಹುಲಿ ಯೋಜನೆ ಮಲೆ ಮಹದೇಶ್ವರ ವನ್ಯಜೀವಿಧಾಮ, ಬಂಡಿಪುರ ಹುಲಿ ಯೋಜನೆ ಮತ್ತು ಕಾವೇರಿ ವನ್ಯಜೀವಿ ಧಾಮ ಅರಣ್ಯ ಪ್ರದೇಶದಲ್ಲಿ ೪೫ ಸಾವಿರ ಆದಿವಾಸಿಗಳಾದ ಸೋಲಿಗರು, ಜೇನು ಕುರುಬ (ಬೆಟ್ಟಕುರುಬ) ಸಮುದಾಯಗಳು ವಾಸವಾಗಿದ್ದೇವೆ.೧೯೫೮ನೇ ಸಾಲಿನಲ್ಲಿ ಎಸ್ಸಿ, ಎಸ್ಟಿ ಜನಸಂಖ್ಯೆ ಮತ್ತು ಅವು ಒಳಗೊಳ್ಳುವ ಜಾತಿಗಳ ಸಂಖ್ಯೆಯಂತೆ ಅನುಸೂಚಿತ ಜಾತಿಗಳಿಗೆ ಶೇ.೧೫ ಹಾಗೂ ಅನುಸೂಚಿತ ಪಂಡಗಳಿಗೆ ಶೇ.೩ ಹಿಂದುಳಿದ ವರ್ಗಗಳಿಗೆ ಶೇ.೩೨ರಷ್ಟು ಮೀಸಲಾತಿ ಕಲ್ಪಿಸಿ ಆದೇಶವಾಗಿದೆ ಎಂದರು.ನಿವೃತ್ತ ನ್ಯಾಯಮೂರ್ತಿ, ನಾಗಮೋಹನದಾಸ್ ಅವರು ಎಸ್ಸಿ, ಎಸ್ಟಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು. ಅದರಂತೆ ಎಸ್ಪಿಗೆ ಶೇ.೧೫ ರಿಂದ ೧೭ಕ್ಕೆ ಏರಿಸಬೇಕು. ಎಸ್ಪಿಗೆ ಶೇ.೩ ಅನ್ನು ಶೇ.೭.೫ಕ್ಕೆ ಏರಿಸಬೇಕು ಎಂದು ವರದಿ ನೀಡಿದ್ದು ಆದಿವಾಸಿಗಳು ಮೀಸಲಾತಿಯಿಂದ ವಂಚಿತರಾಗಿದ್ದು ಅವರಿಗೆ ವಿಶೇಷವಾಗಿ ಮೀಸಲಾತಿಯಲ್ಲಿ ಗಮನಹರಿಸಬೇಕೆಂದು ವರದಿಯಲ್ಲಿ ತಿಳಿಸಿದ್ದಾರೆ. ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸರ್ವೋಚ್ಛ ೨ ನ್ಯಾಯಾಲಯವು ಎಸ್ಸಿ, ಎಸ್ಟಿಗೆ ಆಂತರಿಕೆ ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಯಾವುದೇ ತಡೆ ಇಲ್ಲ ಎಂದು ತೀರ್ಪು ನೀಡಿದೆ. ಆದರೆ ಎಸ್ಪಿಯಲ್ಲಿರುವ ೫೦ ಅನುಸೂಚಿತ ಪಂಗಡಗಳಿಗೆ ಒಳಮೀಸಲಾತಿ ನೀಡುವ ಕುರಿತು ಯಾವುದೇ ತಿರ್ಮಾನ ತೆಗೆದುಕೊಂಡಿರುವುದಿಲ್ಲ. ಇದರಿಂದ ಅರಣ್ಯ ಆದಿವಾಸಿಗಳಿಗೆ ಅನ್ಯಾಯವಾಗಿದೆ, ಆದ್ದರಿಂದ ಅರಣ್ಯ ಆದಿವಾಸಿಗಳಿಗೆ ಶೇ.೩ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.ಶೇ.೩% ಮೀಸಲಾತಿಯನ್ನೇ ೫೦ ಪಂಗಡಗಳು ಮತ್ತು ಅವುಗಳಲ್ಲಿ ಬಲಾಢ್ಯ ಸಮುದಾಯಗಳು ಬಳಸಿಕೊಳ್ಳುತ್ತೇವೆ, ಅದರೆ ಅರಣ್ಯ ಅದಿವಾಸಿಗಳು ಮೀಸಲಾತಿಯ ಉಪಯೋಗದಿಂದ ವಂಚಿತರಾಗಿದ್ದಾರೆ, ಆದ್ದರಿಂದ ನಮಗೆ ಒಳ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಡಾ.ಸಿ.ಮಾದೇಗೌಡ, ಮುತ್ತಯ್ಯ, ದಾಸೇಗೌಡ, ಕೇತಮ್ಮ ಕೋಣೂರೇಗೌಡ, ರಂಗೇಗೌಡ ದೊಡ್ಡಸಿದ್ದಯ್ಯ, ಮಾದು, ಜಡೇಸ್ವಾಮಿ, ಬಸವರಾಜು, ಸೇರಿದಂತೆ ಚಾಮರಾಜನಗರ, ಹನೂರು, ಯಳಂದೂರು, ಕೊಳ್ಳೇಗಾಲ, ಗುಂಡ್ಲುಪೇಟೆ, ತಾಲೂಕು ಸಂಘಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.