ಜನಿವಾರ ತೆಗೆಸಿದ್ದನ್ನು ವಿರೋಧಿಸಿ ಶಿರಸಿಯಲ್ಲಿ ಬೃಹತ್ ಪ್ರತಿಭಟನೆ

| Published : Apr 23 2025, 12:31 AM IST

ಜನಿವಾರ ತೆಗೆಸಿದ್ದನ್ನು ವಿರೋಧಿಸಿ ಶಿರಸಿಯಲ್ಲಿ ಬೃಹತ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ರಾಘವೇಂದ್ರ ಮಠದ ಸಭಾಭವನದಲ್ಲಿ ಜರುಗಿದ ಖಂಡನಾ ಸಭೆಯಲ್ಲಿ ೧೫೦೦ಕ್ಕೂ ಅಧಿಕ ಬ್ರಾಹ್ಮಣರು ಭಾಗವಹಿಸಿದ್ದರು.

ಶಿರಸಿ: ಬೀದರ್‌, ಶಿವಮೊಗ್ಗ ಒಳಗೊಂಡಂತೆ ಇನ್ನಿತರ ಕಡೆಗಳಲ್ಲಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಸಿದ ವಿಷಯಕ್ಕೆ ಸಂಬಂಧಿಸಿದಂತೆ ಸ್ವರ್ಣವಲ್ಲಿ ಮಠ, ಸೋದೆ ವಾದಿರಾಜ ಮಠ, ಸಿದ್ದಾಪುರದ ನೆಲೆಮಾಂವು ಮಠ, ಶಿರಸಿ ಜೀವಜಲ ಕಾರ್ಯಪಡೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಗಳ ಸಂಯುಕ್ತ ಆಶ್ರಯದಲ್ಲಿ ನಗರದ ರಾಘವೇಂದ್ರ ಮಠದ ಸಭಾಭವನದಲ್ಲಿ ಖಂಡನಾ ಸಭೆ ನಡೆಸಿ, ಬೃಹತ್ ಮೆರವಣಿಗೆ ನಡೆಸಲಾಯಿತು.

ನಗರದ ರಾಘವೇಂದ್ರ ಮಠದ ಸಭಾಭವನದಲ್ಲಿ ಜರುಗಿದ ಖಂಡನಾ ಸಭೆಯಲ್ಲಿ ೧೫೦೦ಕ್ಕೂ ಅಧಿಕ ಬ್ರಾಹ್ಮಣರು ಭಾಗವಹಿಸಿದ್ದರು. ನಂತರ ಸಹಾಯಕ ಆಯುಕ್ತರ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಯಜ್ಞೋಪವೀತಂ ಪರಮಂ ಪವಿತ್ರಂ, ಧಿಕ್ಕಾರ ಧಿಕ್ಕಾರ ರಾಜ್ಯ ಸರ್ಕಾರಕ್ಕೆ, ಜನಿವಾರ ತೆಗೆಸಿದ ಅಧಿಕಾರಿಗಳಿಗೆ ಧಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಖಂಡನಾ ಸಭೆಯನ್ನು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಉದ್ಘಾಟಿಸಿ ಮಾತನಾಡಿ, ಬ್ರಾಹ್ಮಣ ಎಂಬುದು ಜಾತಿಯಲ್ಲ. ಇದೊಂದು ತತ್ವ-ಸಿದ್ಧಾಂತ, ಆದರ್ಶ. ಜಾತಿ ಎಂದು ತಿಳಿದುಕೊಂಡು ಪ್ರಹಾರ ಮಾಡುತ್ತಿರುವುದು ನಿಮ್ಮ ಮೇಲೆ ನೀವೇ ಉಗುಳಿಕೊಂಡಂತೆ. ಜನಿವಾರಕ್ಕೆ ತನ್ನದೇ ಆದ ಸಂಸ್ಕಾರ-ಸಂಸ್ಕೃತಿಯಿದೆ. ಇವೆಲ್ಲವೂ ದುರುದ್ದೇಶದಿಂದ ಮಾಡುತ್ತಿರುವ ಕೃತ್ಯ. ಬ್ರಾಹ್ಮಣರನ್ನು ಹೆದರಿಸುವ ಉದ್ದೇಶ ನಿಮ್ಮದಾಗಿದ್ದರೆ ಅದು ಸಫಲವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಅಧಿಕಾರದಲ್ಲಿರುವವರು ಔರಂಗಜೇಬನ ವಂಶದವರು. ಹಿಂದೂಗಳನ್ನು ನಾಶ ಮಾಡಬೇಕೆಂಬ ಉದ್ದೇಶದಿಂದ ಇಂತಹ ನೀಚ ಕೃತ್ಯವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ಜನಿವಾರ ತುಂಡರಿಸಲು ಸಿದ್ದರಾಮಯ್ಯನವರೇ ಮೌಖಿಕ ಆದೇಶ ನೀಡಿದ್ದಾರೆಂಬ ಅನುಮಾನವಿದೆ. ಸಿಎಂ ಸುತ್ತ ಕಮ್ಯುನಿಸ್ಟ್‌ರು ಕೂಡಿರುವುದರಿಂದ ಪ್ರತಿನಿತ್ಯ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಗರ್ಭದಿಂದ ಹಿಡಿದು ಸ್ಮಶಾನದವರೆಗೆ ಸಿದ್ಧಾಂತ ಕೂಡಿರುವ ಬ್ರಾಹ್ಮಣರು ಬೇಕು. ರ‍್ಯಾಂಕ್ ಬರುವ ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಇದರ ಹಿಂದಿದೆ ಎಂದು ಹೇಳಿದರು.ಗೋ ಹಂತಕರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸರ್ವಧರ್ಮ ಸಮ್ಮೇಳನ ಮಾಡುವುದನ್ನು ನಿಲ್ಲಿಸಬೇಕು. ಬ್ರಾಹ್ಮಣ್ಯಕ್ಕೆ ಅವಮಾನವಾದರೆ ಶಸ್ತ್ರ, ಶಾಸ್ತ್ರದೊಂದಿಗೆ ಹೋರಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು.ನಿವೃತ್ತ ಪ್ರಾಚಾರ್ಯ ವಿದ್ಯಾವಾಚಸ್ಪತಿ ವಿ.ಉಮಾಕಾಂತ ಭಟ್ಟ ಕೆರೆಕೈ ಮಾತನಾಡಿ, ೬೦ ಸಾವಿರ ವರ್ಷಗಳ ಹಿಂದೆ ಯಜ್ಞೋಪವೀತದ ಉಲ್ಲೇಖವಿದೆ. ೯೬ ತತ್ವಗಳ ಹಂದರ ಯಜ್ಞೋಪವೀತದಲ್ಲಿದೆ. ಎಲ್ಲರಿಗೂ ಫಲ ಬೇಕು. ಆದರೆ ಯಾರಿಗೂ ಸಾಧನ ಬೇಡವಾಗಿದೆ. ಬ್ರಾಹ್ಮಣರು ತಮ್ಮ ತನವನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಹೃದಯದಲ್ಲಿ ಆದರ್ಶ ತುಂಬಿಕೊಂಡು ತಲೆ ಎತ್ತಿ ನಿಲ್ಲಬೇಕು ಎಂದರು.

ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.

ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಶ್ರೀಪಾದ ರಾಯ್ಸದ್ ಪ್ರಾಸ್ತಾವಿಕ ಮಾತನಾಡಿದರು. ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ಬ್ರಾಹ್ಮಣ ಮಹಾಸಭಾದ ಜಿಲ್ಲಾ ಸದಸ್ಯೆ ನಿರ್ಮಲಾ ಹೆಗಡೆ ಕರ್ಕಿ ಉಪಸ್ಥಿತರಿದ್ದರು.

ಕೆ.ವಿ.ಭಟ್ಟ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಬ್ರಾಹ್ಮಣ ಸಂಘಗಳ ಮುಖಂಡರು, ಮಠಗಳ ಭಕ್ತರು ಸೇರಿದಂತೆ ಸಾವಿರಾರು ಸಾರ್ವಜನಿಕರು ಭಾಗವಹಿಸಿದ್ದರು.

ನಿರ್ಣಯಗಳು:

೧) ಜನಿವಾರ ತೆಗೆಯುವುದಾಗಲಿ, ತುಂಡರಿಸುವುದು ಖಂಡನೀಯ

೨) ಜನಿವಾರ ಧರಿಸಿ ಬಂದಿದ್ದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಕೊಡದೆ ವಾಪಸ್‌ ಕಳಸಿದ್ದು ಖಂಡನೀಯ ಮತ್ತು ಆ ವಿದ್ಯಾರ್ಥಿಗೆ ಪೂರ್ಣಾಂಕ ನೀಡಬೇಕು. ಇಲ್ಲವಾದಲ್ಲಿ ಉಚಿತ ಎಂಜಿನಿಯರಿಂಗ್ ಸೀಟು ನೀಡಬೇಕು.

೩) ಜನಿವಾರ ತೆಗೆಸಿದ, ತುಂಡರಿಸಿದ ಅಧಿಕಾರಿಗಳನ್ನು ವಜಾಗೊಳಿಸಬೇಕು.

೪) ಇಡಬ್ಲ್ಯುಎಸ್‌ ಕೂಡಲೇ ಜಾರಿ ಮಾಡಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಮತ್ತು ಅದರ ಮಾನದಂಡದಲ್ಲಿ ಬದಲಾವಣೆ ಮಾಡಬೇಕು. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಸಿಇಟಿ ಪರೀಕ್ಷಾ ಮಂಡಳಿಯ ನಿಯಮಗಳಲ್ಲಿರುವ ಹಲವು ಅಸಂಗತಗಳನ್ನು ಕರಾರುವಕ್ಕಾಗಿ ಪರಿಷ್ಕರಿಸಿ ಸುಸಂಬದ್ಧಗೊಳಿಸಬೇಕು.೫) ಈಗ ಚರ್ಚೆಯಲ್ಲಿರುವ ಜಾತಿಗಣತಿ ಅವೈಜ್ಞಾನಿಕವಾಗಿದ್ದು, ಕೂಡಲೇ ಅದನ್ನು ತಿರಸ್ಕರಿಸಿ ಹೊಸದಾಗಿ ಜಾತಿ ಗಣತಿ ಮಾಡಬೇಕು.

೬) ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಅದರ ಕಾರ್ಯಕ್ಷಮತೆಗೆ ಬಲ ತುಂಬಬೇಕು.