ಭದ್ರಾ ಮೇಲ್ದಂಡೆ ಯೋಜನೆಗೆ 5.97 ಟಿಎಂಸಿ ನೀರು ಹರಿಸುವುದನ್ನು ನಿಲ್ಲಿಸಿ, ಬತ್ತಿ ಬಾಯಾರಿರುವ ಹರಿಹರ ತಾಲೂಕಿನ ರೈತರ ಗದ್ದೆಗಳಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ, ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಾದ ನಮ್ಮ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿ ಹರಿಹರ ತಾಲೂಕಿನ ರೈತರು, ಗುರುವಾರ ನಗರದಲ್ಲಿ ಎನ್‌ಡಿಎ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

- ಹರಿಹರ ಶಾಸಕ ಬಿ.ಪಿ.ಹರೀಶ್‌ ನೇತೃತ್ವ । ಸರ್ಕಾರ ವಿರುದ್ಧ ಧಿಕ್ಕಾರ ಕೂತಿದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು - - -

ಕನ್ನಡಪ್ರಭ ವಾರ್ತೆ ಹರಿಹರ

ಭದ್ರಾ ಮೇಲ್ದಂಡೆ ಯೋಜನೆಗೆ 5.97 ಟಿಎಂಸಿ ನೀರು ಹರಿಸುವುದನ್ನು ನಿಲ್ಲಿಸಿ, ಬತ್ತಿ ಬಾಯಾರಿರುವ ಹರಿಹರ ತಾಲೂಕಿನ ರೈತರ ಗದ್ದೆಗಳಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ, ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಾದ ನಮ್ಮ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿ ಹರಿಹರ ತಾಲೂಕಿನ ರೈತರು, ಗುರುವಾರ ನಗರದಲ್ಲಿ ಎನ್‌ಡಿಎ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನಗರದ ಶಿವಮೊಗ್ಗ- ಹೊಸಪೇಟೆ ರಸ್ತೆಯ ಪಕ್ಕದ ನೀರಾವರಿ ನಿಗಮದ ಗಣೇಶ ದೇವಸ್ಥಾನದಿಂದ ಹೊರಟ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ, ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ರೈತರು, ಅಡಕೆ ಬೆಳೆಗಾರರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಕೆಲವು ರೈತರು ಬೇಕೇ ಬೇಕು ನಮ್ಮ ಗದ್ದೆಗೆ ಭದ್ರಾ ನೀರು ಬೇಕೇ ಬೇಕು, ಬತ್ತಿ ಬಾಯಾರಿರುವ ನಮ್ಮ ಗದ್ದೆಯಲ್ಲಿನ ಭತ್ತದ ಬೆಳೆಗೆ ನೀರು ಹರಿಸಿ. ಉದುರುತ್ತಿರುವ ಅಡಕೆಯ ಹರಳು ನಿಲ್ಲಲು ಅಡಕೆ ಬೆಳೆಗೆ ನೀರು ಹರಿಸಿ ಎಂದು ಘೋಷಣೆ ಕೂಗಿದರು. ರೈತ ಮಹಿಳೆಯರು ಸೇರಿದಂತೆ ಎಲ್ಲರೂ ಬೆಂಬಲಿಸಿದರು. ನಗರದ ಹರಪನಹಳ್ಳಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ರೈತರ ಬೆಳೆಗಳು ಹಾಗೂ ಮುಂದಿನ ಕೃಷಿ ಹಂಗಾಮಿನ ಅಗತ್ಯತೆಗಳನ್ನು ಪರಿಗಣಿಸಿ ವೈಜ್ಞಾನಿಕವಾಗಿ ನೀರು ಹಂಚಿಕೆ ಮಾಡಬೇಕು. ಗುಟ್ಕಾ ನಿಷೇಧದ ದುಷ್ಪರಿಣಾಮ ಅಡಕೆ ಬೆಳೆಗಾರರ ಮೇಲೆ ಬೀಳದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಅಡಕೆ ಬೆಳೆಗಾರರ ಆರ್ಥಿಕ ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಂಡು, ಜತೆಗೆ ರೈತರೊಂದಿಗೆ ಸಮಾಲೋಚನೆ ನಡೆಸದೇ ರೈತರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ನಿರ್ಧಾರಗಳನ್ನು ಕೈಗೊಳ್ಳಬಾರದು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ತಕ್ಷಣ ರೈತ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಬೇಕು. ಭದ್ರಾ ನೀರು ಹಾಗೂ ಅಡಕೆ ಬೆಳೆಗಾರರ ಸಮಸ್ಯೆಗಳ ಕುರಿತು ಸರ್ಕಾರವನ್ನು ಎಚ್ಚರಿಸುವುದಕ್ಕಾಗಿ ಎನ್‌ಡಿಎ ವತಿಯಿಂದ ಈ ಬೃಹತ್ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಶಾಸಕ ಹರೀಶ್ ಹೇಳಿದರು.

ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಸರ್ಕಾರ ನೀಡಿರುವ ಆದೇಶಗಳತ್ತ ಗಮನಹರಿಸದೇ, ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗ ಹರಿಹರ ತಾಲೂಕಿನ ರೈತರ ಜಮೀನುಗಳಿಗೆ ನೀರನ್ನು ಹರಿಸಲು ಜಿಲ್ಲಾಧಿಕಾರಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಭದ್ರಾ ಅಣೆಕಟ್ಟು ನಿರ್ಮಾಣದ ಇತಿಹಾಸವೇ ಬೇರಿದೆ. ಭದ್ರಾ ಆಣೆಕಟ್ಟನ್ನು ನಮಗಾಗಿ ನಿರ್ಮಿಸಿದ್ದು ಎಂದು ನಂಬಿರುವ ಈ ಭಾಗದ ರೈತರ ಭೂಮಿಗೆ ಇಲ್ಲಿಯವರೆಗೂ ಸರ್ಮಪಕ ನೀರು ಹರಿಸಲು ಕಾಡಾ ಪ್ರಾಧಿಕಾರ ಏಕೆ ಮುಂದಾಗುತ್ತಿಲ್ಲ? ಕಾಡಾ ಪ್ರಾಧಿಕಾರ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಹರಿಹರ ತಾಲೂಕಿನ ರೈತರ ಭೂಮಿಗೆ ಸರ್ಮಪಕ ನೀರು ಹರಿಸಲು ಹಿಂದೇಟು ಹಾಕುತ್ತಿರುವುದರಿಂದಲೇ ಈ ಭಾಗದ ರೈತರು ನೀರಿಗಾಗಿ ಬೀದಿಗಿಳಿದು ಹೋರಾಟ ನಡೆಸಲು ಪ್ರಮುಖ ಕಾರಣವಾಗಿದೆ ಎಂದರು.

ಹರಿಹರ ತಾಲೂಕಿನ ರೈತರು, ಅಡಕೆ ಬೆಳೆಗಾರರು ಹಾಗೂ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತಾಸಕ್ತಿಯನ್ನು ಕಾಪಾಡಲು ಕರ್ನಾಟಕ ಸರ್ಕಾರ 3 ಟಿ.ಎಂ.ಸಿ. ನೀರನ್ನು ಪ್ರಾಯೋಗಿಕವಾಗಿ ಹಿರಿಯೂರು ಭಾಗದ ಅಪ್ಪರ್ ಭದ್ರಾ ಕಾಲುವೆಗೆ ಹರಿಸಲು ಮುಂದಾಗಿರುವುದರಿಂದ ನಮ್ಮ ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ನೀಡಿರುವ ರೈತವಿರೋಧಿ ನಿರ್ಧಾರಗಳ ವಿರುದ್ಧ ಎನ್‌ಡಿಎ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ್ದೇವೆ. ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ತಾಲೂಕಿನ ರೈತರ ಜಮೀನುಗಳಿಗೆ ನೀರು ಹರಿಸಬೇಕೆಂದು ಶಿವಶಂಕರ್ ಆಗ್ರಹಿಸಿದರು.

ಹೊಳೆಸಿರಿಗೆರೆ ಪರಮೇಶ್ವರಗೌಡ್ರ ಮಾತನಾಡಿ, ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದ ಸರ್ಕಾರದ ಆದೇಶದಿಂದ ಅಡಕೆ ಬೆಳೆಗಾರರ ಮೇಲೆ ಉಂಟಾಗಬಹುದಾದ ಆರ್ಥಿಕ ಪರಿಣಾಮಗಳ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯದ ಅನೇಕ ರೈತ ಕುಟುಂಬಗಳ ಜೀವನೋಪಾಯವು ಅಡಕೆ ಬೆಳೆಯ ಮೇಲೆ ಅವಲಂಬಿತವಾಗಿದೆ. ಅಡಕೆ ಮಾರುಕಟ್ಟೆ ಮತ್ತು ಬೆಲೆಯ ಮೇಲೆ ಪರಿಣಾಮ ಬೀರುವ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಅಡಕೆ ಬೆಳೆಗಾರರ ಹಿತಾಸಕ್ತಿಯನ್ನು ಸರ್ಕಾರ ಪರಿಗಣಿಸಬೇಕೆಂದು ಆಗ್ರಹಿಸಿದರು.

ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ಮೆಳ್ಳಿಕಟ್ಟಿ ನಾಗರಾಜ, ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಮಾಜಿ ಜಿಲ್ಲಾ ಉಪಾಧ್ಯಕ್ಷ ಬಾತಿ ಚಂದ್ರಶೇಖರ್, ಗ್ರಾಮಾಂತರ ಅಧ್ಯಕ್ಷ ಲಿಂಗರಾಜ್ ಎಂ.ಪಿ., ಪ್ರಧಾನ ಕಾರ್ಯದರ್ಶಿಗಳಾದ ಗಿರೀಶ ಕೆ.ಬಿ., ಸಂತೋಷ ಗುಡಿಮನಿ, ಜಿಲ್ಲಾ ಉಪಾಧ್ಯಕ್ಷೆ ಅಶ್ವಿನಿ ಕೃಷ್ಣ, ಮಹಾಂತೇಶ್ ಕೆ.ಎನ್.ಹಳ್ಳಿ, ರಮೇಶ್ ನಂದಿಗಾವಿ, ಜೆಡಿಎಸ್‌ನ ನಗರಾಧ್ಯಕ್ಷ ಪ್ರೇಮಕುಮಾರ ಅಡಕಿ, ನಗರಸಭೆಯ ಮಾಜಿ ಅಧ್ಯಕ್ಷೆ ಕವಿತಾ ಮಾರುತಿ ಬೇಡರ, ಮಾಜಿ ಸದಸ್ಯರಾದ ದಿನೇಶ ಬಾಬು, ಪೈ ಸುರೇಶ ಚಂದಾಪುರ, ಮುಖಂಡ ಡಿ.ಸುಧಾಕರ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

- - -

-27ಎಚ್.ಆರ್.ಆರ್1: ಹರಿಹರ ನಗರದಲ್ಲಿ ತಾಲೂಕಿನ ರೈತರು ಗುರುವಾರ ಎನ್‌ಡಿಎ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.