ಕನ್ನಡಪ್ರಭ ವಾರ್ತೆ ಚಾಮರಾಜನಗರ
ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಡಾ.ಬಾಬುಜಗಜೀವನರಾಂ ಸಂಘಟನೆಗಳ ಒಕ್ಕೂಟ ಹಾಗೂ ಮಾದಿಗ ಸಂಘಟನೆಗಳ ಒಕ್ಕೂಟ ವತಿಯಿಂದ ಮಾ.೨೬ ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಬಸವನಪುರ ರಾಜಶೇಖರ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಪೂರ್ಣ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಈಗಾಗಲೇ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮುದಾಯದ ವತಿಯಿಂದ ಹೋರಾಟ ಮಾಡಲಾಗಿದ್ದು, ಮಾ.೨೭ ರ ವಿಶೇಷ ಸಚಿವ ಸಂಪುಟದಲ್ಲಿ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಒತ್ತಾಯ ಮಾಡಲಾಗಿದೆ. ಇದು ನಮ್ಮ ಅಳಿವು- ಉಳಿವಿನ ಹೋರಾಟವಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಯ ಶ್ರೀ ಮಹಾಶಿವಶರಣ ಹರಳಯ್ಯ ಮಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೆಳಗ್ಗೆ ೧೦.೩೦ಕ್ಕೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಿಂದ ಪ್ರತಿಭಟನಾ ಮೆರವಣಿಗೆ ಹೊರಟು ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಳ್ಳಿ ವೃತ್ತ, ಪಚ್ಚಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ನಂತರ ಮೆರವಣಿಗೆಯು ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಲಾಗುವುದು ಎಂದರು.ಒಳಮೀಸಲಾತಿ ವಿಧೇಯಕಕ್ಕೆ ಈಗಾಗಲೇ ರಾಜ್ಯಪಾಲರ ಅನುಮೋದನೆ ದೊರೆತಿದೆ. ಆದರೆ, ಒಳಮೀಸಲಾತಿ ಅನ್ವಯಿಸದೇ ೫೬ ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವ ಸಚಿವ ಸಂಪುಟದ ತೀರ್ಮಾನವು ಸಂವಿಧಾನ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
೫೬,೪೬೨ ಖಾಲಿ ಹುದ್ದೆಗಳ ಭರ್ತಿಗೆ ಶೇ.೧೫ ಒಳಮೀಸಲಾತಿ ಜಾರಿಗೆ ಆದೇಶ ಹೊರಡಿಸಬೇಕು. ಒಳಮೀಸಲಾತಿ ತಪ್ಪಿಸುವ ಸರ್ಕಾರದ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ನೇಮಕಾತಿ ಸೇರಿದಂತೆ ಎಲ್ಲ ಹಂತಗಳಲ್ಲಿ ಒಳಮೀಸಲಾತಿಯನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೇ ರಾಜ್ಯದ ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನದ ೯ನೇ ಅನುಸೂಚಿಗೆ ಸೇರಿಸುವ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು. ರಾಜಕೀಯ ಚುನಾವಣೆಗಳಲ್ಲಿ ಸಂಪೂರ್ಣ ಒಳಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅಂದು ನಡೆಯುವ ಬೃಹತ್ ಪ್ರತಿಭಟನೆಗೆ ಸಮುದಾಯದವರು ಸ್ವಯಂಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಡಾ.ಬಾಬುಜಗಜೀವನರಾಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಚ್.ಎಚ್.ನಾಗರಾಜು, ಬ್ಯಾಂಕ್ ಬಸವರಾಜು ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಮೂಡಹಳ್ಳಿ ಮೂರ್ತಿ, ಹಸಗೂಲಿ ಸಿದ್ದಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಶಿವಕುಮಾರ್, ಮುಖಂಡರಾದ ಎಲ್ ಐಸಿ ರಾಜಣ್ಣ, ಕೆಸ್ತೂರು ಮರಪ್ಪ ಹಾಜರಿದ್ದರು.