ಕನ್ನಡಕ್ಕೆ ಮಾಸ್ತಿಯವರ ಕೊಡುಗೆ ಅನನ್ಯ: ಎಚ್‌.ಬಿ.ಪಾಟೀಲ

| Published : Jun 08 2024, 12:36 AM IST

ಕನ್ನಡಕ್ಕೆ ಮಾಸ್ತಿಯವರ ಕೊಡುಗೆ ಅನನ್ಯ: ಎಚ್‌.ಬಿ.ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ಮಲ್ಲಿನಾಥ ಮಹಾರಾಜ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ರ 133ನೇ ಜನ್ಮದಿನ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ವಿಶ್ವದ ಪ್ರಮುಖ ಭಾಷೆಗಳಲ್ಲಿ ಸ್ಥಾನ ಪಡೆಯುವಲ್ಲಿ ಶ್ರಮಿಸಿದ, ಕನ್ನಡ ಭಾಷೆ ಸಾಹಿತ್ಯ, ಕಲೆ, ಸಂಸ್ಕøತಿಗೆ ತಮ್ಮದೇ ಆದ ಅಮೂಲ್ಯವಾದ ಕೊಡುಗೆ ನೀಡಿ, ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಕನ್ನಡದ ಅಮೂಲ್ಯವಾದ ಆಸ್ತಿಯಾಗಿದ್ದಾರೆ. ಕನ್ನಡಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ಮಲ್ಲಿನಾಥ ಮಹಾರಾಜ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಮಾಸ್ತಿ ವೆಂಕಟೇಶ ಅಯ್ಯಂಗಾರ್’ರ 133ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಮಾಸ್ತಿಯವರ ‘ಕೆಲವು ಸಣ್ಣ ಕಥೆಗಳು’ ಎಂಬ ಪ್ರಥಮ ಕೃತಿಯು 1920ರಲ್ಲಿ ಪ್ರಕಟವಾಯಿತು. ಇದು ಆಧುನಿಕ ಕನ್ನಡದ ಸಾಹಿತ್ಯದ ವಿಶಿಷ್ಟವಾದ ಮೊದಲ ಕೃತಿಯೆನಿಸಿದೆ. ಹಾಗೆ ನೋಡಿದರೆ ಸಣ್ಣಕಥೆಯನ್ನು ಮೊದಲು ಬರೆದವರು ಮಾಸ್ತಿಯವರಲ್ಲದೇ ಇದ್ದರೂ ಕೂಡಾ, ಕಥೆಗಳಿಗೆ ಮತ್ತು ಮಾಸ್ತಿಯವರಿಗೆ ಅನ್ಯೋನ್ಯವಾದ ಬಾಂಧವ್ಯವಿದೆ. ಆದ್ದರಿಂದಲೇ ಇವರು ಕನ್ನಡ ಕಥಾ ಸಾಹಿತ್ಯದ ಪ್ರಮುಖರೆನಿಸಿಕೊಂಡು, ‘ಕನ್ನಡದ ಆಸ್ತಿ’ಯಾಗಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ ಮಾತನಾಡಿ, ಕುವೆಂಪು ‘ಮಾಸ್ತಿಯವರ ಸಾಹಿತ್ಯ ದೊಡ್ಡದು. ಅವರು ಅದಕ್ಕಿಂತಲೂ ದೊಡ್ಡವರೆಂಬ ನನ್ನ ಭಾವನೆ’ ಎಂದಿರುವ ಮಾತು ಮಾಸ್ತಿಯವರ ಮೇರು ವ್ಯಕ್ತಿತ್ವ ತೋರಿಸುತ್ತದೆ. ಕನ್ನಡ ಸಾಹಿತ್ಯ, ಭಾಷೆಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ನೀಡಿರುವ ಕೊಡುಗೆ ಬಹು ಮೌಲ್ಯಯುತವಾಗಿದೆ. ಅವರೊಬ್ಬ ಕನ್ನಡ ಸಾರಸತ್ವ ಲೋಕದ ಮೇರು ಸಾಹಿತಿಯಾಗಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಅಮರ ಜಿ.ಬಂಗರಗಿ, ಮುಖ್ಯ ಶಿಕ್ಷಕಿ ಚಂಪಾಕಾ ನೆಲ್ಲುರೆ, ಶಿಕ್ಷಕರಾದ ರೇಖಾ ಬಿ.ಪಾಟೀಲ, ಮಂಜುಳಾ ಬಿ.ನರೋಣಾ, ನಂದಿನಿ, ಸೇವಕಿ ಸುರೇಖಾ ಸಣಮನಿ, ಸಮಾಜ ಸೇವಕ ಹಣಮಂತ ಎಂ.ಕಮಲಾಪುರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.