ಸಾರಾಂಶ
ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲೆ ಹಾಗೂ ಅಂತರ ಜಿಲ್ಲೆಯಿಂದ 17 ತಂಡಗಳು ಭಾಗವಹಿಸಿದ್ದವು.
ಸಿದ್ದಾಪುರ: ತಾಲೂಕಿನ ದೊಡ್ಮನೆ ಗ್ರಾಪಂ ವ್ಯಾಪ್ತಿಯ ಸುಂಗೋಳಿಮಕ್ಕಿ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 6ನೇ ವರ್ಷದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಕುಂದಾಪುರದ ಬೈಂದೂರಿನ ಸ್ವಾಮಿ ಕೊರಗಜ್ಜ ತಂಡ ಚ್ಯಾಂಪಿಯನ್ ಆಗಿ ಹೊರ ಹೊಮ್ಮಿದೆ.
ಗ್ರಾಮದೇವ ಗೆಳೆಯರ ಬಳಗ ಉಡಳ್ಳಿ ಬಿಳೇಗೋಡ, ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಆಯೋಜಿಸಿದ್ದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲೆ ಹಾಗೂ ಅಂತರ ಜಿಲ್ಲೆಯಿಂದ 17 ತಂಡಗಳು ಭಾಗವಹಿಸಿದ್ದವು. ಈ ಪೈಕಿ ಕುಂದಾಪುರದ ಬೈಂದೂರಿನ ಸ್ವಾಮೀ ಕೊರಗಜ್ಜ ತಂಡ, ಗ್ರಾಮದೇವ ಗೆಳೆಯರ ಬಳಗ ತಂಡಗಳು ಫೈನಲ್ ಪ್ರವೇಶಿಸಿದ್ದವು. ಅಂತಿಮವಾಗಿ ಕುಂದಾಪುರದ ಬೈಂದೂರಿನ ಸ್ವಾಮಿ ಕೊರಗಜ್ಜ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.ನಿವೃತ್ತ ಶಿಕ್ಷಕ ಮಂಜುನಾಥ ಭಟ್ ಉದ್ಘಾಟಿಸಿ ಮಾತನಾಡಿ, ಕಳೆದ ಆರು ವರ್ಷದಿಂದ ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಈ ಭಾಗದಲ್ಲಿ ನಮ್ಮ ಮಕ್ಕಳು ಆಯೋಜನೆ ಮಾಡಿ ಆಡುತ್ತಿರುವುದು ಸಂತಸದ ವಿಚಾರವಾಗಿದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವವರು ಉತ್ತಮ ಆಟದೊಂದಿಗೆ ಎಲ್ಲರ ಮನಸು ಗೆಲ್ಲಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ದೊಡ್ಮನೆ ಪಿಡಿಒ ಉಮೇಶ ಗೌಡರ್ ಮಾತನಾಡಿ ದೊಡ್ಮನೆ ಗ್ರಾಪಂ ಇದೀಗ ಉತ್ತಮ ಕಟ್ಟಡ, ತೆರಿಗೆ ಸಂಗ್ರಹಣೆಯಲ್ಲಿ ಮಾದರಿಯಾಗಿದೆ. ಇತ್ತೀಚೆಗೆ ಪಂಚಾಯಿತಿಗೆ ಭೇಟಿ ನೀಡಿದ ಜಿಪಂ ಸಿಇಒ ಕೂಡ ಪಂಚಾಯಿತಿಯಲ್ಲಿ ಕೈಗೊಂಡ ಸುಧಾರಣಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೆರಿಗೆ ಪಾವತಿಯಲ್ಲಿ ಶೇ.97ರಷ್ಟು ಸಾಧನೆ ಮಾಡಿದ್ದು, ಇನ್ನು ಕೆಲವೇ ದಿನದಲ್ಲಿ ಶೇ.100 ಸಾಧನೆ ಮಾಡುತ್ತೇವೆ. ಇದಕ್ಕೆಲ್ಲವೂ ಗ್ರಾಪಂ ವ್ಯಾಪ್ತಿಯ ಜನರ ಸಹಕಾರವೇ ಕಾರಣವಾಗಿದೆ. ಕಬಡ್ಡಿಯಂತಹ ಕ್ರೀಡೆಗಳು ನಮ್ಮಲ್ಲಿ ದೈಹಿಕ ಆರೋಗ್ಯ ಹೆಚ್ಚಿಸುವುದಲ್ಲದೆ ಈ ಕ್ರೀಡಾಕೂಡ ಆಯೋಜನೆ ಯುವ ಪಿಳಿಗೆಗೆ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದರು.ಗ್ರಾಪಂ ಅಧ್ಯಕ್ಷೆ ಶಾರದಾ ಹೆಗಡೆ, ಸದಸ್ಯ ಬೀರಾ ಗೌಡ, ಶಿಕ್ಷಕ ತಿಪ್ಪಾಗೌಡ, ತಾಲೂಕು ಕರೆ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಅಮ್ಮು ಗೌಡ, ಅನಂತ ಗೌಡ, ವಿನಾಯಕ ಗೌಡ, ಗಣಪತಿ ಗೌಡ, ಬೀರಾ ಗೌಡ ಇದ್ದರು.