ಮನುಷ್ಯರ ನಡುವೆ ಮಾತೇ ಸೇತುವೆ: ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್

| Published : Sep 03 2024, 01:35 AM IST

ಮನುಷ್ಯರ ನಡುವೆ ಮಾತೇ ಸೇತುವೆ: ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆಮನುಷ್ಯರ ನಡುವಿನ ಪರಸ್ಪರ ಮಾತೇ ಸೇತುವೆಯಾಗಿದೆ. ಅದರಲ್ಲೂ ಶ್ರಾವಣ ಹಬ್ಬಗಳ ವಿಶೇಷ ಮಾಸ, ಸಿಹಿ ಮನಸುಗಳ ಸಮ್ಮಿಲನದಿಂದ ಸಾಹಿತ್ಯದ ರಸದೌತಣ ನೀಡುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದ್ದಾರೆ.

ಶ್ರಾವಣ ಸಾಹಿತ್ಯ ಸಂಭ್ರಮ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಮನುಷ್ಯರ ನಡುವಿನ ಪರಸ್ಪರ ಮಾತೇ ಸೇತುವೆಯಾಗಿದೆ. ಅದರಲ್ಲೂ ಶ್ರಾವಣ ಹಬ್ಬಗಳ ವಿಶೇಷ ಮಾಸ, ಸಿಹಿ ಮನಸುಗಳ ಸಮ್ಮಿಲನದಿಂದ ಸಾಹಿತ್ಯದ ರಸದೌತಣ ನೀಡುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದ್ದಾರೆ.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತರೀಕೆರೆ, ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ, ಹೋಬಳಿ ಘಟಕ, ಗ್ರಾಮ ಪಂಚಾಯಿತಿ ಘಟಕಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಯುವ ಘಟಕ ತರೀಕೆರೆಯಿಂದ ಪಟ್ಟಣದ ಸಂಗೊಳ್ಳಿ ರಾಯಣ್ಣ ಬಡಾವಣೆ ಉಮಾ ಪ್ರಕಾಶ್ ಪ್ರಕೃತಿಶ್ರೀ ನಿಲಯದಲ್ಲಿ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಇಡೀ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು ಆದರಲ್ಲೂ ತರೀಕೆರೆ ತುಂಬಾ ವಿಶೇಷ. ಸಾಹಿತ್ಯ ಸಂಭ್ರಮ ಮುಖೇನ ಎಲ್ಲರೂ ಮುಖಾ ಮುಖಿ ಆಗುವುದು ಸಂತೋಷದ ಸಂಗತಿ. ನಮ್ಮ ನಡುವೆ ಬೆಸೆಯುವ ಬಾಂಧವ್ಯಕ್ಕೆ ಬೆಲೆ ಕಟ್ಟಲಾಗದು, ತಿಂಗಳ ತಿರುಳು ಬಿಡುಗಡೆ ಮಾಡಿದ್ದು ಇಡಿ ಜಿಲ್ಲೆಗೆ ಮಾದರಿ. ಪ್ರತಿಯೊಂದು ಉಪನ್ಯಾಸ ಸಹ ಅದ್ಬುತವಾಗಿದೆ ಎಂದ ಅವರು ನಿರಂತರವಾಗಿ ಸಾಹಿತ್ಯದ ತೇರು ಎಳೆಯುತ್ತಿರುವ ಎಲ್ಲಾ ಮಹನೀಯರಿಗೂ ಧನ್ಯವಾದ ಅರ್ಪಿಸಿದರು.

ಅಕ್ಷರ ದಾಸೋಹ ಕಚೇರಿ ಸಹಾಯಕ ನಿರ್ದೇಶಕ, ಸಾಹಿತಿ ಎಂ.ಕೆ.ವಿಜಯಕುಮಾರ್ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ ಎಂಬ ವಿಷಯ ಮಂಡನೆ ಮಾಡಿದರು. ತೇಜಸ್ವಿಯವರು ನೇರ ನುಡಿಯ ನಿಷ್ಠುರ ವ್ಯಕ್ತಿ, ಕಲ್ಪನೆ ಕಟ್ಟಿ ಕೊಟ್ಟವರಲ್ಲ, ಅವರ ಕರ್ವಾಲೋ, ಚಿದಂಬರ ರಹಸ್ಯ ತುಂಬಾ ಜನಪ್ರಿಯ ಸಾಹಿತ್ಯಗಳು, ತಮ್ಮ ಸುತ್ತಮುತ್ತಲ ಚಿತ್ರಣಗಳೇ ಅವರ ಸಾಹಿತ್ಯಕ್ಕೆ ಆಕರ, ಮೀನು ಹಿಡಿಯುವುದು, ಜೇನು ಹಿಂಡುವುದು, ಪಕ್ಷಿನೋಟ ಇತ್ಯಾದಿ ಸಾಹಿತ್ಯದ ವಸ್ತುವಾಗಿವೆ. ಅವರು ಕೃಷಿಕರು ಸಹಜ, ನೈಜ ಕೃಷಿಯನ್ನು ಸಾಹಿತ್ಯಕ್ಕಿಳಿಸಿದ್ದಾರೆ ಎಂದು ಹೇಳಿದರು.

ಪರಿಸರ ಪ್ರಜ್ಞೆ ಬಗ್ಗೆ ಕರ್ವಾಲೋದಲ್ಲಿ ಹೇಳಿದ್ದು. ಮಿಂಚುಳ್ಳಿಯಲ್ಲಿ ಪಕ್ಷಿ ಕಥೆಯನ್ನು ವಿವರಿಸಿದ್ದಾರೆ, ಪಕ್ಷಿಗಳು ಬದುಕಲಾರದ ವಾತಾವರಣದಲ್ಲಿ ಮನುಷ್ಯ ಬದುಕಲಿಕ್ಕೆ ಸಾಧ್ಯವಿಲ್ಲ, ಪಕ್ಷಿ ಮುಖಾಂತರ ಮನುಷ್ಯನಿಗೆ ಜೀವನದ ಪಾಠ ಹೇಳಿದ್ದಾರೆ. ವಾತಾವರಣದ ಕಲ್ಪನೆಯೇ ನಮ್ಮ ಜೀವನಾಡಿ, ನಾವಿರುವ ತಾಣವೇ ವಿಶೇಷ, ಆದರೆ ನಾವು ನೋಡುವ ನೋಟ ವಿಭಿನ್ನವಾಗಿರಬೇಕು ಎಂದು ಹೇಳಿದರು.

ಪ್ರಕೃತಿಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶ್ರಾವಣದಲ್ಲಿ ಸಾಹಿತ್ಯ ಸಂಬ್ರಮ ನಮ್ಮ ಮನೆಯಲ್ಲಿ ಆಚರಿಸುತ್ತಿರುವುದು ಹಬ್ಬದ ವಾತಾವರಣ ಮರು ಸೃಷ್ಠಿಸಿದೆ, ಅದರಲ್ಲೂ ಸಾಹಿತ್ಯದ ರಸ ದೌತಣ ನೀಡುತ್ತಿರುವುದು ಹೆಮ್ಮೆಯ ಸಂಗತಿ, ನಾನು, ತೇಜಸ್ವಿ ಅವರ ಸಾಹಿತ್ಯದಿಂದ ಪ್ರಭಾವಿತನಾಗಿ ನನ್ನ ಮಗನಿಗೆ ತೇಜಸ್ವಿ ಎಂದು ನಾಮಕರಣ ಮಾಡಿದೆ, ಪರಿಸರದ ವಿಸ್ಮಯವೇ ತೇಜಸ್ವಿ, ಪರಿಸರದಲ್ಲಿ ನಮ್ಮ ಜೀವನ ಅಡಕವಾಗಿರುತ್ತದೆ ಎಂದರು.

ಲೇಖಕಿ ಶಿಲ್ಪ ವಸಂತಕುಮಾರ್ ಮಾತನಾಡಿ, ಕುವೆಂಪು ಅವರ ಸಾಹಿತ್ಯದ ತೇರಿನ ಬಂಡಿ ಎಳೆದವರು ತೇಜಸ್ವಿ. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಬಹಳ ಹತ್ತಿರದಿಂದ ಕಂಡವರು, ಬಹಳ ಕುತೂಹಲ ಮತ್ತು ಆಸಕ್ತಿ ವಹಿಸುವ ವಿಸ್ಮಯಕಾರಿ ವ್ಯಕ್ತಿತ್ವವುಳ್ಳವರು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿ ಸಾಹಿತ್ಯ ರಚಿಸಿದವರು, ಪ್ರಕೃತಿಯನ್ನೇ ತನ್ನ ಆರಾಧ್ಯ ದೈವ ಎಂದು ಪ್ರೀತಿಸಿದವರು ಎಂದು ಅವರು ಹೇಳಿದರು.

ಡಾ.ಟಿ.ಎಂ.ದೇವರಾಜ್ ಮಾತನಾಡಿ ಕರ್ವಾಲೋ ಮತ್ತೆ ಮತ್ತೆ ಓದಿಸಿಕೊಂಡು ಹೋಗುವ ಪುಸ್ತಕ, ಜೀವನದ ಸಾಹಿತ್ಯ ಪುಸ್ತಕದಲ್ಲಿದೆ. ಒತ್ತಡದ ಜೀವನದ ಕಳೆಯಬೇಕಾದರೆ ಸಾಹಿತ್ಯ ಅಧ್ಯಯನ ಮಾಡಬೇಕು ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿದಳವಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರಾವಣ ಕಾರ್ಯಕ್ರಮ ಯಶಸ್ವಿಯಾಗಿದೆ, ಮಕ್ಕಳಿಗೆ ತಲುಪಿ ಸಾಹಿತ್ಯ ವೃದ್ಧಿಯಾಗಬೇಕು ಎಂದು ತಿಳಿಸಿದರು.

ಕನ್ನಡಶ್ರೀ ಬಿ.ಎಸ್.ಭಗವಾವ್,ಲೇಖಕ ತ.ಮ.ದೇವಾನಂದ್ ಮಹಿಳಾ ಘಟಕದ ಅಧ್ಯಕ್ಷೆ ಸುನಿತ ಕಿರಣ್, ಶಿವಣ್ಣ, ತಿಮ್ಮಯ್ಯ, ರೇವಣ್ಣ, ಪ್ರಕಾಶ್, ಶ್ಯಾಮಲ ಮಂಜುನಾಥ್, ಟಿ.ದಾದಾಪೀರ್, ಸದಾನಂದ, ಚಂದ್ರಶೇಖರ್, ದರ್ಶನ್, ದೇವರಾಜು ಸಹ್ಯಾದ್ರಿ, ಪ್ರತಿಭಾ, ಮಂಜಯ್ಯ ದಂಪತಿ, ಕಲಾಕುಟೀರದ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-2ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಕಾರ್ಯಕ್ರಮದ ಸಮರೋಪ ಸಮಾರಂಭವನ್ನು ಪ್ರಕೃತಿಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾಪ್ರಕಾಶ್ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ಕನ್ನಡಶ್ರೀ ಬಿ.ಎಸ್.ಭಗವಾನ್, ಲೇಖಕ ತ.ಮ.ದೇವಾನಂದ್ ಮತ್ತಿತರರು ಇದ್ದರು.