ಸಾರಾಂಶ
ಬೆಂಗಳೂರು : ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಕಾರಣವಾಗಿರಬಹುದಾದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ಪೂರೈಕೆ ಮಾಡಿರುವ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಅಲ್ಲದೆ, ಕಂಪೆನಿ ಪೂರೈಕೆ ಮಾಡಿರುವ 192 ಬ್ಯಾಚ್‌ಗಳ ಪೈಕಿ 9 ಬ್ಯಾಚ್‌ಗಳ ಗುಣಮಟ್ಟ ಸಾಬೀತಾಗಿಲ್ಲ. ಆ 9 ಬ್ಯಾಚ್‌ಗಳ ವಿಚಾರವಾಗಿ ಕಂಪನಿಯವರನ್ನು ಯಾಕೆ ವಿಚಾರಣೆಗೆ ಒಳಪಡಿಸಿಲ್ಲ? ಔಷಧಗಳ ಗುಣಮಟ್ಟ ಪರೀಕ್ಷಾ ವರದಿಗಳು ಯಾಕೆ ವಿಳಂಬವಾಗುತ್ತಿವೆ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬುಧವಾರ ವಿಕಾಸಸೌಧದಲ್ಲಿ ರಾಜ್ಯದ ಔಷಧಿ ನಿಯಂತ್ರಣ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಐವಿ ದ್ರಾವಣದ 22 ಬ್ಯಾಚ್ ಗುಣಮಟ್ಟ ಹೊಂದಿಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ಕಂಪನಿ ವಿರುದ್ಧ ಮೊದಲು ಪ್ರಕರಣ ದಾಖಲಿಸಿ ಎಂದು ಆದೇಶ ಮಾಡಿದರು.
ರಾಜ್ಯದ ಡ್ರಗ್ ಕಂಟ್ರೋಲ್ ನೀಡಿದ 22 ಬ್ಯಾಚ್‌ಗಳ ಎನ್‌ಎಸ್‌ಕ್ಯೂ (ನಾಟ್ ಆಫ್ ಸ್ಟಾಂಡರ್ಡ್ ಕ್ವಾಲಿಟಿ) ವರದಿಯಲ್ಲಿ 13 ಬ್ಯಾಚ್‌ಗಳ ವರದಿ ಪ್ರಶ್ನಿಸಿ ಕಂಪನಿಯವರು ಸೆಂಟ್ರಲ್ ಡ್ರಗ್ ಲ್ಯಾಬರೋಟರಿ ಮೆಟ್ಟಿಲೇರಿದ್ದಾರೆ. ಅದರಲ್ಲಿ 4 ಬ್ಯಾಚ್ ಗುಣಮಟ್ಟ ಹೊಂದಿವೆ ಎಂದು ಸೆಂಟ್ರಲ್ ಡ್ರಗ್ ಲ್ಯಾಬ್ ವರದಿ ನೀಡಿದೆ. ಅಲ್ಲದೆ 13 ಬ್ಯಾಚ್‌ಗಳ ಬಗ್ಗೆ ಸೆಂಟ್ರಲ್ ಡ್ರಗ್ ಲ್ಯಾಬ್ ನಿಂದ ವರದಿ ಬರಬೇಕಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.
ಈ ವೇಳೆ 22 ಬ್ಯಾಚ್‌ಗಳ ಎನ್‌ಎಸ್‌ಕ್ಯೂ ವರದಿಯಲ್ಲಿ 13 ಬ್ಯಾಚ್‌ಗಳ ವರದಿ ಬಗ್ಗೆ ಪ್ರಶ್ನೆ ಮಾಡಿದ್ದರೆ ಉಳಿದ 9 ಬ್ಯಾಚ್‌ಗಳ ಗುಣಮಟ್ಟದ್ದಲ್ಲ ಎಂದು ಅವರೇ ಒಪ್ಪಿಕೊಂಡಂತಲ್ಲವೇ? ರಾಜ್ಯದ ಡ್ರಗ್ ಕಂಟ್ರೋಲ್ ಟೆಸ್ಟಿಂಗ್‌ನಲ್ಲಿ ಎನ್‌ಎಸ್‌ಕ್ಯೂ ವರದಿ ಬಂದ ಮೇಲೆ ಸೆಂಟ್ರಲ್ ಡ್ರಗ್ ಲ್ಯಾಬ್‌ನಲ್ಲಿ ಹೇಗೆ ಎಸ್‌ಕ್ಯೂ (ಸ್ಟಾಂಡರ್ಡ್ ಕ್ವಾಲಿಟಿ) ವರದಿ ಬಂತು? ಈ ಬಗ್ಗೆಯೂ ಕೂಲಂಕುಶವಾಗಿ ಪರಿಶೀಲಿಸಿ ವರದಿ ನೀಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಶ್ಚಿಮ ಬಂಗಾಳಕ್ಕೆ ತೆರಳಿದ ವೈದ್ಯರು: ರಾಜ್ಯದಲ್ಲಿ ಪಶ್ಚಿಮ ಬಂಗಾಳ ಮೂಲದ ಪಶ್ಚಿಮ್‌ಬಂಗಾ ಫಾರ್ಮಾಸ್ಯುಟಿಕಲ್ ಕಂಪೆನಿ ಪೂರೈಸಿರುವ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದ ಕುರಿತು ಅನುಮಾನ ವ್ಯಕ್ತವಾಗಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ವೈದ್ಯರ ತಂಡ ಕಂಪೆನಿ ಹಾಗೂ ಕಂಪೆನಿಯ ಪ್ರಯೋಗಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.