ನೇಹಾ ಕೊಲೆ ಖಂಡಿಸಿ ಮಠಾಧೀಶರ ಪ್ರತಿಭಟನೆ

| Published : Apr 21 2024, 02:25 AM IST

ಸಾರಾಂಶ

ಗ್ಯಾರಂಟಿ ಎಂದೆಲ್ಲ ಯೋಜನೆಗಳನ್ನು ಘೋಷಿಸುವ ಸರ್ಕಾರಗಳು, ರಾಜಕಾರಣಿಗಳು ಹೆಣ್ಮಕ್ಕಳ ರಕ್ಷಣೆಗೆ ಯಾವ ಗ್ಯಾರಂಟಿ ಕೊಡುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು. ಹೆಣ್ಮಕ್ಕಳು ಮನೆಯಿಂದ ಹೊರ ಬರುವುದು ಕಷ್ಟವಾಗಿದೆ.

ಹುಬ್ಬಳ್ಳಿ:

ಇಲ್ಲಿನ ಬಿವಿಬಿ ಕಾಲೇಜು ಕ್ಯಾಂಪಸ್ಸಿನಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಶನಿವಾರ ಕೂಡ ನಗರದಲ್ಲಿ ಪ್ರತಿಭಟನೆ ವ್ಯಕ್ತವಾಯಿತು. ಇಲ್ಲಿನ ಚೆನ್ನಮ್ಮ ಸರ್ಕಲ್‌ನಲ್ಲಿ ವಿವಿಧ ಮಠಾಧೀಶರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಮಠಾಧೀಶರ ಪ್ರತಿಭಟನೆಗಾಗಿ ಚೆನ್ನಮ್ಮ ಸರ್ಕಲ್‌ನಲ್ಲಿ ಪೆಂಡಾಲ್‌ ಹಾಕಲಾಗಿತ್ತು. 15ರಿಂದ 20 ವಿವಿಧ ಮಠಾಧೀಶರು, ಎಬಿವಿಪಿ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು. ಹೆಣ್ಮಕ್ಕಳ ದೌರ್ಜನ್ಯ ಎಸಗುವ, ಕೊಲೆ ಮಾಡಲು ಮುಂದಾಗುವ ಪ್ರತಿಯೊಬ್ಬರಿಗೂ ಈ ಪ್ರಕರಣ ಎಚ್ಚರಿಕೆ ಗಂಟೆಯಾಗಬೇಕು. ಆ ರೀತಿಯ ಶಿಕ್ಷೆಯನ್ನು ವಿಧಿಸಬೇಕು ಎಂದು ಎಲ್ಲ ಮಠಾಧೀಶರು ಆಗ್ರಹಿಸಿದರು.

ಗ್ಯಾರಂಟಿ ಎಂದೆಲ್ಲ ಯೋಜನೆಗಳನ್ನು ಘೋಷಿಸುವ ಸರ್ಕಾರಗಳು, ರಾಜಕಾರಣಿಗಳು ಹೆಣ್ಮಕ್ಕಳ ರಕ್ಷಣೆಗೆ ಯಾವ ಗ್ಯಾರಂಟಿ ಕೊಡುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು. ಹೆಣ್ಮಕ್ಕಳು ಮನೆಯಿಂದ ಹೊರ ಬರುವುದು ಕಷ್ಟವಾಗಿದೆ. ಪ್ರಕರಣವನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ. ನೇಹಾಳ ಹತ್ಯೆ ಪ್ರಕರಣದ ಸೂಕ್ತ ತನಿಖೆ ನಡೆಸಿ ಆರೋಪಿಗೆ ಗಲ್ಲು ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಮಾಡ್ತೇವೆ:

ಆರೋಪಿ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದಾನೆ. ಆತನ ಜಾಮೀನಿಗೆ ಯಾವ ವಕೀಲರು ಅರ್ಜಿ ಸಲ್ಲಿಸಬಾರದು. ಒಂದು ವೇಳೆ ಅರ್ಜಿ ಸಲ್ಲಿಸಿದರೆ ಅವರ ಮನೆ ಮುಂದೆ ಕೂಡ ಪ್ರತಿಭಟನೆ ನಡೆಸುತ್ತೇವೆ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಲಾಯಿತು.

ಮಳೆ ಬಂದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಮಠಾಧೀಶರು ಪಾಲ್ಗೊಂಡಿಲ್ಲ. ರಾಜ್ಯದ ಎಲ್ಲ ಮಠಾಧೀಶರ ಪರವಾಗಿ ನಾವು ಪಾಲ್ಗೊಂಡಿದ್ದೇವೆ. ಹೆಣ್ಮಕ್ಕಳಿಗೆ ಅನ್ಯಾಯವಾದರೂ ಸುಮ್ಮನೆ ಕೂರುವುದಿಲ್ಲ ಎಂಬ ಸಂದೇಶವನ್ನು ಈ ಪ್ರತಿಭಟನಾ ಸಭೆ ಮೂಲಕ ನೀಡುತ್ತಿದ್ದೇವೆ ಎಂದು ಮಠಾಧೀಶರು ಎಚ್ಚರಿಕೆ ನೀಡಿದರು. ಬಳಿಕ ಎಲ್ಲ ಸ್ವಾಮೀಜಿಗಳು ನೇಹಾ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಪ್ರತಿಭಟನೆಯಲ್ಲಿ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿ, ಹಾವೇರಿ ಬಣ್ಣದ ಮಠದ ಸ್ವಾಮೀಜಿ, ಶಿಗ್ಗಾವಿಯ ಸಂಗನ ಬಸವ, ಕುಂದಗೋಳದ ಬಸವಣ್ಣಜ್ಜ, ಸವಣೂರಿನ ಚನ್ನಬಸವ ಸ್ವಾಮೀಜಿ ಸೇರಿದಂತೆ ಹಾವೇರಿ, ಗದಗ, ಧಾರವಾಡ ಭಾಗದ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ಜತೆಗೆ ವಕೀಲ ಕೋರಿಶೆಟ್ಟರ್‌, ಮಾಲಿ ಚೆನ್ನಪ್ಪ, ವಿದ್ಯಾರ್ಥಿನಿ ಶ್ರೀನಿಧಿ ಹಿರೇಮಠ, ಎಬಿವಿಪಿ ಮುಖಂಡ ಮಣಿಕಂಠ ಸೇರಿದಂತೆ ಹಲವರು ಭಾಗವಹಿಸಿದ್ದರು.ನೇಹಾ ಕೊಲೆ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳಬಾರದು. ಕಾನೂನು ವ್ಯಾಪ್ತಿಗೆ ಬಿಟ್ಟು ಬಿಡಬೇಕು. ಆರೋಪಿಗೆ ಶೀಘ್ರ ಶಿಕ್ಷೆ ವಿಧಿಸಬೇಕು. ಮುಂದೆ ಯಾರು ಇಂಥ ಕೃತ್ಯ ಎಸಗದಂತೆ ನೋಡಿಕೊಳ್ಳಬೇಕು. ಅವರಿಗೆ ಇದು ಎಚ್ಚರಿಕೆ ಗಂಟೆಯಾಗಬೇಕು ಎಂದು ಸವಣೂರಿನ ಚನ್ನಬಸವ ಸ್ವಾಮೀಜಿ ಹೇಳಿದರು.

ಮನೆಯಿಂದ ಹೊರಗೆ ಬರಲು ನನಗೂ ಭಯ ಆಗುತ್ತಿದೆ. ಯಾವ ಸಂದರ್ಭದಲ್ಲಿ ಯಾರು ಬಂದು ಚಾಕು ಹಾಕುತ್ತಾರೆ ಎಂದು ತಿಳಿಯುತ್ತಿಲ್ಲ. ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ರಕ್ಷಣೆ ಎನ್ನುವಂತಿಲ್ಲವಾಗಿದೆ. ಕಾಲೇಜಿನಲ್ಲಿಯೂ ರಕ್ಷಣೆಯಿಲ್ಲ ಎಂದು ಶ್ರೀನಿಧಿ ಹಿರೇಮಠ ಆತಂಕ ವ್ಯಕ್ತಪಡಿಸಿದರು.