ಗ್ರಾಪಂ ಮಟ್ಟದಲ್ಲಿ ಗಣಿತ ಕಲಿಕಾ ಆಂದೋಲನ

| Published : Sep 22 2024, 01:48 AM IST

ಸಾರಾಂಶ

ತಾಲೂಕಿನ ಐಮಂಗಲ ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮ ಕಲ್ಲಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಐಮಂಗಲ ಪಂಚಾಯಿತಿಗೆ ಸೇರಿದ ಎಲ್ಲಾ 7 ಹಳ್ಳಿಗಳಿಂದ ನಾಲ್ಕು, ಐದು ಮತ್ತು ಆರನೇ ತರಗತಿಯ ವಿದ್ಯಾರ್ಥಿಗಳು ಗಣಿತ ಕಲಿಕಾ ಆಂದೋಲನ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಐಮಂಗಲ ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮ ಕಲ್ಲಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಐಮಂಗಲ ಪಂಚಾಯಿತಿಗೆ ಸೇರಿದ ಎಲ್ಲಾ 7 ಹಳ್ಳಿಗಳಿಂದ ನಾಲ್ಕು, ಐದು ಮತ್ತು ಆರನೇ ತರಗತಿಯ ವಿದ್ಯಾರ್ಥಿಗಳು ಗಣಿತ ಕಲಿಕಾ ಆಂದೋಲನ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವೀಣಾ ಹರೀಶ್ ಉದ್ಘಾಟಿಸಿ ಮಾತನಾಡಿ, ಗಣಿತ ಎಂದರೆ ಮಕ್ಕಳಲ್ಲಿ ಒಂದು ರೀತಿಯ ಭಯ ಆತಂಕ ಇರುತ್ತದೆ. ಹಾಗಾಗಿ ಮಕ್ಕಳಲ್ಲಿರುವ ಭಯವನ್ನು ಹೋಗಲಾಡಿಸುವ ಸಲುವಾಗಿ ಗಣಿತ ವಿಷಯದಲ್ಲಿ ಸ್ಪರ್ಧೆಯನ್ನು ಏರ್ಪಡಿಸುತ್ತಿರುವುದು ಸಂತೋಷದ ವಿಷಯ. ಎಲ್ಲಾ ಮಕ್ಕಳು ಖುಷಿಯಿಂದ ಪರೀಕ್ಷೆಯನ್ನು ಬರೆಯಿರಿ. ಇಲ್ಲಿ ಗೆಲುವು ಸೋಲು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿ. ನಾಗರಾಜ್ ಮಾತನಾಡಿ, ಮಕ್ಕಳಲ್ಲಿ ಗಣಿತ ಕಲಿಕೆಯನ್ನು ಆಸಕ್ತಿದಾಯಕಗೊಳಿಸಲು ಮತ್ತು ಅವರ ಸಾಮರ್ಥ್ಯವನ್ನು ಹೆಚ್ಚಿಸಲು ಶಿಕ್ಷಣ ಇಲಾಖೆ, ಅಕ್ಷರ ಫೌಂಡೇಶನ್ ಮತ್ತು ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಮುದಾಯದ ಸಂಪೂರ್ಣ ಸಹಕಾರದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಮುಖಂಡ ಕಲ್ಲಹಟ್ಟಿ ಹರೀಶ್ ಮಾತನಾಡಿ, ಮಕ್ಕಳಲ್ಲಿ ಗಣಿತ ವಿಷಯದ ಬಗೆಗಿನ ಕಪೋಲ ಕಲ್ಪಿತ ಆತಂಕ ದೂರ ಮಾಡಬೇಕಾಗಿದೆ. ಎಲ್ಲಾ ವಿಷಯಗಳಂತೆ ಗಣಿತವು ಸಹ ಕಲಿಯಲು ಸುಲಭದ ವಿಷಯ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಕಲಿಕೆಯ ಬಗ್ಗೆ ಉತ್ಸಾಹ ಮೂಡಿಸುವಲ್ಲಿ ಈ ಪ್ರಯತ್ನ ತುಂಬಾ ಉತ್ತಮವಾಗಿದ್ದು, ಎಲ್ಲಾ ಮಕ್ಕಳು ಸಂಭ್ರಮದಿಂದ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಎಸ್ ಡಿಎಂಸಿ ಅಧ್ಯಕ್ಷ ಎಂ. ಮಂಜುನಾಥ್ ಮಾತನಾಡಿ, ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದ್ದು, ಗ್ರಾಮದ ಮುಖಂಡರು ಸಮುದಾಯದ ಸಕಲರು ಸಹಕಾರ ನೀಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿರುವುದು ಸಂತೋಷದ ವಿಷಯ ಎಂದರು.

ನಾಲ್ಕನೇ ತರಗತಿಯಲ್ಲಿ ಕೆಸಿ. ರೊಪ್ಪದ ಸಿದ್ಧಾರ್ಥ ಪ್ರಥಮ ಬಹುಮಾನ, ಐಮಂಗಲ‌ದ ಬಿ. ರಂಗಸ್ವಾಮಿ ದ್ವಿತೀಯ ಬಹುಮಾನ, ಕಲ್ಲಹಟ್ಟಿ‌ಯ ಓ. ರಾಣಿ ತೃತೀಯ ಬಹುಮಾನವನ್ನು, 5ನೇ ತರಗತಿಯಲ್ಲಿ ಕೆಸಿ. ರೊಪ್ಪದ ದ್ಯಾಮಲ ಪ್ರಥಮ ಬಹುಮಾನ, ಮಲ್ಲರಸನಹಟ್ಟಿಯ ಶ್ರೀನಿಧಿ ದ್ವಿತೀಯ ಬಹುಮಾನ, ಐಮಂಗಲ‌ದ ತಿಪ್ಪೇಸ್ವಾಮಿ ತೃತೀಯ ಬಹುಮಾನ ಹಾಗೂ 6ನೇ ತರಗತಿಯಲ್ಲಿ ಭರಂಪುರದ ಚೈತನ್ಯ ಪ್ರಥಮ ಬಹುಮಾನ, ಕಲ್ಲಹಟ್ಟಿಯ ಪೂಜಾ ದ್ವಿತೀಯ ಬಹುಮಾನ, ಐಮಂಗಲ‌ದ ಸ್ವೀಕೃತ ತೃತೀಯ ಬಹುಮಾನಗಳನ್ನು ಪಡೆದರು. ನಂತರದ ನಾಲ್ಕು, ಐದು ಮತ್ತು ಆರನೇ ಸ್ಥಾನಗಳನ್ನು ಪಡೆದ ಮಕ್ಕಳಿಗೆ ಕಲ್ಲಹಟ್ಟಿಯ ಯುವ ಮುಖಂಡ ಹರೀಶ್ ರವರು ಉಳಿದ ಒಟ್ಟು ಒಂಬತ್ತು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಲಾ ಮುನ್ನೂರು ರೂಪಾಯಿಗಳ ನಗದು ಬಹುಮಾನ ನೀಡಿದರು.

ಈ ಸಂದರ್ಭದಲ್ಲಿ ಎಸ್ ಡಿಎಂಸಿ ಉಪಾಧ್ಯಕ್ಷೆ ಚೈತ್ರಾ ನಿಜಲಿಂಗಪ್ಪ, ಸದಸ್ಯರಾದ ಧನಂಜಯ್, ದಾಸಪ್ಪ, ಗ್ರಾಮ ಪಂಚಾಯಿತಿ ಓಂಕಾರಮ್ಮ, ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಟಿ. ಚಕ್ರಪಾಣಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆಟಿ. ಕೆಂಚಣ್ಣ, ಶಿಕ್ಷಕರ ಸಂಘದ ನಿರ್ದೇಶಕ ಎಚ್. ಮಹಾಲಿಂಗಪ್ಪ, ಮುಖ್ಯ ಶಿಕ್ಷಕ ಜಯಪ್ರಕಾಶ್, ಸಹ ಶಿಕ್ಷಕರಗಳಾದ ರಂಗಮ್ಮ, ನರಸಮ್ಮ,ಮಲ್ಲಮ್ಮ, ಮಲ್ಲಿಕಾರ್ಜುನ್, ತ್ರಿವೇಣಿ ಸೇನ್, ಎಂವಿ ಗೀತಾ, ಮಲ್ಲಿಕಾರ್ಜುನ್, ನರಸಮ್ಮ, ಮಲ್ಲಮ್ಮ, ರಂಗಮ್ಮ, ಜೆಜೆ ಪಲ್ಲವಿ, ಛಾಯಾ, ತಾರಾ ಹಾಗೂ ಐಮಂಗಲ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.