ಸಾರಾಂಶ
ಹೊನ್ನಾವರ: ಮಠ ಎಂದರೆ ಒಂದು ಸಮಾಜದ ಅಭ್ಯುದಯಕ್ಕಾಗಿ ನಿಲ್ಲುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಅವರು ಕೆಳಗಿನೂರಿನಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನೂತನ ಶಾಖಾಮಠವ ಉದ್ಘಾಟನೆ ಮತ್ತು ಒಕ್ಕಲು ಉತ್ಸವ ಕಾರ್ಯಕ್ರಮ ನೆರವೇರಿಸಿ ಆಶೀರ್ವಚನ ನೀಡಿ ಮಾತನಾಡಿದರು. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕದ ಎಲ್ಲ ವ್ಯವಸ್ಥೆಗಳು ಮಠದ ಮುಖಾಂತರ ಆಗುತ್ತವೆ. ಈ ವ್ಯವಸ್ಥೆ ಈ ಮೊದಲು ಇತ್ತು. ಈಗ ಮಠ ಸ್ಥಾಪನೆಯಿಂದ ಇನ್ನಷ್ಟು ಎತ್ತರಕ್ಕೆ ಏರುತ್ತದೆ ಎಂದರು.ಮಠ, ಸಂಘ, ಸಂಘಟನೆಗಳು ಆಗಬೇಕು. ಸಮಾಜ ಕಟ್ಟುವ ಕೆಲಸ ಒಗ್ಗಟ್ಟಿನಿಂದ ನಡೆದಿದೆ. ಜನಪ್ರತಿನಿಧಿಗಳ ಸಹಾಯ ಮತ್ತು ಸಮಾಜದ ಎಲ್ಲರ ಸಹಕಾರದಿಂದ ಶಾಖಾಮಠ ಸ್ಥಾಪನೆಯಾಗಿದೆ. ಮಾನವ ಸಂಪನ್ಮೂಲ ನಷ್ಟ ಆಗಬಾರದು. ಎಲ್ಲರೂ ಎಚ್ಚೆತ್ತು ಕೆಲಸ ಮಾಡಲು ಹೊರಟಿದ್ದೀರಿ. ಕೀಳರಿಮೆ ಬೇಡ ಭಕ್ತಿ, ಶ್ರದ್ಧೆ, ವಿದ್ಯೆ ಸದಾ ನಮ್ಮನ್ನು ಕಾಪಾಡುತ್ತದೆ. ಮಠದಿಂದ ಸೌಹಾರ್ದಯುತ ಸಮಾಜಕ್ಕೆ ಅನುಕೂಲವಾಗುವ ಕೆಲಸಗಳು ನಡೆಯುತ್ತದೆ ಎಂದರು.
ಶಾಸಕ ಡಾ. ಅಶ್ವತ್ಥನಾರಾಯಣ ಮಾತನಾಡಿ, ವೈಷಮ್ಯಗಳನ್ನು ಬಿಟ್ಟು ಸೌಹಾರ್ದ ಮೂಡಿಸುವ ಕೆಲಸ ನಡೆಯಬೇಕು. ನಗರೀಕರಣದಿಂದಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು.ಸಚಿವ ಮಂಕಾಳ ವೈದ್ಯ ಮಾತನಾಡಿ, ಸ್ವಾಮೀಜಿಯವರು ಶಾಖಾಮಠ ನಿರ್ಮಿಸಲು ಹೇಳಲಿಲ್ಲ, ಅದನ್ನು ನನ್ನ ಆಸೆಗಾಗಿ ಮಾಡಿದ್ದೇನೆ. ಒಂದೇ ಮರದಲ್ಲಿ ಎಲ್ಲ ಬಗೆಯ ಹಣ್ಣುಗಳು ಸಿಗುವ ಮರ ಇದ್ದರೆ ಅದು ಆದಿಚುಂಚನಗಿರಿ ಮಠ ಮಾತ್ರ. ಶಿಕ್ಷಣಕ್ಕೆ ಹೆಚ್ಚಿನ ಕೊಡುಗೆಯನ್ನು ಶ್ರೀಮಠ ನೀಡುತ್ತಿದೆ. ನಾನು ಈ ಸ್ಥಾನದಲ್ಲಿ ನಿಂತು ಮಾತನಾಡಲು ಆದಿಚುಂಚನಗಿರಿ ಮಠವೇ ಕಾರಣ ಎಂದರು.
ಶಾಖಾಮಠ ಸ್ಥಾಪನೆಗೆ ಸಹಾಯ ನೀಡಿದ ಸಚಿವ ಮಂಕಾಳ ವೈದ್ಯ, ಪತ್ನಿ ಪುಷ್ಪಲತಾ, ಪುತ್ರಿ ಬೀನಾ ವೈದ್ಯ ಅವರನ್ನು ಸನ್ಮಾನಿಸಲಾಯಿತು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕುಮಟಾ ತಾಲೂಕಿನಲ್ಲಿಯೂ ಒಕ್ಕಲಿಗ ಸಮಾಜದ ಮಠ ಹಾಗೂ ವಿದ್ಯಾಸಂಸ್ಥೆ ಜನಮನ್ನಣೆ ಪಡೆದಿದೆ. ಶ್ರೀಮಠವು ಶಿಕ್ಷಣ, ಆಧ್ಯಾತ್ಮಿಕ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಹಲವು ಕೂಡುಗೆ ನೀಡಿದೆ. ಸಮಾಜದ ಜೊತೆ ಸದಾ ಕಾಲ ಇರಲಿದ್ದು, ಅವರ ಅಗತ್ಯತೆಯನ್ನು ಪೂರೈಸಲು ಸದಾ ಕಾಲ ಇರುವ ಭರವಸೆ ನೀಡಿದರು.ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶಿಕ್ಷಣ ಇದ್ದಾಗ ಮಾತ್ರ ಪ್ರಗತಿ ಸಾಧ್ಯ. ಆ ನಿಟ್ಟಿನಲ್ಲಿ ಮಠವು ಶಿಕ್ಷಣದ ಜೊತೆ ಸಂಸ್ಕಾರ ನೀಡಿದೆ. ಜಿಲ್ಲೆಯ ಘಟ್ಟದ ಭಾಗದಲ್ಲಿ ಸಮಾಜ ಒಗ್ಗೂಡಿಸಲು ಮಠ ನಿರ್ಮಿಸಬೇಕು. ಆ ಕಾರ್ಯಕ್ಕೆ ಶ್ರೀಮಠದೊಂದಿಗೆ ಸಹಕಾರ ನೀಡುವ ಕಾರ್ಯ ಮಾಡುವ ಭರವಸೆ ನೀಡಿದರು.
ಶಾಖಾಮಠ ಸ್ಥಾಪನೆಗೆ ಸಹಾಯ ನೀಡಿದ ಸಚಿವ ಮಂಕಾಳ ವೈದ್ಯ, ಪತ್ನಿ ಪುಷ್ಪಲತಾ, ಪುತ್ರಿ ಬೀನಾ ವೈದ್ಯ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಗಣಪಯ್ಯ ಗೌಡ, ಸಮುದಾಯ ಭವನ ನಿರ್ವಾಹಕ ಕಿರಣ ಮಂಜು ಗೌಡ, ಮಾದೇವಿ ಗೌಡ ಹೊಳ್ಳಾಕುಳಿ ಅವರನ್ನು ಸನ್ಮಾನಿಸಲಾಯಿತು. ಬಿ.ಜಿ.ಎಸ್. ರೈತ ರತ್ನ ಪ್ರಶಸ್ತಿ ಮತ್ತು ದಾನಿಗಳಿಗೆ ಸನ್ಮಾನ ನಡೆಯಿತು.ತಾಲೂಕು ಒಕ್ಕಲಿಗ ಸಂಘದ ತಿಮ್ಮಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆದಿಚುಂಚನಗಿರಿ ಶಾಖಾಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶಾಖಾಮಠದ ಪೂಜ್ಯರು ಮತ್ತು ಬ್ರಹ್ಮಚಾರಿಗಳು, ಡಿಎಫ್ ಒ ಯೋಗೇಶ್ ಸಿ.ಕೆ ತಹಶೀಲ್ದಾರ ಪ್ರವೀಣ ಕರಾಂಡೆ, ಕೆಳಗಿನೂರು ಗ್ರಾಪಂ ಅಧ್ಯಕ್ಷೆ ಚಿತ್ರಾಕ್ಷಿ ಗೌಡ,ಶಾಖಾಮಠ ಲೋಕಾರ್ಪಣಾ ಸಮಿತಿ ಅಧ್ಯಕ್ಷ ಕೃಷ್ಣ ಗೌಡ, ಕೆ.ಟಿ ಗೌಡ, ಭೈರವಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶಾಂತಿ ಮಾದೇವ ಗೌಡ,ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಧರ್ಮೇಶ್ ಸಿರಿಬೈಲ್, ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ವಾಸು ಗೌಡ ಮತ್ತಿತರಿದ್ದರು.
ಲಕ್ಷ್ಮೀಕಾಂತ ಗೌಡ ಸ್ವಾಗತಿಸಿದರು. ರಾಘವೇಂದ್ರ ಗೌಡ ನಿರೂಪಿಸಿದರು.