ಗ್ರಾಮೀಣರ ಆದಾಯ ವೃದ್ಧಿಗೆ ಮತ್ಸ್ಯ ಸಂಜೀವಿನಿ ಯೋಜನೆ

| Published : Oct 31 2025, 01:45 AM IST

ಗ್ರಾಮೀಣರ ಆದಾಯ ವೃದ್ಧಿಗೆ ಮತ್ಸ್ಯ ಸಂಜೀವಿನಿ ಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಹೆಚ್ಚುವರಿ ಜೀವನೋಪಾಯ ಅವಕಾಶ, ಉದ್ಯೋಗಾವಕಾಶ ಹೆಚ್ಚಿಸುವುದು ಮತ್ತು ಪರಿಣಾಮವಾಗಿ ಗ್ರಾಮೀಣ ಕುಟುಂಬಗಳ ಆದಾಯವನ್ನು ವೃದ್ಧಿಗೊಳಿಸುವುದು ಮತ್ಸ್ಯ ಸಂಜೀವಿನಿ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಹೆಚ್ಚುವರಿ ಜೀವನೋಪಾಯ ಅವಕಾಶ, ಉದ್ಯೋಗಾವಕಾಶ ಹೆಚ್ಚಿಸುವುದು ಮತ್ತು ಪರಿಣಾಮವಾಗಿ ಗ್ರಾಮೀಣ ಕುಟುಂಬಗಳ ಆದಾಯವನ್ನು ವೃದ್ಧಿಗೊಳಿಸುವುದು ಮತ್ಸ್ಯ ಸಂಜೀವಿನಿ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ, ಮೀನುಗಾರಿಕೆ ಇಲಾಖೆ ಹಾಗೂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮತ್ಸ್ಯ ಸಂಜೀವಿನಿ (ಒಳನಾಡು) ಮೀನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮೀನು ಕೃಷಿಯು ಒಂದು ಉಪ ಕಸುಬಾಗಿದ್ದು, ಮೀನು ಕೃಷಿಯಿಂದ ಅಗ್ಗದ ದರದಲ್ಲಿ ಉತ್ತಮ ಪ್ರೋಟಿನ್ ಯುಕ್ತ ಆಹಾರ ದೊರಯುತ್ತಿದೆ. ಈಗಾಗಲೇ ಗುರುತಿಸಿರುವ ಕೆರೆಗಳಲ್ಲಿ ವ್ಯವಸ್ಥಿತವಾಗಿ ಮೀನುಕೃಷಿ ಮತ್ತು ಮಾರಾಟ ಚಟುವಟಿಕೆಗಳಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು ತೊಡಗಿಸಿಕೊಳ್ಳುವ ಮೂಲಕ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೂ ನೆರವಾಗಲಿದೆ ಎಂದರು. ಈಗಾಗಲೇ ಗ್ರಾಮ ಪಂಚಾಯತಿಗಳಲ್ಲಿ ಉಪಯುಕ್ತ ಕೆರೆಗಳನ್ನು ತಾಲೂಕುವಾರು ಗುರುತಿಸಿದ್ದು, ಮೀನುಕೃಷಿಗಾಗಿ ಗ್ರಾಮ ಪಂಚಾಯತಿ ಮತ್ತು ಒಕ್ಕೂಟಗಳ ನಡುವೆ ಕರಾರು ಒಪ್ಪಂದವಾಗಿರುತ್ತದೆ. ಮುಂದಿನ ದಿನಗಳಲ್ಲಿ ಗುರುತಿಸಲಾಗಿರುವ ಕೆರೆಗಳಿಗೆ ಮೀನು ಮರಿಗಳನ್ನು ಬಿಟ್ಟು ಮೀನುಕೃಷಿಯಿಂದ ಮಹಿಳೆಯರು ಆರ್ಥಿಕವಾಗಿ ಸದೃಢವಾಗುವಂತೆ ಜಿ.ಪಂ. ಸಿಇಒ ಮೋನಾ ರೋತ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಹಾಗೂ ನೋಡೆಲ್ ಅಧಿಕಾರಿ ಶೃತಿ ಅವರು ಮಾತನಾಡಿ, ಜಿಲ್ಲಾ ಪಂಚಾಯಿತಿ ನಲ್ಲಿ 2 ದಿನಗಳ ತರಬೇತಿಯಲ್ಲಿ ಮೊದಲ ದಿನ ಕಾರ್ಯಕ್ರಮ ರೂಪುರೇಷೆ ಮತ್ತು ಅನುಷ್ಠಾನ ಕುರಿತು ತರಬೇತಿಯನ್ನು ನೀಡಲಾಗುವುದು. ಎರಡನೇ ದಿನ ಪ್ರಾಯೋಗಿಕ ತರಬೇತಿಯನ್ನು ಆಯೋಜಿಸಲಾಗಿದೆ. ಮಹಿಳೆಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಗ್ರಾಮೀಣ ಭಾಗದಲ್ಲಿ ಜನರಿಗೆ ಪೌಷ್ಠಿಕ ಆಹಾರವನ್ನು ತಲುಪಿಸಲು ಕಾರ್ಯಕ್ರಮವು ಸಹಕಾರಿಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೀನುಗಾರಿಕೆ ಉಪನಿರ್ದೇಶಕ ಮಂಜೇಶ್, ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಮಹದೇವ್, ಇತರರು ಹಾಜರಿದ್ದರು.