ಸಾರಾಂಶ
ರಥೋತ್ಸವಕ್ಕೆ ಪ್ರತಿಷ್ಠಾಪಿಸುವ ಕಳಸಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿ ಮೂಲ ದೇವರಿಗೆ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ಭಕ್ತಿ ಪ್ರಧಾನವಾಗಿ ಜರುಗಿತು. ಸ್ವಾಮಿಗೆ ಹರಿಸಿನ, ಕುಂಕುಮ ಹಾಗೂ ವಿವಿಧ ಹೂಗಳಿಂದ ವಿಶೇಷವಾಗಿ ಆಲಂಕಾರ ಮಾಡಿ ಮಹಾಮಂಗಳಾರತಿ ನಡೆಸಿ ಸಾರ್ವಜನಿಕರಿಗೆ ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಯಿತು.
ಕನ್ನಡ ಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಕಂದೇಗಾಲ- ಕಲ್ಲುವೀರನಹಳ್ಳಿ ಗ್ರಾಮಗಳ ಮಧ್ಯೆ ನೆಲೆಸಿರುವ ಪ್ರಸಿದ್ಧ ಮತ್ತಿತಾಳೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ಮಂಟೇಸ್ವಾಮಿ ಬಸವಪ್ಪ ಅವರ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.ಗುರುವಾರ ಬೆಳಗ್ಗೆ ಮತ್ತಿತಾಳೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಕಲ್ಯಾಣಿಯಲ್ಲಿ ಹೊಸನೀರು ತಂದು ಉಮಾಮಹೇಶ್ವರಿ, ಪಂಚ, ನವಗ್ರಹ ಕಳಸಗಳನ್ನು ಪ್ರತಿಷ್ಠಾಪಿಸಿ ಸುಭ್ರಮಣ್ಯ, ಮತ್ತಿತಾಳೇಶ್ವರ ದೇವರಿಗೆ ಹೋಮಹವನ ನಡೆಸಲಾಯಿತು.
ರಥೋತ್ಸವಕ್ಕೆ ಪ್ರತಿಷ್ಠಾಪಿಸುವ ಕಳಸಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿ ಮೂಲ ದೇವರಿಗೆ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ಭಕ್ತಿ ಪ್ರಧಾನವಾಗಿ ಜರುಗಿತು. ಸ್ವಾಮಿಗೆ ಹರಿಸಿನ, ಕುಂಕುಮ ಹಾಗೂ ವಿವಿಧ ಹೂಗಳಿಂದ ವಿಶೇಷವಾಗಿ ಆಲಂಕಾರ ಮಾಡಿ ಮಹಾಮಂಗಳಾರತಿ ನಡೆಸಿ ಸಾರ್ವಜನಿಕರಿಗೆ ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಯಿತು.ಹೂವು ಹೊಂಬಾಳೆ:
ದೇವಸ್ಥಾನದ ಕಲ್ಯಾಣ ಆವರಣದಲ್ಲಿ ಹೊನ್ನಾಯಕನಹಳ್ಳಿ ಧರೆಗೆ ದೊಡ್ಡವರು ಮಂಟೇಸ್ವಾಮಿ ಬಸವಪ್ಪ, ಕಂಡಾಯ, ಮಂದಗಹಳ್ಳಿ ಬಸವೇಶ್ವರ, ಮಾರಮ್ಮ, ಕಂದೇಗಾಲ ಚಿಕ್ಕಮ್ಮ ತಾಯಿ ದೊಡ್ಡಮ್ಮ ತಾಯಿ, ಮಾರಮ್ಮ ಪೂಜೆ, ಚನ್ನಿಗರಾಯಸ್ವಾಮಿ ಹನುಮಂತರಾಯಸ್ವಾಮಿಯ ಉತ್ಸವ ಮೂರ್ತಿಗಳಿಗೆ ಹೂವು ಹೊಂಬಾಳೆ ಕಾರ್ಯವು ವಿಧಿ ವಿಧಾನಗಳೊಂದಿಗೆ ನರೆವೇರಿಸಲಾಯಿತು. ಮಂಟೇಸ್ವಾಮಿ ಹಾಗೂ ಮತ್ತಿತಾಳೇಶ್ವರ ಅರ್ಚಕರು ಪೂಜೆ ಸಲ್ಲಿಸಿದ ನಂತರ ತಮಟೆ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ರಥ ನಿಂತ ಸ್ಥಳಕ್ಕೆ ಕರೆ ತರಲಾಯಿತು.ವಿವಿಧ ಬಣ್ಣದ ಬಟ್ಟೆಗಳು ಹಾಗೂ ಹೂಗಳಿಂದ ಶೃಂಗರಿಸಲಾಗಿದ್ದ ರಥಕ್ಕೆ ಮತ್ತಿತಾಳೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮಂಟೇಸ್ವಾಮಿ ಬಸವಪ್ಪ ರಥದ ಮುಂದೆ ಬರುತ್ತಿದ್ದಂತೆ ತಹಸೀಲ್ದಾರ್ ಎಸ್.ವಿ ಲೊಕೇಶ್ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ದೇವಸ್ಥಾನದ ಸುತ್ತ ಒಂದು ಸುತ್ತು ರಥವನ್ನು ಯುವಕರು ಎಳೆದು ಯಶಸ್ವಿಗೊಳಿಸಿದರು. ನವವಧು ವರರು ಸೇರಿದಂತೆ ಸಾವಿರಾರು ಭಕ್ತರು ರಥಕ್ಕೆ ಹಣ್ಣು ಜವನ ಎಸೆದರು. ಕೆಲವರು ರಥಕ್ಕೆ ಎಸೆಯುವ ಬಾಳೆ ಹಣ್ಣಿಗೆ ಹರಕೆ ಕಟ್ಟಿಕೊಳ್ಳುವುದನ್ನು ಬರೆದು ರಥಕ್ಕೆ ಎಸೆಯುವುದು ವಿಶೇಷವಾಗಿತ್ತು.ಅನ್ನಸಂತರ್ಪಣೆ:
ಹರಕೆವೊತ್ತ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಂಡಿದ್ದರು. ತಾಲೂಕು ಆಡಳಿತದ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ರಥೋತ್ಸವದ ಅಂಗವಾಗಿ ಸಾವಿರಾರು ಭಕ್ತರು ಆಗಮನದ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.