ಪುತ್ತಿಗೆ ಪರ್ಯಾಯಕ್ಕೆ ಮಟ್ಟುಗುಳ್ಳ ಸಮರ್ಪಣೆ

| Published : Jan 17 2024, 01:48 AM IST

ಸಾರಾಂಶ

ಉಡುಪಿಯ ಪರ್ಯಾಯೋತ್ಸವಕ್ಕೂ ಮಟ್ಟು ಗ್ರಾಮದಲ್ಲಿ ಬೆಳೆಯುವ ಗುಳ್ಳ (ಬದನೆ)ಕ್ಕೂ ವಿಶೇಷ ಸಂಬಂಧ ಇದೆ. ಪ್ರತಿ ಪರ್ಯಾಯೋತ್ಸವದಲ್ಲೂ ಮಟ್ಟು ಗ್ರಾಮಸ್ಥರು ದೋಣಿಯಲ್ಲಿ ಮಟ್ಟುಗುಳ್ಳಗಳನ್ನು ತುಂಬಿ ಹೊರೆಕಾಣಿಕೆ ತಂದು ಕೊಡುವುದು ಸಂಪ್ರದಾಯವಾಗಿದೆ. ಈ ಬಾರಿಯೂ ಮಂಗಳವಾರ ಮಟ್ಟುಗ್ರಾಮಸ್ಥರಿಂದ ಹೊರೆಕಾಣಿಕೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ವಿಶ್ವಮಾನ್ಯರಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕೊನೆಯ ಕ್ಷಣದ ಸಿದ್ಧತೆಗಳು ತರಾತುರಿಯಲ್ಲಿ ನಡೆಯುತ್ತಿವೆ.

ಈಗಾಗಲೇ ಶ್ರೀಪಾದರ ಆಹ್ವಾನದ ಮೇರೆಗೆ ಜಪಾನ್ ದೇಶದ ಅತಿಥಿಗಣ್ಯರು ಉಡುಪಿಗೆ ಆಗಮಿಸಿದ್ದಾರೆ. ದೇಶ ವಿದೇಶಗಳಿಂದಲೂ ಕೃಷ್ಣ ಭಕ್ತರು, ಪುತ್ತಿಗೆ ಶ್ರೀಗಳ ಅಭಿಮನಿಗಳು ಪರ್ಯಾಯೋತ್ಸವ ಕಣ್ತುಂಬಿಕೊಳ್ಳಲು ಉಡುಪಿಗೆ ಆಗಮಿಸಿದ್ದು, ನಗರದ ಎಲ್ಲ ಹೊಟೇಲು, ಲಾಡ್ಜು ಭರ್ತಿಯಾಗಿವೆ.

ಶ್ರೀಪಾದರು ತಮ್ಮ ಪರ್ಯಾಯೋತ್ಸವಕ್ಕೆ ಕೊನೆಕ್ಷಣದ ಆಮಂತ್ರಣವನ್ನು ಖುದ್ದಾಗಿ ಸಂಘಸಂಸ್ಥೆಗಳಿಗೆ ತೆರಳಿ ನೀಡುತ್ತಿದ್ದಾರೆ. ಮಂಗಳವಾರ ಉಡುಪಿಯ ಯಕ್ಷಗಾನ ಕಲಾರಂಗಕ್ಕೆ ಭೇಟಿ ನೀಡಿದ ಶ್ರೀಪಾದರನ್ನು ಯಕ್ಷಗಾನದ ಕಿರೀಟ ತೊಡಿಸಿ ಗೌರವಿಸಲಾಯಿತು.

ನಂತರ ಪರ್ಯಾಯ ಸ್ವಾಗತ ಸಮಿತಿಯ ಕೋಶಾಧಿಕಾರಿಯಾಗಿರುವ ರಂಜನ್ ಕಲ್ಕೂರ್ ಅವರ ಸಂಸ್ಥೆಗೆ ಭೇಟಿ ನೀಡಿದ ಶ್ರೀಪಾದರ ಮೇಲೆ ಜೆಸಿಬಿಯಿಂದ ಅರಳು ಸುರಿದು ಸ್ವಾಗತಿಸಲಾಯಿತು. ಕಲ್ಕೂರ ದಂಪತಿ ಅಲ್ಲಿನ ಸಿಬ್ಬಂದಿಯಿಂದ ಶ್ರೀಗಳು ಗೌರವ ಸ್ವೀಕಾರ, ಅನುಗ್ರಹ ಸಂದೇಶ ನೀಡಿ, ಕೋಟಿ ಗೀತಾ ಲೇಖನ ದೀಕ್ಷೆ ನೀಡಿದರು.

* ಮಟ್ಟುಗುಳ್ಳ ಅರ್ಪಣೆ

ಉಡುಪಿಯ ಪರ್ಯಾಯೋತ್ಸವಕ್ಕೂ ಮಟ್ಟು ಗ್ರಾಮದಲ್ಲಿ ಬೆಳೆಯುವ ಗುಳ್ಳ (ಬದನೆ)ಕ್ಕೂ ವಿಶೇಷ ಸಂಬಂಧ ಇದೆ. ಪ್ರತಿ ಪರ್ಯಾಯೋತ್ಸವದಲ್ಲೂ ಮಟ್ಟು ಗ್ರಾಮಸ್ಥರು ದೋಣಿಯಲ್ಲಿ ಮಟ್ಟುಗುಳ್ಳಗಳನ್ನು ತುಂಬಿ ಹೊರೆಕಾಣಿಕೆ ತಂದು ಕೊಡುವುದು ಸಂಪ್ರದಾಯವಾಗಿದೆ. ಈ ಬಾರಿಯೂ ಮಂಗಳವಾರ ಮಟ್ಟುಗ್ರಾಮಸ್ಥರಿಂದ ಹೊರೆಕಾಣಿಕೆ ನಡೆಯಿತು. ಈ ಹೊರೆಕಾಣಿಕೆಯನ್ನು ಮಠದ ದಿವಾಣರಾದ ನಾಗರಾಜ ಆಚಾರ್ಯರು ಸ್ವಾಗತಿಸಿ ಗ್ರಾಮಸ್ಥರನ್ನು ಗೌರವಿಸಿದರು.

* ಫೈಝ್ ಖಾನ್ ಭಾಷಣ

ಸಂಜೆ ಪರ್ಯಾಯೋತ್ಸವದ ಅಂಗವಾಗಿ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ದೆಹಲಿಯ ಗೋ ಚಳುವಳಿಕಾರ ಮೊಹಮ್ಮದ್ ಫೈಝ್ ಖಾನ್ ಅವರಿಂದ ‘ಹಮೇಶಾ ದೇಶ್ ಕ ಅಸ್ತಿತ್ವ ಗಾಯ್ ಮೇ ಹೀ ಹೋತಾ ಹೈ’ ಎಂಬ ಬಗ್ಗೆ ವಿಶೇಷ ಭಾಷಣ ನಡೆಯಿತು.

ನಂತರ ಇದೇ ವೇದಿಕೆಯಲ್ಲಿ ಶ್ರೀಲಲಿತಾ ಉಳಿಯಾರು ಅವರಿಂದ ಹರಿಕಥೆ ಮತ್ತು ಹೊರೆಕಾಣಿಕೆ ಸಂಗ್ರಹ ಆವರಣದ ಕನಕದಾಸ ಮಂಟಪದಲ್ಲಿ ಕಾಪುವಿನ ಶಾಂಭವಿ ನೃತ್ಯ ನಿಕೇತನದ ತೃಪ್ತಿ ಜಿ. ಕಾಮತ್ ಬಳಗದಿಂದ ಭರತನಾಟ್ಯ ಪ್ರದರ್ಶನ ನಡೆಯಿತು.