ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿನವವಿಧ ಭಕ್ತಿಯಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿರುವ ಭಜನೆ ಭಗವಂತನನ್ನು ಒಲಿಸುವ ಸುಲಭ ಸಾಧನ. ದಾಸವರೇಣ್ಯರು ನಡೆದಾಡಿದ ಪುಣ್ಯಭೂಮಿ ಉಡುಪಿಯ ರಾಜಾoಗಣದಲ್ಲಿ ನ.10ರಂದು ಮಧ್ಯಾಹ್ನ ಗಂಟೆ 2.30ಕ್ಕೆ ನಡೆಯುವ ''''''''ಸಹಸ್ರ ಕಂಠ ಬೃಹತ್ ಗೋಷ್ಠಿ ಗಾಯನ'''''''' ಸಹಸ್ರ ಕಂಠಗಳೊಂದಿಗೆ ಎಲ್ಲೆಡೆ ಮಾರ್ಧನಿಸಿ ಭಜನಾ ಕ್ರಾಂತಿಗೆ ನಾಂದಿ ಹಾಡಲಿ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಹೇಳಿದರು.ಅವರು ಶ್ರೀ ವಿಜಯದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ ಉಡುಪಿ ಹಾಗೂ ಬೆಂಗಳೂರಿನ ಶ್ರೀನಿವಾಸ ಉತ್ಸವ ಬಳಗ ಬೆಂಗಳೂರು ಇವರ ಆಶ್ರಯದಲ್ಲಿ ಉಡುಪಿ ತಾಲೂಕು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸಹಯೋಗದೊಂದಿಗೆ ‘ಸಹಸ್ರ ಕಂಠ ಬೃಹತ್ ಗೋಷ್ಠಿ ಗಾಯನ’ ಕಾರ್ಯಕ್ರಮದ ಪೂರ್ವಭಾವಿಯಾಗಿ ರಾಜಾoಗಣದಲ್ಲಿ ಹಮ್ಮಿಕೊಂಡಿರುವ 4 ದಿನಗಳ ಭಜನಾ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.ಉಡುಪಿ ಶ್ರೀ ಕೃಷ್ಣನ ಸಾನಿಧ್ಯದಲ್ಲಿ, ಅ.20 ರಿಂದ ನ.3ರ ವರೆಗೆ ಪ್ರತೀ ಭಾನುವಾರ ಮಧ್ಯಾಹ್ನ ಗಂಟೆ 2 ರಿಂದ ಸಂಜೆ 5 ರವರೆಗೆ ರಾಜಾಂಗಣದಲ್ಲಿ ಮಠದ ವಿದ್ವಾಂಸ ಗೋಪಾಲಾಚಾರ್ಯ ಅವರ ಮಾರ್ಗದರ್ಶನದಲ್ಲಿ ಖ್ಯಾತ ಭಜನಾ ತರಬೇತುದಾರೆ ವಿದುಷಿ ಉಷಾ ಹೆಬ್ಬಾರ್ ಮಣಿಪಾಲ ಅವರಿಂದ ನಡೆಯುವ ಭಜನಾ ತರಬೇತಿಯಲ್ಲಿ ಭಜನಾ ಮಂಡಳಿಗಳ ಸದಸ್ಯರು ಮತ್ತು ಭಜನಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನ.10 ಭಾನುವಾರ ಮಧ್ಯಾಹ್ನ ಗಂಟೆ 2ರಿಂದ ಸಂಜೆ 5ರ ವರೆಗೆ ರಾಜಾoಗಣದಲ್ಲಿ ನಡೆಯುವ ‘ಸಹಸ್ರ ಕಂಠ ಬೃಹತ್ ಗೋಷ್ಠಿ ಗಾಯನ’ದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು.ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ, ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಪಿ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್., ಭಜನಾ ತರಬೇತುದಾರೆ ವಿದುಷಿ ಉಷಾ ಹೆಬ್ಬಾರ್ ಮಣಿಪಾಲ, ಭಜನಾ ಪರಿಷತ್ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಉಪಾಧ್ಯಕ್ಷರುಗಳಾದ ವಜ್ರಾಕ್ಷಿ ಪಿ. ದಾಸ್ ಕಡಿಯಾಳಿ, ಸುಮಿತ್ರಾ ನಾಯ್ಕ್ ಪೆರಂಪಳ್ಳಿ, ಜೊತೆ ಕಾರ್ಯದರ್ಶಿ ಸತೀಶ್ ಕುಮಾರ್ ಕೇದಾರ್, ಯೋಜನೆಯ ತಾಲೂಕು ಕೃಷಿ ಅಧಿಕಾರಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.