ರೈತರ ಬದುಕು ಹಸನಾಗಿಸುವ ಪ್ರಯತ್ನಗಳಾಗಲಿ

| Published : Nov 24 2025, 01:15 AM IST

ಸಾರಾಂಶ

ಕಲ್ಪತರು ಉತ್ಸವದಲ್ಲಿ 58 ಮಂದಿ ಪ್ರಗತಿಪರ ರೈತರನ್ನು ಸನ್ಮಾನ

ಕನ್ನಡಪ್ರಭ ವಾರ್ತೆ, ತುಮಕೂರು

ಇಂದು ಕೃಷಿ ಲಾಭದಾಯಕವಾಗಿಲ್ಲ. ಹೀಗಾಗಿ ರೈತರು ಕೃಷಿಯಿಂದ ವಿಮುಖರಾಗುವ ಪರಿಸ್ಥಿತಿ ಬಂದಿದೆ. ರೈತರ ಮಕ್ಕಳು ಬದುಕು ಕಟ್ಟಿಕೊಳ್ಳಲು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಿ ರೈತರ ಮಕ್ಕಳು ಹಳ್ಳಿಗಳಲ್ಲೇ ಉಳಿದು ಅವರು ದುಡಿಯುವಂತಹ ವಾತಾವರಣವನ್ನು ಸರ್ಕಾರಗಳು ಮಾಡಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಐಕ್ಯ ಫೌಂಡೇಶನ್, ಇನ್ನರ್ ವ್ಹೀಲ್ ಸಂಸ್ಥೆ ಸಹಯೋಗದಲ್ಲಿ ನಡೆದ ಕಲ್ಪತರು ಉತ್ಸವ ಉದ್ಘಾಟಿಸಿ, 58 ಮಂದಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿದ ಶಾಸಕರು, ಹೇಮಾವತಿ ನೀರು ಜಿಲ್ಲೆಗೆ ಬರದಿದ್ದರೆ ಜಿಲ್ಲೆಯ ಪರಿಸ್ಥಿತಿ ಚಿಂತಾಜನಕವಾಗಿರುತ್ತಿತ್ತು. ಕುಡಿಯುವ ನೀರು, ಕೃಷಿ, ಅಂತರ್ಜಲವೃದ್ಧಿಗೆ ಹೇಮಾವತಿ ನೀರು ವರದಾನವಾಗಿ ರೈತರ ಬದುಕು ಹಸನಾಗಿದೆ ಎಂದರು.

ಸಾಂಪ್ರದಾಯಕ ಬೆಳೆಗಳು ಇಂದು ರೈತರ ಕೈ ಹಿಡಿಯುತ್ತಿಲ್ಲ. ಅಡಿಕೆ, ಕೊಬ್ಬರಿಯಂತಹ ವಾಣಿಜ್ಯ ಬೆಳೆಗಳಿಂದ ರೈತರು ಒಂದಿಷ್ಟು ದುಡ್ಡು ಕಾಣುತ್ತಿದ್ದಾರೆ. ದೇಶ ಸ್ವಾವಲಂಬಿಯಾಗಲು ಕೃಷಿ ಕ್ಷೇತ್ರ ಸುಭಿಕ್ಷವಾಗಿರಬೇಕು. ಹಾಗಾಗಿ ಕೃಷಿಗೆ ಹಾಗೂ ಕೃಷಿಕರಿಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ರೈತರಿಗೆ ಶಕ್ತಿ ತುಂಬುವ, ಅವರ ಸಮಸ್ಯೆಗಳಿಗೆ ಸ್ಪಂದಿಸಿ ನೆರವಾಗುವಂತಹ ಕಾರ್ಯಕ್ರಮಗಳನ್ನು ಸರ್ಕಾರಗಳು ಮಾಡಬೇಕು ಎಂದು ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.

ರೈತ ಹೋರಾಟಗಾರ ಗಂಗಾಧರ ಕಾಸರಘಟ್ಟ ಮಾತನಾಡಿ, ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಪಡೆಯಬೇಕು ಎಂಬ ಕಾರಣಕ್ಕೆ ಕೃಷಿ ಭೂಮಿಗೆ ವಿಷಕಾರಿ ರಾಸಾಯನಿಕ ಗೊಬ್ಬರ ಹಾಕಿ ಆಹಾರವನ್ನೂ ವಿಷ ಮಾಡುತ್ತಿದ್ದೇವೆ. ಇಂದು ನಾವು ಆಹಾರದ ಹೆಸರಿನಲ್ಲಿ ಬಹುತೇಕ ವಿಷ ತಿನ್ನುತ್ತಿದ್ದೇವೆ. ಹೀಗಾಗಿಯೇ ಜನರು ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹಿಂದೆ ನಾವು ಅನುಸರಿಸುತ್ತಿದ್ದ ಸಾವಯವ ಪದ್ದತಿಯಲ್ಲಿ ಕೃಷಿ ಮಾಡಿ ಆರೋಗ್ಯಕರ ಆಹಾರ ಬೆಳೆಯಬೇಕು. ಸಾವಯವ ಆಹಾರ ಪದಾರ್ಥಗಳನ್ನೇ ಬಳಸಬೇಕು ಎಂದು ಸಲಹೆ ಮಾಡಿದರು.

ಚಲನಚಿತ್ರ ನಟ ಹನುಮಂತೇಗೌಡರು ಕಲ್ಪತರು ಉತ್ಸವದ ಮಳಿಗೆಗಳನ್ನು ಉದ್ಘಾಟಿಸಿದರು. ಕಿರುತೆರೆ ನಟಿ ಶಿಲ್ಪ ಶೈಲೇಶ್, ನಟ ಅರ್ಜುನ್ ಯೋಗೇಶ್‌ರಾಜ್, ಐಕ್ಯ ಫೌಂಡೇಶನ್ ಅಧ್ಯಕ್ಷ ರೇಖಾ ಶಿವಕುಮಾರ್, ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷೆ ಮಂಜುಳಾ ಲೋಕೇಶ್, ಪ್ರಧಾನ ಕಾರ್ಯದರ್ಶಿ ಸುಮಿತ್ರಾ ನಾಗರಾಜ್, ಉದ್ಯಮಿ ರೂಪಾ ವಿಶ್ವಾಸ್ ಮೊದಲಾದವರು ಭಾಗವಹಿಸಿದ್ದರು. ಜಿಲ್ಲೆಯ ವಿವಿಧ ಗ್ರಾಮಗಳ 58 ಮಂದಿ ಪ್ರಗತಿಪರ ರೈತರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.