ಕನ್ನಡ ಭಾಷೆ ನಿಜವಾದ ಅನ್ನದ ಭಾಷೆಯಾಗಬೇಕಾದರೆ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕು. ರೈಲ್ವೆ ಸೇರಿದಂತೆ ಎಲ್ಲ ಕೇಂದ್ರ ಸರ್ಕಾರಿ ನೇಮಕಾತಿಗಳಲ್ಲಿ ಕನ್ನಡದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು.
ನೈಋತ್ಯ ರೈಲ್ವೆ ಕನ್ನಡ ಸಂಘದಿಂದ ರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಕನ್ನಡ ಭಾಷೆ ನಿಜವಾದ ಅನ್ನದ ಭಾಷೆಯಾಗಬೇಕಾದರೆ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕು. ರೈಲ್ವೆ ಸೇರಿದಂತೆ ಎಲ್ಲ ಕೇಂದ್ರ ಸರ್ಕಾರಿ ನೇಮಕಾತಿಗಳಲ್ಲಿ ಕನ್ನಡದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಹೇಳಿದರು.
ಇವರು ಇಲ್ಲಿನ ನೈಋತ್ಯ ರೈಲ್ವೆ ಕನ್ನಡ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು. ಮಕ್ಕಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿರುಚಿ ಬೆಳೆಸುವ ಕಾರ್ಯ ಸಂಘ-ಸಂಸ್ಥೆಗಳಿಂದ ನಿರಂತರವಾಗಿ ನಡೆಯಬೇಕು. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಪಾಲಿಕೆ ಮೇಯರ್ ದುರ್ಗಮ್ಮ ಬಿಜವಾಡ ಮಾತನಾಡಿ, ಕನ್ನಡ ಕಟ್ಟುವ ಸಂಘ-ಸಂಸ್ಥೆಗಳ ಕಾರ್ಯ ಶ್ಲಾಘನೀಯ. ಪ್ರತಿಯೊಬ್ಬರೂ ತಮ್ಮ ನಿತ್ಯದ ಬದುಕಿನಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದರು.
ನೈಋತ್ಯ ರೈಲ್ವೆ ಮಹಾಪ್ರಬಂಧಕ ಪಿ. ಅನಂತ್ ಮಾತನಾಡಿ, ನಾಡು-ನುಡಿಯ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು. ಕನ್ನಡ ರಾಜ್ಯೋತ್ಸವದ ಆಚರಣೆ ಭಾಷೆಯ ಮೇಲಿನ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಶುಭ ಹಾರೈಸಿದರು.ನೈಋತ್ಯ ರೈಲ್ವೆ ಮಜ್ದೂರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕೆ.ವಿ., ಮುಖ್ಯ ಸುರಕ್ಷಾ ಆಯುಕ್ತ ಸಂತೋಷ ಚಂದ್ರನ್, ನೈಋತ್ಯ ರೈಲ್ವೆ ಎಂಪ್ಲಾಯೀಸ್ ಸಂಘದ ವಿಭಾಗೀಯ ಅಧ್ಯಕ್ಷ ಶ್ರೀಕಾಂತ ಗೋಕಾಕ ಹಾಗೂ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶಿವಕುಮಾರ ಬಿ.ಎಲ್. ಮಾತನಾಡಿದರು.
ಯುವ ಕವಿ ಹಾಗೂ ಸಾಂಸ್ಕೃತಿಕ ನಿರ್ದೇಶಕ ಚನ್ನಬಸಪ್ಪ ಚೌಗಲಾ ಅವರ ಚೊಚ್ಚಲ ಕವನ ಸಂಕಲನ "ಕಾವ್ಯ ಕದಳಿ "ಯನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು. ಹಿರಿಯ ರಂಗಕಲಾವಿದ ಜಿ.ವಿ. ಹಿರೇಮಠ ಸೇರಿದಂತೆ ಸಂಘಕ್ಕೆ ದಶಕಗಳ ಕಾಲ ಸೇವೆ ಸಲ್ಲಿಸಿದ ಚರಣ, ಕಿರಣ ರಾಠೋಡ, ಶಿವಪುತ್ರ ನಂದಿ, ಈಶ್ವರ ಗುಗ್ಗರಿ ಹಾಗೂ ಸೈಮನ ಬೆಳ್ಳಿಕೇರಿ ಅವರನ್ನು ಗೌರವಿಸಲಾಯಿತು. ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ರೈಲ್ವೆ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.ಸಾಂಸ್ಕೃತಿಕ ಕಾರ್ಯದರ್ಶಿ ಚನ್ನಬಸಪ್ಪ ಚೌಗಲಾ ನೇತೃತ್ವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಸಂಘದ ಖಜಾಂಚಿ ಆದಯ್ಯ ಹಿರೇಮಠ, ಉಪಾಧ್ಯಕ್ಷರಾದ ಪ್ರಾಣೇಶ, ಚಂದ್ರಶೇಖರ, ಶಿವರಾಮ ರಾಠೋಡ, ಮಹೇಶ ಎ.ಎಸ್., ತುಕಾರಾಮ ಹಿರೇಕುರಬರ, ಕಿರಣ, ಚರಣ, ಮೈಲಾರಲಿಂಗ ಕಬ್ಬೂರ, ಮಹಾಂತೇಶ ಗದ್ದಿ, ರಾಜಶೇಖರ ಹುಲಿರಾಜ, ಶಿವಪುತ್ರ ನಂದಿ, ಗುಳಪ್ಪ ನಂದಿ, ಹೃಷಭೇಂದ್ರ ಮಾಗುಂಡಪ್ಪ ಸೇರಿದಂತೆ ಹಲವರಿದ್ದರು. ರಂಗಪ್ಪ ಶೆಡ್ಲಗೇರಿ ಸ್ವಾಗತಿಸಿದರು. ಶ್ರೀನಿವಾಸ ಎಕ್ಕೆಲಿ ನಿರೂಪಿಸಿದರು. ಅಶೋಕ ಕೊಡಬಾಳ ವಂದಿಸಿದರು.