ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಸಿಇಒ

ಕನ್ನಡಪ್ರಭ ವಾರ್ತೆ ಕಾರವಾರ

ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಪಾತ್ರ ಮಹತ್ತರವಾಗಿದ್ದು, ಜಿಲ್ಲೆಯ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ತಲುಪಬೇಕು ಮತ್ತು ಶಾಲೆಗಳು ಕಲಿಕಾ ಸ್ನೇಹಿ ವಾತಾವರಣವನ್ನು ನಿರ್ಮಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಹೇಳಿದರು.

ಸೋಮವಾರ ಅಮದಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಎನ್ನುವುದು ಕೇವಲ ಅಕ್ಷರ ಕಲಿಯುವುದಲ್ಲ, ಅದು ಬದುಕನ್ನು ರೂಪಿಸುವ ಶಕ್ತಿ. ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಂದು ಹಳ್ಳಿಯ ಕೊನೆಯ ಮಗುವಿಗೂ ಉನ್ನತ ಮಟ್ಟದ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವುದು ಜಿಲ್ಲಾಡಳಿತದ ಪರಮೋಚ್ಛ ಗುರಿಯಾಗಿದೆ ಎಂದರು.


ಶಿಕ್ಷಕರು ಪ್ರೀತಿ ಮತ್ತು ಕೌಶಲ್ಯದ ಮೂಲಕ ಮಕ್ಕಳಲ್ಲಿ ಕಲ್ಪನಾ ಶಕ್ತಿಯನ್ನು ಜಾಗೃತಿಗೊಳಿಸಬೇಕು. ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಿಗೆ ತರಬೇತಿ ನೀಡುವ ಬಗ್ಗೆ ಮುಂದಿನ ಹಂತದಲ್ಲಿ ಯೋಜನೆ ರೂಪಿಸಬೇಕು. ಸರ್ಕಾರ ನೀಡುತ್ತಿರುವ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್ ಹಾಗೂ ಪೌಷ್ಟಿಕ ಬಿಸಿಯೂಟದಂತಹ ಯೋಜನೆಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಲತಾ ನಾಯಕ ಜಿಲ್ಲೆಯ ಶೈಕ್ಷಣಿಕ ಸಿದ್ಧತೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಶ ರಾಣೆ, ಎಸ್.ಡಿ.ಎಮ್.ಸಿ ಅಧ್ಯಕ್ಷ ಉಮಾಕಾಂತ ಗೌಡ, ಶಿಕ್ಷಣಾಧಿಕಾರಿಗಳಾದ ಡಾ. ಶುಭಾ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ನಾಯ್ಕ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ವಿ.ಟಿ. ನಾಯಕ, ಭಾಸ್ಕರ ಗಾಂವಕರ, ಕಲ್ಪನಾ ನಾಯಕ, ಶಾಂತಕುಮಾರ ಪಮ್ಮಾರ, ಗೀತಾ ಪೆಡ್ನೇಕರ, ಸುರೇಶ ಗಾಂವಕರ, ವಿಠೋಬ ನಾಯಕ ಹಾಜರಿದ್ದರು.

ಸ್ಥಳೀಯ ಗ್ರಾಪಂ ಜನಪ್ರತಿನಿಧಿಗಳು ಮತ್ತಿತರರು ಇದ್ದರು.

ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಎಸ್.ಎಸ್.ಎಲ್.ಸಿಯಲ್ಲಿ ಶಾಲೆಗೆ ಮೊದಲ ಮೂರು ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜ್ಞಾನದ ದೇಗುಲಕ್ಕೆ ಮರಳಿ ಹೆಜ್ಜೆ ಇಡುತ್ತಿರುವ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಇಡೀ ಶಾಲಾ ಆವರಣವನ್ನು ಹಸಿರು ತಳಿರು-ತೋರಣಗಳು, ವರ್ಣರಂಜಿತ ಬಲೂನ್‌ಗಳು ಹಾಗೂ ಆಕರ್ಷಕ ರಂಗೋಲಿ ಕಲಾಕೃತಿಗಳಿಂದ ಶೃಂಗರಿಸಲಾಗಿತ್ತು. ಶಾಲೆಗೆ ಹೊಸದಾಗಿ ಆಗಮಿಸುತ್ತಿರುವ ಪುಟ್ಟ ಮಕ್ಕಳನ್ನು ಮತ್ತು ಇತರ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ಮಂಗಳ ವಾದ್ಯಗಳೊಂದಿಗೆ, ಪುಷ್ಟ ನೀಡಿ ಹಾಗೂ ಪುಷ್ಪ ವೃಷ್ಠಿ ಮಾಡುವ ಮೂಲಕ ಅತ್ಯಂತ ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು. ಮಕ್ಕಳ ಮೊಗದಲ್ಲಿ ಉತ್ಸಾಹ ಎದ್ದು ಕಾಣುತ್ತಿತ್ತು.