ಪ್ರತಿಯೊಬ್ಬರು ತಮ್ಮ ವೃತ್ತಿಯನ್ನು ಇಷ್ಟ ಪಟ್ಟು ಮಾಡಬೇಕು. ಕೆಲಸದಲ್ಲಿ ಬದ್ದತೆ ಇರಬೇಕು ಎಂದು ಲೇಖಕ ಡಾ.ಪುತ್ತೂರಾಯ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಪ್ರತಿಯೊಬ್ಬರು ತಮ್ಮ ವೃತ್ತಿಯನ್ನು ಇಷ್ಟ ಪಟ್ಟು ಮಾಡಬೇಕು. ಕೆಲಸದಲ್ಲಿ ಬದ್ದತೆ ಇರಬೇಕು ಎಂದು ಲೇಖಕ ಡಾ.ಪುತ್ತೂರಾಯ ಸಲಹೆ ನೀಡಿದರು.

ತಾಲೂಕಿನ ಎಲ್‌ಎಫ್‌ ಚರ್ಚ್‌ ಹಾಲ್‌ನಲ್ಲಿ ಶನಿವಾರ ಲಯನ್ಸ್ ಕ್ಲಬ್ 317 ಡಿ ರೀಜನ್ 15ರ ಕರುಣೆ- ಹೆಸರಿನ ಪ್ರಾಂತೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಹಣವನ್ನು ಸಂಪಾದನೆ ಮಾಡುವುದು ಮಾತ್ರ ಮುಖ್ಯವಲ್ಲ. ಸಂಪಾದನೆ ಮಾಡಿದ ಹಣವನ್ನು ಉಳಿತಾಯ ಮಾಡುವುದನ್ನು ಕಲಿಯಬೇಕು. ನಂತರ ಪ್ರಾಮಾಣಿಕತೆಯಿಂದ ವಿತರಣೆ ಮಾಡಬೇಕು. ಯಾವುದೇ ವೃತ್ತಿ ಮಾಡಿ ಹಣ ಸಂಪಾದನೆ ಮಾಡಿದರೆ ಮಾತ್ರ ಸುಖ, ನೆಮ್ಮದಿ ತರುವುದಿಲ್ಲ. ಸಮಾಜ ಸೇವೆಯೂ ಮಾಡಬೇಕು. ನಾವೆಲ್ಲರೂ ಮಾನವ ಜಾತಿಗೆ ಸೇರಿದ್ದೇವೆ. ನಮ್ಮ ದೇಶವು ಬಹು ಧರ್ಮದ ದೇಶವಾಗಿದೆ.ಲಯನ್ಸ್ ಕ್ಲಬ್ ನಲ್ಲಿ ಯಾವುದೇ ಜಾತಿ, ಧರ್ಮ ಇರುವುದಿಲ್ಲ. ಮಾನವ ಧರ್ಮವೇ ಮುಖ್ಯವಾಗಿದೆ ಎಂದು ಹೇಳಿದರು.

ನಮ್ಮ ಮೇಲೆ ಸಮಾಜ ಋಣ ಇದೆ.ಮನಸ್ಸು, ಅವಕಾಶ, ಹಣ ಇದ್ದರೆ ಸಮಾಜ ಸೇವೆ ಮಾಡಬಹುದು. ಕಷ್ಟದಲ್ಲಿರುವುವರಿಗೆ ಸಹಾಯ ಮಾಡಬಹುದು. ಲಯನ್ಸ್ ಕ್ಲಬ್ ಪ್ರತಿಫಲಾಫೇಕ್ಷೆ ಇಲ್ಲದೆ ಕಷ್ಟದಲ್ಲಿರುವುವರಿಗೆ ಸಹಾಯ ಮಾಡುತ್ತದೆ. ಸಮಾಜ ಸೇವೆ ಮಾಡುವುದರಿಂದ ಆತ್ಮಾನಂದ ಸಿಗಲಿದೆ ಎಂದರು.

ತಮಗೆ ನೀಡಿದ ಸನ್ಮಾನ ಸ್ವೀಕರಿಸಿದ ವಕೀಲ, ಸಮಾಜ ಸೇವಕ ಗದ್ದೇಮನೆ ವಿಶ್ವನಾಥ್ ಮಾತನಾಡಿ, ಸಮಾಜ ಸೇವೆಯಿಂದ ನಮಗೆ ಆತ್ಮ ತೃಪ್ತಿ ಸಿಗಲಿದೆ. ಲಯನ್ಸ್ ಕ್ಲಬ್ ಪ್ರಥಮ ಬಾರಿಗೆ 2017ರಲ್ಲಿ ಅಮೆರಿಕದಲ್ಲಿ ಪ್ರಾರಂಭವಾಯಿತು. ಪ್ರಸ್ತುತ 200 ದೇಶಗಳಲ್ಲಿ ಕೋಟ್ಯಂತರ ಸದಸ್ಯರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಲಯನ್ಸ್ ಕ್ಲಬ್ ಯಾವುದೇ ಧಾರ್ಮಿಕ ಸಂಸ್ಥೆಯಲ್ಲ. ಕಷ್ಟದಲ್ಲಿರುವರಿಗೆ ಸಹಾಯ ಮಾಡುವ ಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು.

ಲಯನ್ಸ್ ಕ್ಲಬ್‌ನ ಪ್ರಾಂತೀಯ ಅಧ್ಯಕ್ಷ ಪಿ.ಸಿಜು ಮಾತನಾಡಿ, ಇಂದು ನಡೆಯುತ್ತಿರುವ ಪ್ರಾಂತೀಯ ಸಮ್ಮೇಳನ - ಕರುಣೆ ಬಹಳ ವರ್ಷಗಳವರೆಗೆ ನೆನಪಿನಲ್ಲಿ ಇಟ್ಟುಕೊಳ್ಳುವ ಸಮ್ಮೇಳನವಾಗಿದೆ. ಈ ಸಮ್ಮೇಳನ ನಡೆಸಲು ಸ್ವಾಗತ ಸಮಿತಿ ರಚಿಸಲಾಗಿತ್ತು. ಸಮಿತಿಯ ಎಲ್ಲಾ ಸದಸ್ಯರು ಒಟ್ಟಾಗಿ ಕೆಲಸ ಮಾಡಿದ್ದಾರೆ ಎಂದರು.

ಪ್ರಾಂತೀಯ ಪ್ರಥಮ ಮಹಿಳೆ ಸುಮ ಸಿಜು ಸಮ್ಮೇಳನ ಉದ್ಘಾಟಿಸಿದರು. ಕೊಪ್ಪ ಆದರ್ಶ ಆಸ್ಪತ್ರೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ನಡೆಸುತ್ತಿರುವ ಡಯಾಲಿಸಿಸ್ ಕೇಂದ್ರದ ನಿರ್ವಹಣೆಗಾಗಿ ಲಯನ್ಸ್ ಕ್ಲಬ್ 317 ಡಿ ರೀಜನ್ ವತಿಯಿಂದ 10 ಸಾವಿರ ರುಪಾಯಿಯನ್ನು ಆದರ್ಶ ಆಸ್ಪತ್ರೆಯ ವೈದ್ಯರಾದ ಡಾ.ನಟರಾಜ್ ಅವರಿಗೆ ಹಸ್ತಾಂತರಿಸಲಾಯಿತು. ಅತ್ಯುತ್ತಮವಾಗಿ ಬ್ಯಾನರ್ ಪ್ರೆಜಂಟೇಶನ್ ಮಾಡಿದ ಕೊಪ್ಪ ಸಹ್ಯಾದ್ರಿ ಲಯನ್ಸ್ ಕ್ಲಬ್ ಪ್ರಥಮ ಬಹುಮಾನ ಹಾಗೂ ಹರಿಹರಪುರ ಲಯನ್ಸ್ ಕ್ಲಬ್‌ಗೆ ದ್ವಿತೀಯ ಬಹುಮಾನ ನೀಡಿ ಗೌರವಿಸಲಾಯಿತು.

317 ಡಿ. ಉಪ ರಾಜ್ಯಪಾಲ ತಾರಾನಾಥ್, ಮಾಜಿ ರಾಜ್ಯಪಾಲ ಎಚ್.ಡಿ. ವೆಂಕಟೇಶ್, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಪಿ.ಸನ್ನಿ,ಕಾರ್ಯದರ್ಶಿ ಶಂಕ್ರಪ್ಪ, ಖಜಾಂಚಿ ಡಿ.ರಮೇಶ್,ಎನ್.ಆರ್.ಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆ್ಯಂಟೋನಿ, ಕಾರ್ಯದರ್ಶಿ ಕೆ.ಟಿ.ಎಲ್ದೋ, ಖಜಾಂಚಿ ಡಿ.ಸಜಿ, ಜಿಲ್ಲಾ ರಾಜ್ಯಪಾಲ ಉಡುಪಿಯ ಅರವಿಂದ ಶೆಣೈ,ವಲಯ ರಾಯಭಾರಿಗಳಾದ ಕೆ.ಸುಬ್ರಮಣ್ಯ, ಡಿ.ಸಿ.ರಂಗಪ್ಪ, ವಲಯ ಅಧ್ಯಕ್ಷರಾದ ಜೇಮ್ಸ್, ಶಿವರಾಂ, 13 ಪ್ರಾಂತೀಯ ಅಧ್ಯಕ್ಷರು ಹಾಜರಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷ ಎಂ.ಪಿ.ಸನ್ನಿ ಸ್ವಾಗತಿಸಿದರು.ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಶಂಕ್ರಪ್ಪ ವಂದಿಸಿದರು.

ನಂತರ ಕಲಾವಿದರಾದ ಹಿರೇನಲ್ಲೂರು ಶ್ರೀನಿವಾಸ್, ಮೆಣಸೂರು ವಿದ್ಯಾನಾಯಕ್ ಅವರಿಂದ ಸಂಗೀತ ಸಂಜೆ ನಡೆಯಿತು.