ಕನ್ನಡ ನಮ್ಮ ನಿತ್ಯ ಬದುಕಿನ ಉಸಿರಾಗಬೇಕು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಕಂಕಣಬದ್ಧರಾಗಬೇಕು.

ಕನ್ನಡಪ್ರಭ ವಾರ್ತೆ ರೋಣ

ಕನ್ನಡ ನಮ್ಮ ನಿತ್ಯ ಬದುಕಿನ ಉಸಿರಾಗಬೇಕು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಕಂಕಣಬದ್ಧರಾಗಬೇಕು ಎಂದು ರೋಣ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಜಿ. ಪಾಟೀಲ ಕರೆ ನೀಡಿದರು.

ಭಾನುವಾರ ಪಟ್ಟಣದ ರಾಜೀವಗಾಂಧಿ ಬಿಇಡಿ ಕಾಲೇಜು ಸಭಾಂಗಣದಲ್ಲಿ ಎಸ್.ಎಸ್. ಆಡಿನ ಜನಸೇವಾ ಸಂಸ್ಥೆ, ಹೊಳೆಆಲೂರ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕನ್ನಡ ನಾಡು-ನುಡಿ ಸಮ್ಮೇಳನ-2026, ಕವಿಗೋಷ್ಠಿ, ಕನ್ನಡ ರತ್ನ ಪ್ರಶಸ್ತಿ, ಅನುಬಂಧ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ನಾಡು-ನುಡಿ ವಿಷಯದಲ್ಲಿ ಕನ್ನಡಿಗರೂ ಒಗ್ಗಟ್ಟಾಗಿರಬೇಕು. ತಾಯ್ನೆಲದ ಬಗ್ಗೆ ಗೌರವ, ಹೆಮ್ಮೆ ಹೊಂದಿರಬೇಕು. ಕನ್ನಡ ಭಾಷೆಗೆ 2500 ವರ್ಷದ ಇತಿಹಾಸವಿದೆ. ಕನ್ನಡ ಭಾಷೆ ಉಳಿಯುವಲ್ಲಿ ಕನ್ನಡಿಗರು ಗಮನ ಹರಿಸಬೇಕು. ಕನ್ನಡ ಕೇವಲ ಆಡಳಿತ ಭಾಷೆಯಾಗದೆ, ನಮ್ಮ ನಿತ್ಯದ ಬದುಕಿನ ಉಸಿರಾಗಬೇಕು. ಕನ್ನಡ ನಾಡು ನುಡಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ, ಗ್ರಾಮೀಣ ಭಾಗದ ಪ್ರತಿಭೆ, ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಎಸ್.ಎಸ್. ಆಡಿನ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಸಾನ್ನಿಧ್ಯ ವಹಿಸಿದ್ದ ಭೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ನಾಡು-ನುಡಿಯ ರಕ್ಷಣೆಯಲ್ಲಿ ಮಠ-ಮಾನ್ಯಗಳ ಜೊತೆಗೆ ಸಂಘ-ಸಂಸ್ಥೆಗಳ ಪಾತ್ರವೂ ಮಹತ್ವದ್ದಾಗಿದೆ. ಯುವ ಪೀಳಿಗೆಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿರುಚಿ ಬೆಳೆಸುವ ಇಂತಹ ಸಮ್ಮೇಳನಗಳು ನಿರಂತರವಾಗಿ ನಡೆಯಬೇಕು ಎಂದರು.

ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಡಾ. ಪಂಚಯ್ಯ ಹಿರೇಮಠ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆ ಅತ್ಯಂತ ಶ್ರೀಮಂತವಾಗಿದೆ. ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ನಮ್ಮ ಮಾತೃಭಾಷೆಯ ಸೊಗಡು ಮರೆಯಾಗದಂತೆ ಎಚ್ಚರ ವಹಿಸಬೇಕು ಎಂದರು.

ಎಸ್.ಎಸ್. ಆಡಿನ ಜನಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಶೋಭಾ ಎಸ್. ಆಡಿನ ಅಧ್ಯಕ್ಷತೆ ವಹಿಸಿದ್ದರು.

​ಸಮಾರಂಭದಲ್ಲಿ ಶಶಿಕಲಾ ಪಾಟೀಲ, ಆರ್.ಎಸ್. ಬುರಡಿ, ಕಸಾಪ ಅಧ್ಯಕ್ಷ ರಮಾಕಾಂತ ಕಮತಗಿ, ಪ್ರಹ್ಲಾದ ಮುಂಡಾಸದ, ಬಸವರಾಜ ಕಡೇಮನಿ, ಡಾ. ವೈ.ಎನ್. ಪಾಪಣ್ಣವರ, ನಿರ್ಮಲಾ ತರೆವಾಡಿ, ಸಂಗಮೇಶ ಗೌರಿಮಠ, ಸುನಿತಾ ಬುರಡಿ, ಅವಿನಾಶ ಸಾಲಮನಿ, ಬಸವರಾಜ ಇಡ್ಲೂರ, ಡಾ. ನಾಗ ಎಚ್. ಹುಬ್ಬಿ, ನಿಂಗಪ್ಪ ಬದಾಮಿ, ಬಾಲಪ್ಪ ಮಾದರ, ಎಚ್.ಆರ್. ದೊಡ್ಡಮನಿ, ವೀರಯ್ಯ ವಸ್ತ್ರದ, ಮಂಜುನಾಥ ಶೀಲವಂತರ, ಎಂ.ವೈ. ಜಕ್ಕರಸಾನಿ, ಶರಣಪ್ಪ ವಾಲ್ಮೀಕಿ ಸೇರಿದಂತೆ ಹಲವು ಗಣ್ಯರು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

​ಎಸ್.ಕೆ. ಆಡಿನ ಸ್ವಾಗತಿಸಿದರು, ಈಶ್ವರ ಕುರಿ ನಿರೂಪಿಸಿದರು.