ಸಾರಾಂಶ
ಬೇಲೂರು: ಭಾರತ ಮಾತೆಗೆ ಪೂಜಿಸುವಂತೆ ಕನ್ನಡಿಗರಾದ ನಾವುಗಳು ಕನ್ನಡ ತಾಯಿಯನ್ನು ಪ್ರತಿನಿತ್ಯ ಆರಾಧಿಸಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಸುವರ್ಣ ಸಂಭ್ರಮದ ಅಂಗವಾಗಿ ಕನ್ನಡ ಜ್ಯೋತಿ ರಥವು ನಾರ್ವೆ ಪೇಟೆಯ ಬ್ಯಾದನೆ ಮೂಲಕ ತಾಲೂಕಿಗೆ ಬರಮಾಡಿಕೊಂಡು ಮಾತನಾಡಿದರು.ಕನ್ನಡ ನಾಡು ನುಡಿ ನಮ್ಮ ಸಂಸ್ಕೃತಿಗಾಗಿ ಎಷ್ಟೋ ಮಹನೀಯರು ಹೋರಾಟ ಮಾಡಿದ್ದಾರೆ. ನಮಗೆ ಬದುಕನ್ನು ಕಟ್ಟಿಕೊಟ್ಟಂತ ಭಾಷೆಗಾಗಿ ಕನ್ನಡ ನಾಡು ನುಡಿಗಾಗಿ ಸದಾ ದುಡಿಯುವ ತುಡಿತ ನಮ್ಮಲ್ಲಿ ಇರಬೇಕು ಎಂದರು.
ಕನ್ನಡದ ನೆಲ ಪವಿತ್ರವಾದ ನೆಲವಾಗಿದ್ದು, ಈ ನೆಲದಲ್ಲಿ ಹುಟ್ಟಿ ಇಡಿ ವಿಶ್ವಕ್ಕೆ ಕನ್ನಡದ ಹಿರಿಮೆ ಎತ್ತಿ ಹಿಡಿದ ರಾಷ್ಟ್ರಕವಿ ಕುವೆಂಪು, ಶಿವರುದ್ರಪ್ಪ ಹಾಗೂ ಕನ್ನಡದ ಆರಾಧ್ಯ ದೈವ ಡಾ.ರಾಜ್‌ಕುಮಾರ್ ಅವರ ಕೊಡುಗೆ ನಾವೆಂದಿಗೂ ಮರೆಯುವಂತಿಲ್ಲ. ಅದರಂತೆ ಜಿಲ್ಲೆಯ ಸಾಹಿತ್ಯ ರತ್ನಗಳಾದ ಅ,ನಾ,ಕೃ ಗೊರೂರು ರಾನಸ್ವಾಮಿ ಅಯ್ಯಂಗಾರ್, ಎಸ್.ಎಲ್.ಭೈರಪ್ಪ, ನಮ್ಮ ಬೇಲೂರಿನವರೇ ಆದ ವಿಜಯ ದಬ್ಬೆ, ಬೇಲೂರು ಕೃಷ್ಣಮೂರ್ತಿ, ಮತಿಘಟ್ಟ ಕೃಷ್ಣಮೂರ್ತಿ ಇವರುಗಳ ಕನ್ನಡ ಸೇವೆ ಅಪಾರವಾಗಿದ್ದು, ಅವರು ಹಾಕಿಕೊಟ್ಟ ಸಾಹಿತ್ಯ ಸೇವೆಯನ್ನು ನಾವುಗಳು ಮರೆಯಬಾರದು ಎಂದ ಹೇಳಿದರು.ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ತಹಸೀಲ್ದಾರ್ ಎಂ.ಮಮತಾ, ಕೇವಲ ಒಂದು ದಿನ ಕನ್ನಡದ ಹಬ್ಬವನ್ನು ಆಚರಿಸಿದರೆ ಸಾಲದು. ಈ ಸುವರ್ಣ ಸಂಭ್ರಮದ ಹಬ್ಬವನ್ನು ಪ್ರತಿನಿತ್ಯ ಮನೆಮನಗಳಲ್ಲಿ ಬೆಳಗುವಂತಹ ಕೆಲಸ ಆಗಬೇಕು. ನಿತ್ಯವೂ ಕನ್ನಡಕ್ಕೆ ಗೌರವ ನೀಡುತ್ತಾ ನಿತ್ಯ ಕನ್ನಡಿಗರಾಗಿರಬೇಕು ಎಂದರು.
ಈ ಭಾಷೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರ ಸುವರ್ಣ ಕರ್ನಾಟಕ ರಥವನ್ನು ಇಡೀ ರಾಜ್ಯದ್ಯಂತ ಪ್ರತಿ ಹಳ್ಳಿ ಗ್ರಾಮಗಳಲ್ಲಿ ಸ್ವಾಗತಿಸುವ ಕೆಲಸಕ್ಕೆ ಮುಂದಾಗಿದ್ದು, ಇಂದು ಸುಮಾರ ಕೀಮೀ ಉದ್ದ ಈ ರಥ ಯಾತ್ರೆಯು ಸಾಗಲಿದೆ. ಶುಕ್ರವಾರ ರಥವನ್ನು ಚಿಕ್ಕಮಗಳೂರಿಗೆ ಬೀಳ್ಕೊಡಲಾಗುವುದು ಎಂದು ತಿಳಿಸಿದರು.ಕರವೇ ಅಧ್ಯಕ್ಷ ಭೋಜೇಗೌಡ ಮಾತನಾಡಿ, ಕನ್ನಡ ಭಾಷೆ ನೆಲಕ್ಕಾಗಿ ಕೇವಲ ಸಂಭ್ರಮ ಪಡುವ ದಿನದಲ್ಲಿ ಮಾತ್ರ ಆಚರಿಸುವುದು ಬೇಡ. ಕನ್ನಡ ಭಾಷೆ ಇಲ್ಲಿವರೆಗೂ ಆಡಳಿತ ಭಾಷೆಯಾಗದಿರುವುದು ನಿಜಕ್ಕೂ ಬೇಸರ. ಅದು ಆಡು ಭಾಷೆಯಾದಾಗ ಮಾತ್ರ ಈ ಸುವರ್ಣ ಸಂಭ್ರಮಕ್ಕೆ ಅರ್ಥ ಬರುತ್ತದೆ. ಸರ್ಕಾರಿ ಕಚೇರಿಗಳು, ಬ್ಯಾಂಕ್, ಅಂಚೆ ಸೇರಿದಂತೆ ಎಲ್ಲಾ ಕಚೇರಿಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಕಸಾಪ ಅಧ್ಯಕ್ಷ ಮಂಜೇಗೌಡ ಮಾತನಾಡಿ, ಎರಡು ಸಾವಿರ ವರ್ಷ ಇತಿಹಾಸವುಳ್ಳ ಕನ್ನಡ ಭಾಷೆಯು ಸಮೃದ್ಧವಾದ ಭಾಷೆಯಾಗಿದೆ. ಕನ್ನಡ ಎಂದರೆ ಒಂದು ಭಾಷೆಯಲ್ಲ. ಅದು ಜನಮನದ ಜೀವನಾಡಿಯಾಗಿದ್ದು, ಇಂತಹ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆದಾಗ ಕನ್ನಡದ ಬಗ್ಗೆ ಅಭಿಮಾನ ಮೂಡುತ್ತದೆ ಎಂದರು.ತಾಪಂ ಕಾರ್ಯನಿರ್ವಾಹಣಾಧಿಕಾರಿ ವಸಂತ್ ಕುಮಾರ್, ಕರವೇ ಅಧ್ಯಕ್ಷ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ನಾರ್ವೆ ಗ್ರಾಪಂ ಅಧ್ಯಕ್ಷೆ ಮಾಲಾಶ್ರಿ, ಅರೇಹಳ್ಳಿ ಗ್ರಾಪಂ ಅಧ್ಯಕ್ಷ ಸಂಗಪ್ಪ, ಸೋಮಯ್ಯ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ರಾಜು, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಲಕ್ಷ್ಮಣ್, ನಿಂಗರಾಜು, ಮಲ್ಲಿಕಾರ್ಜುನ ಮತ್ತಿತರರಿದ್ದರು.
ಜಾಥಾಕ್ಕೂ ಮುನ್ನ ತಹಸೀಲ್ದಾರ್ ಎಂ.ಮಮತಾ ಮಹಿಳೆಯರ ಜೊತೆ ಕುಂಭವನ್ನು ಹೊರುವ ಮೂಲಕ ರಥ ಯಾತ್ರೆ ಜಾಥಾಕ್ಕೆ ಮೆರಗು ನೀಡಿದರು.