ಸಾರಾಂಶ
ಗುಂಡ್ಲುಪೇಟೆಯಲ್ಲಿ ಕೆಂಪೇಗೌಡರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆಲತ್ತೂರು ಜಯರಾಂ ಪುಷ್ಪಾರ್ಚನೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ನಾಡಪ್ರಭು ಕೆಂಪೇಗೌಡರ ಆಡಳಿತ ಪ್ರಸ್ತುತ ಜನಪ್ರತಿನಿಧಿಗಳಿಗೆ ಆದರ್ಶವಾಗಬೇಕಿದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರೂ ಆದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಆಲತ್ತೂರು ಜಯರಾಂ ಹೇಳಿದರು. ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿ ಅವರ ಆಡಳಿತ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದರು ಎಂದರು. ವಿಜಯನಗರ ಸಾಮ್ರಾಜ್ಯದಂತೆ ಬೆಂಗಳೂರನ್ನು ಕಟ್ಟಬೇಕು ಎಂಬ ಮಹದಾಸೆ ಹೊಂದಿದ್ದರು. ಅಲ್ಲದೆ ಬೆಂಗಳೂರು ಇದೀಗ ವಿಶ್ವ ವಿಖ್ಯಾತ ನಗರವಾಗಿ ಮಾರ್ಪಟ್ಟಿದೆ ಇದಕ್ಕೆ ಕೆಂಪೇಗೌಡರೇ ಕಾರಣವಾಗಿದೆ ಎಂದರು.ಮುಖ್ಯ ಭಾಷಣ ಮಾಡಿದ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಜಿ.ಎಸ್.ಮಹೇಶ್ ಮಾತನಾಡಿ, ಕೆಂಪೇಗೌಡರು ಬೆಂಗಳೂರು ನಗರ ಉತ್ತಮ ವ್ಯಾಪಾರ ನಡೆಸಲು ಹಲವು ಪೇಟೆಗಳನ್ನು ಕಟ್ಟಿದರು. ಕುಡಿವ ನೀರು, ಕೆರೆಗಳನ್ನು ನಿರ್ಮಿಸಿದರು ಎಂದರು. ಕೃಷಿ ಸಹಾಯಕ ನಿರ್ದೇಶಕ ಎಸ್.ಶಶಿಧರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಮಧುಸೂದನ್, ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಹಂಗಳ ಫ್ಯಾಕ್ಸ್ ಅಧ್ಯಕ್ಷ ಕಳ್ಳೀಪುರ ರವಿ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪಿ.ಸುರೇಂದ್ರ ಸೇರಿದಂತೆ ಹಲವರಿದ್ದರು.
ಗಣ್ಯರ ಗೈರು:ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಸಂಸದ ಸುನೀಲ್ ಬೋಸ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಧು ಜಿ ಮಾದೇಗೌಡ, ಕೆ.ವಿವೇಕಾನಂದ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಹಾಗೂ ತಾಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಜಯಂತಿಗೆ ಗೈರಾಗಿದ್ದರು.