ಇದಕ್ಕೂ ಮೊದಲು ಸಮ್ಮೇಳನಾಧ್ಯಕ್ಷರನ್ನು ಮುಖ್ಯಧ್ವಾರದಿಂದ ಮೆರವಣಿಗೆ ಮೂಲಕ ಹಾಗೂ ನೃತ್ಯದ ಮೂಲಕ ಸ್ವಾಗತಿಸಿ ಕರೆತರಲಾಯಿತು. ಸಮ್ಮೇಳನದ ಅಂಗವಾಗಿ ಸಮಾಜ ಸೇವಾ ಭೂಷಣ, ಸಂಘಟನಾ ಸೇವಾ ಭೂಷಣ ಹಾಗೂ ಶಿಕ್ಷಣ ಸೇವಾ ಭೂಷಣ ಪ್ರಶಸ್ತಿಗಳನ್ನು ಸಾಧಕರಿಗೆ ಪ್ರದಾನ ಮಾಡಲಾಯಿತು. ನಂತರ ವಿವಿಧ ಕವಿಗೋಷ್ಠಿಗಳು ನಡೆದವು.
ಕನ್ನಡಪ್ರಭ ವಾರ್ತೆ ಹಾಸನ
ಸಾಹಿತ್ಯವೆಂಬುದು ಕೇವಲ ಪುಸ್ತಕ ರಚನೆಗೆ ಸೀಮಿತವಾಗದೆ ಸಮಾಜದಲ್ಲಿ ಸಮಾನತೆ, ಮಾನವೀಯತೆ ಮತ್ತು ಸಾಮರಸ್ಯ ಬೆಳೆಸುವ ಸಾಧನವಾಗಬೇಕು. ಜನರ ನಡುವೆ ಪ್ರೀತಿ, ವಿಶ್ವಾಸ ಹಾಗೂ ಒಗ್ಗಟ್ಟು ಮೂಡಿಸುವ ಶಕ್ತಿ ಸಾಹಿತ್ಯಕ್ಕಿರಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ 2ನೇ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹರಿಹರಪುರ ಶ್ರೀಧರ್ ತಿಳಿಸಿದರು.ನಗರದ ಗಾಂಧಿ ಭವನದಲ್ಲಿ ಭಾನುವಾರ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕ ಆಯೋಜಿಸಿದ್ದ ಹಾಸನ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ-೨೦೨೬ರ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಅವರು ಮಾತನಾಡಿ, ವೇದಗಳು ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರುತ್ತವೆ.
ಮನುಷ್ಯನ ಶ್ರೇಷ್ಠತೆ ಆತನ ಜನ್ಮದಿಂದ ನಿರ್ಧಾರವಾಗುವುದಿಲ್ಲ. ಜ್ಞಾನ, ನಡತೆ, ಸಂಸ್ಕಾರ ಮತ್ತು ಸಾಧನಗಳಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಬದುಕು ಇದಕ್ಕೆ ಉತ್ತಮ ನಿದರ್ಶನವಾಗಿದೆ. ಸಮಾಜದಲ್ಲಿದ್ದ ಅಸ್ಪೃಶ್ಯತೆ, ಜಾತಿ ತಾರತಮ್ಯ ಹಾಗೂ ಅಮಾನವೀಯ ಪದ್ಧತಿ ತೊಡೆದುಹಾಕಿ ಸಮಾನತೆ ಸಮಾಜ ನಿರ್ಮಿಸುವುದು ಇಂದಿನ ಅಗತ್ಯ ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಭಾಷಾ ಸಂಯಮ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಪತ್ರಿಕೆ, ಸಾಮಾಜಿಕ ಜಾಲತಾಣ ಹಾಗೂ ದೂರದರ್ಶನಗಳಲ್ಲಿ ವ್ಯಕ್ತವಾಗುವ ಕೆಲವು ಹೇಳಿಕೆಗಳು ಸಮಾಜದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಹಣ, ಅಧಿಕಾರ ಮತ್ತು ಪ್ರಭಾವಕ್ಕಿಂತ ವ್ಯಕ್ತಿಯ ಸಂಸ್ಕಾರ ಮುಖ್ಯ. ರಾಜಕಾರಣಿಗಳು ಸಾರ್ವಜನಿಕವಾಗಿ ಮಾತನಾಡುವಾಗ ಜವಾಬ್ದಾರಿ ಮತ್ತು ಭಾಷೆ ಮಿತಿಯನ್ನು ಅರಿತುಕೊಳ್ಳಬೇಕು. ಸಾಹಿತಿಗಳು ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಸತ್ಯದ ಪರವಾಗಿ ನಿಂತು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಹಿಂದಿನ ದಿನಗಳಲ್ಲಿ ಜನಪ್ರತಿನಿಧಿಗಳಿಗೆ ಉತ್ತಮ ನಡವಳಿಕೆ ಮತ್ತು ಸಾರ್ವಜನಿಕ ಜೀವನದ ಮೌಲ್ಯಗಳ ಕುರಿತು ಸಂಸ್ಕಾರ ನೀಡುವ ಪ್ರಯತ್ನಗಳು ನಡೆದಿದ್ದವು. ಅಂತಹ ಪ್ರಯತ್ನಗಳು ಮುಂದುವರಿಯಬೇಕಾಗಿದೆ. ಸಾಹಿತ್ಯಾಭಿಮಾನಿಗಳು ಕೇವಲ ಪುಸ್ತಕ ಓದುವವರಾಗಿ ಉಳಿಯದೆ, ತಮ್ಮ ಬದುಕಿನ ಮೂಲಕ ಇತರರಿಗೆ ಆದರ್ಶವಾಗಬೇಕು. ಸಮಾಜದ ನೇತೃತ್ವ ವಹಿಸುವ ರಾಜಕಾರಣಿಗಳು ಹೇಗೆ ನಡೆದುಕೊಳ್ಳಬೇಕು, ಸಾರ್ವಜನಿಕವಾಗಿ ಯಾವ ರೀತಿಯ ಭಾಷೆ ಬಳಸಬೇಕು, ಜನರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಸಾಹಿತಿಗಳು ತಮ್ಮ ಬರವಣಿಗೆ ಮತ್ತು ಚಿಂತನೆಗಳ ಮೂಲಕ ಮಾರ್ಗದರ್ಶನ ನೀಡಬೇಕು. ರಾಜಕಾರಣಿಗಳೂ ಸಮಾಜಕ್ಕೆ ಮಾದರಿಯಾಗುವಂತಹ ಜೀವನ ನಡೆಸುವ ಜವಾಬ್ದಾರಿ ಹೊಂದಿದ್ದಾರೆ. ದುರದೃಷ್ಟವಶಾತ್ ಕೆಲವೊಮ್ಮೆ ಸಾಹಿತಿಗಳು ಕೂಡ ರಾಜಕಾರಣಿಗಳ ಪ್ರಭಾವ ಅಥವಾ ಕೃಪೆಗೆ ಒಳಗಾಗಿ ಅವರ ತಪ್ಪುಗಳನ್ನೂ ಸಮರ್ಥಿಸುವ ಪರಿಸ್ಥಿತಿ ಕಂಡುಬರುತ್ತದೆ. ಸಾಹಿತಿಗಳು ಯಾವುದೇ ರಾಜಕೀಯ ಆಸೆ, ಆಮಿಷ ಅಥವಾ ಪ್ರಭಾವಕ್ಕೆ ಒಳಗಾಗದೆ ಸತ್ಯದ ಪರವಾಗಿ ನಿಲ್ಲಬೇಕು. ಸಮಾಜದ ಏಳಿಗೆ, ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.ಸಮ್ಮೇಳನದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ ಮಾತನಾಡಿ, ಹಾಸನ ಜಿಲ್ಲೆ ಸಾಹಿತ್ಯ, ಕಲೆ, ಸಂಸ್ಕೃತಿ, ರೈತ ಚಳವಳಿ, ದಲಿತ ಚಳವಳಿ ಹಾಗೂ ಕನ್ನಡಪರ ಹೋರಾಟಗಳಲ್ಲಿ ವಿಶಿಷ್ಟ ಕೊಡುಗೆ ನೀಡಿದೆ. ಸಾಹಿತ್ಯ ಸಮ್ಮೇಳನಗಳು ಆಡಂಬರದ ಕಾರ್ಯಕ್ರಮಗಳಾಗದೆ ವಿಚಾರ ವಿನಿಮಯ ಮತ್ತು ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಬೇಕು. ಇಂತಹ ಕಾರ್ಯವನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕ ವೃತ್ತಿ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಸೇವೆ ಸಲ್ಲಿಸುತ್ತಿರುವ ಕೊಟ್ರೇಶ್ ಉಪ್ಪಾರ್ ಅವರು ಅನೇಕ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ಮೂಲಕ ಅವರನ್ನು ರಾಜ್ಯಮಟ್ಟದ ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಅಧಿಕಾರ ಅಥವಾ ಹುದ್ದೆ ಅಪೇಕ್ಷೆಯಿಲ್ಲದೆ ಸಾಹಿತ್ಯ ಚಟುವಟಿಕೆಗಳಿಗಾಗಿ ಶ್ರಮಿಸುತ್ತಿರುವ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು ಎಂದು ತಿಳಿಸಿದರು.ಕಸಾಪ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ಜಿಲ್ಲೆ ಅನೇಕ ಮಹನೀಯರು ಹಾಸನ ಜಿಲ್ಲೆ ಸಾಹಿತ್ಯಕ ಕೀರ್ತಿಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ದೊರೆಯುವುದಿಲ್ಲ. ಕೆಲವೊಮ್ಮೆ ಅರ್ಹ ಪ್ರತಿಭೆಗಳು ಗುರುತಿಸಿಕೊಳ್ಳದೆ ಉಳಿಯುತ್ತವೆ. ಅಂತಹ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮಾಡುತ್ತಿದೆ. ವಾಸ್ತವವಾಗಿ ನಾವು ಸಾಧಕರಿಗೆ ಗೌರವ ಸಲ್ಲಿಸುವುದಕ್ಕಿಂತ ಅವರಿಂದ ಗೌರವ ಪಡೆಯುವ ಅವಕಾಶವನ್ನು ಈ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು. ಇದಕ್ಕೂ ಮೊದಲು ಸಮ್ಮೇಳನಾಧ್ಯಕ್ಷರನ್ನು ಮುಖ್ಯಧ್ವಾರದಿಂದ ಮೆರವಣಿಗೆ ಮೂಲಕ ಹಾಗೂ ನೃತ್ಯದ ಮೂಲಕ ಸ್ವಾಗತಿಸಿ ಕರೆತರಲಾಯಿತು. ಸಮ್ಮೇಳನದ ಅಂಗವಾಗಿ ಸಮಾಜ ಸೇವಾ ಭೂಷಣ, ಸಂಘಟನಾ ಸೇವಾ ಭೂಷಣ ಹಾಗೂ ಶಿಕ್ಷಣ ಸೇವಾ ಭೂಷಣ ಪ್ರಶಸ್ತಿಗಳನ್ನು ಸಾಧಕರಿಗೆ ಪ್ರದಾನ ಮಾಡಲಾಯಿತು. ನಂತರ ವಿವಿಧ ಕವಿಗೋಷ್ಠಿಗಳು ನಡೆದವು.
ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ.ಕೆ. ಮಂಜಯ್ಯ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ.ಎಂ. ಶ್ರೀನಿವಾಸ್, ಪೂರ್ಣಪ್ರಜ್ಞ ಇನ್ಫ್ರಾಸ್ಟ್ರಕ್ಚರ್ ಮಾಲೀಕ ಲಕ್ಷ್ಮೀಕಾಂತ್, ಟೈಮ್ಸ್ ಶಿಕ್ಷಣ ಸಮೂಹ ಸಂಸ್ಥೆ ಕಾರ್ಯದರ್ಶಿ ಬಿ.ಕೆ. ಗಂಗಾಧರ್, ವೇದಿಕೆ ಹಾಸನ ತಾಲೂಕು ಅಧ್ಯಕ್ಷೆ ಕೆ.ಸಿ. ಗೀತಾ, ಮನೆ ಮನೆ ಕವಿಗೋಷ್ಠಿಯ ಮಾಜಿ ಅಧ್ಯಕ್ಷ ಹಾಗೂ ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಸುಕನ್ಯಾ ಮುಕುಂದ, ಸಾಹಿತಿಗಳಾದ ನಾಗರಾಜ್ ಹೆತ್ತೂರ್, ವೇದಿಕೆ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ವಾಸು ಸಮುದ್ರವಳ್ಳಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ವೈ.ಎಸ್. ತಮ್ಮಣ್ಣ ಶೆಟ್ಟಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಸನ ಜಿಲ್ಲಾ ಘಟಕದ ಅಧ್ಯಕ್ಷರಾದ ಉದಯ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಎಚ್.ಎಸ್. ಮಂಜುನಾಥ್ ಮೂರ್ತಿ ಇತರರು ಉಪಸ್ಥಿತರಿದ್ದರು. ಚಲನಚಿತ್ರ ನಟಿ ಪೂಜಾ ರಘುನಂದನ್ ಕಾರ್ಯಕ್ರಮ ನಿರೂಪಿಸಿರು. ತ್ರಿವೇಣಿ ಪ್ರಾರ್ಥಿಸಿದರು.