ಕಾರ್ತಿಕ ಮಾಸ ಮನುಷ್ಯನ ಬದುಕಲ್ಲಿ ಕತ್ತಲೆ ಕಳೆದು ಬೆಳಕನ್ನು ಚೆಲ್ಲುವ ಮೂಲಕ ಹೊಸ ಚೈತನ್ಯ ನೀಡುತ್ತದೆ.

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಬಂಡೇ ರಂಗನಾಥೇಶ್ವರ ಸ್ವಾಮಿಯ ಬೆಟ್ಟದಲ್ಲಿ ಕಾರ್ತಿಕೋತ್ಸವ ಶನಿವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.

ನಂದಿಪುರದ ಡಾ. ಮಹೇಶ್ವರ ಸ್ವಾಮೀಜಿ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕಾರ್ತಿಕ ಮಾಸ ಮನುಷ್ಯನ ಬದುಕಲ್ಲಿ ಕತ್ತಲೆ ಕಳೆದು ಬೆಳಕನ್ನು ಚೆಲ್ಲುವ ಮೂಲಕ ಹೊಸ ಚೈತನ್ಯ ನೀಡುತ್ತದೆ. ಅಜ್ಞಾನದ ಅಂಧಕಾರ ತೊಲಗಿ, ಪ್ರತಿಯೊಬ್ಬರ ಬದುಕಲ್ಲಿ ಹೊಸತು ಬರಲಿ. ಪ್ರಜ್ವಲಿಸುವ ಜ್ಞಾನದ ಬೆಳಕು ಎಲ್ಲರಲ್ಲಿ ಮೂಡಲಿ. ಶ್ರೀ ಬಂಡೇ ರಂಗನಾಥ ಸ್ವಾಮಿಯ ಕಾರ್ತಿಕೋತ್ಸವ ವರ್ಷಕ್ಕಿಂತ ವರ್ಷ ಅತ್ಯಂತ ಅದ್ದೂರಿಯಾಗಿ ನಡೆಯುತ್ತಿರುವುದು ತಂಬ್ರಹಳ್ಳಿ ಹಾಗೂ ಸುತ್ತಲಿನ ಗ್ರಾಮಸ್ಥರ ಮತ್ತು ದೇವಸ್ಥಾನ ಸಮಿತಿಯವರ ಶ್ರಮದಿಂದ. ಧಾರ್ಮಿಕತೆ ಮನುಷ್ಯನ ಬದುಕಲ್ಲಿ ಉತ್ಸಾಹ, ಕ್ರಿಯಾಶೀಲತೆ ತುಂಬುತ್ತದೆ. ಕತ್ತಲೆಯಲ್ಲಿ ತೊಳಲಾಡುತ್ತಿರುವವರ ಬದುಕಿಗೆ ಬಂಡೇ ರಂಗನಾಥ ಬೆಳಕನ್ನು ನೀಡಿ ಅವರ ಬದುಕನ್ನು ಉತ್ತಮಗೊಳಿಸಲಿ. ಇಲ್ಲಿ ಬಂದಂತಹ ಸಾವಿರಾರು ಭಕ್ತರಿಗೆ ಅನ್ನದಾಸೋಹ ಮಾಡಿದ ಸ್ನೇಹ ಡೆವಲಪರ್ಸ್‌ ಜಿ.ಸುರೇಶ್, ಬಾಚಿನಳ್ಳಿ ಶಾಂತಮ್ಮ ಕುಟುಂಬದವರು, ಶಿಗೇನಹಳ್ಳಿ ರವಿರೆಡ್ಡಿ ಸೇವೆ ಸಾರ್ಥಕ ಎಂದರು.

ಕಾರ್ತಿಕೋತ್ಸವ:

ಕಾರ್ತಿಕೋತ್ಸವದಿಂದಾಗಿ ರಂಗನಾಥನ ಬೆಟ್ಟಕ್ಕೆ ಹೊಸ ಕಳೆ ಬಂದಿತ್ತು. ಬಂಡೇ ರಂಗನಾಥ ದೇವಸ್ಥಾನವನ್ನು ತಳಿರು ತೋರಣಗಳಿಂದ ಕಿತ್ನೂರು ಭಕ್ತರು ಸಿಂಗರಿಸಿದ್ದರು. ಸೇವಕರಾದ ಪವನ್ ಸಾ, ಮೋಹನ್ ಸಾ, ರಘುನಾಥ್ ಸಾ, ಮೇಘರಾಜ್ ಕುಟುಂಬದವರು ಅಲಂಕಾರಿಕ ಸಿಡಿಮದ್ದುಗಳನ್ನು ಸಿಡಿಸಿ ಭಕ್ತರನ್ನು ರಂಜಿಸಿದರು.

ಕಾಲ್ವಿ ಗ್ರಾಮದ ಪ್ರಕಾಶ್ ಬಂಡೇ ರಂಗನಾಥನನ್ನು ಹೂವಿನಿಂದ ಅಲಂಕರಿಸಿದ್ದರು. ಬನ್ನಿಗೊಳ ಗ್ರಾಮಸ್ಥರು ಭಜನೆ ಪಠಿಸಿದರು. ತಂಬ್ರಹಳ್ಳಿಯ ಶ್ರೀ ವೀರಭದ್ರೇಶ್ವರ ನಂದಿ ಧ್ಜವ ಯುವಕ ತಂಡದವರು ಸಮಾಳ ನಂದಿಕೋಲು ವಾಧ್ಯಗಳೊಂದಿಗೆ ಕಾರ್ತಿಕೋತ್ಸವಕ್ಕೆ ಮೆರಗು ನೀಡಿದ್ದರು.

ತಂಬ್ರಹಳ್ಳಿ ಪೊಲೀಸ್ ಇಲಾಖೆಯವರು ಉತ್ತಮ ಬಂದೊಬಸ್ತ್ ಮಾಡುವ ಮೂಲಕ ಭಕ್ತರ ದರ್ಶನಕ್ಕೆ ಅನುಕೂಲ ಮಾಡಿದ್ದರು. ಆನೇಕಲ್ ವಿರೂಪಾಕ್ಷಿ, ತಂಬ್ರಹಳ್ಳಿ ಉತ್ತರಭಾಗದ ಯುವಕರು ಪ್ರಸಾದ ಸೇವೆ ಉತ್ತಮವಾಗಿ ನಿರ್ವಹಿಸಿದರು. ಗದ್ದಿಕೇರಿ ಚರಂತೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಸರಕೋಡು ಲಕ್ಷ್ಮಣ, ಸಮಿತಿಯ ದೇವಿಪ್ರಸಾದ, ಸುಣಗಾರ ಪರುಶುರಾಮ, ಸರಾಯಿ ಮಂಜುನಾಥ, ರೆಡ್ಡಿ ಮಂಜುನಾಥ ಪಾಟೀಲ್, ಗಂಗಾಧರಗೌಡ, ಕಡ್ಡಿ ಚನ್ನಬಸಪ್ಪ, ಸಪ್ಪರದ ಬಾಬಣ್ಣ, ಗೌರಜ್ಜನವರ ಬಸವರಾಜಪ್ಪ, ಟಿ.ಪಾಂಡುರಂಗ, ಅರ್ಚಕರಾದ ರಂಗಪ್ಪ, ಯಲ್ಲಪ್ಪಗೌಡ ಪೂಜಾರ್ ಇತರರಿದ್ದರು.ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಬಂಡೇ ರಂಗನಾಥ ಸ್ವಾಮಿ ಕಾರ್ತಿಕೋತ್ಸವದಲ್ಲಿ ಅನ್ನ ದಾಸೋಹ ಮಾಡಿದ ಬಾಚಿನಳ್ಳಿ ಶಾಂತಮ್ಮ ಕುಟುಂಬದವರನ್ನು ಮತ್ತು ಜಿ.ಸುರೇಶ್ ಅವರನ್ನು ನಂದಿಪುರದ ಡಾ. ಮಹೇಶ್ವರ ಸ್ವಾಮೀಜಿ ಸನ್ಮಾನಿಸಿದರು.