ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಕರ್ನಾಟಕದ ಲಕ್ಷಾಂತರ ರೈತರನ್ನು ಸಂಘಟಿಸಿ ಅವರಲ್ಲಿ ಹೋರಾಟದ ಪ್ರಜ್ಞೆಯನ್ನು ಮೂಡಿಸಿ ಹಾಗೂ ದುರ್ಬಲ ರೈತ ವರ್ಗದವರಿಗೆ ಮತ್ತು ಶೋಷಣೆಗೆ ಒಳಗಾದವರಿಗೆ ಧ್ವನಿಯಾಗಿ ನಿಂತವರು ಪ್ರೊ. ಎಂ ಡಿ ನಂಜುಂಡಸ್ವಾಮಿ ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ರವಿಕುಮಾರ್ ಬಾಗಿ ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎಂ ಡಿ ನಂಜುಂಡಸ್ವಾಮಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎಂ. ಡಿ. ನಂಜುಂಡಸ್ವಾಮಿ ಸಮಾಜವಾದಿ ಚಳುವಳಿಯ ಒಬ್ಬ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಅವರು ತಮ್ಮ ಜೀವನದುದ್ದಕ್ಕೂ ರೈತರು ಮತ್ತು ದುರ್ಬಲ ವರ್ಗದವರ ಪರವಾಗಿ ಹೋರಾಡಿದರು. ಅವರ ಚಿಂತನೆಗಳು ಮತ್ತು ಹೋರಾಟಗಳು ಇಂದಿಗೂ ಜೀವಂತವಾಗಿವೆ ಎಂದರು.ರೈತರಿಗೆ ವೈಜ್ಞಾನಿಕವಾಗಿ ಬೆಲೆಯನ್ನು ನೀಡಬೇಕು. ತಾವು ಬೆಳೆದ ಬೆಳೆಗೆ ತಾವೇ ಬೆಲೆಯನ್ನು ಕಟ್ಟಬೇಕು. ಘನತೆಯಿಂದ ಬದುಕುವ ಹಾಗೂ ಸ್ವಾಭಿಮಾನದ ಹಾದಿಯನ್ನು ಕಟ್ಟಿಕೊಡಬೇಕು. ಸರ್ಕಾರದ ಅಧಿಕಾರಿಗಳು ಜನ ಸೇವಕರೆ ಹೊರತು ಜನರನ್ನು ಆಳುವ ರಾಜರಲ್ಲ. ಇದರೊಂದಿಗೆ ರೈತರು ಸಾಲಗಾರರಲ್ಲ ಸರ್ಕಾರವೇ ಬಾಕಿದಾರ ಎಂಬ ಮಾತಿನ ಹೋರಾಟದಿಂದ ರೈತರಲ್ಲಿ ಹೋರಾಟದ ಕಿಚ್ಚನ್ನು ಹಚ್ಚುತ್ತಿದ್ದವರು ಎಂ ಡಿ ನಂಜುಂಡ ಸ್ವಾಮಿ ಎಂದು ಹೇಳಿದರು.ಅನ್ಯಾಯದ ವಿರುದ್ಧ ಪ್ರತಿಭಟಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಸಮಾಜಪರ ಜನಪರ ಇನ್ನಿತರ ನಾಯಕದ ಗುಣಗಳನ್ನು ಇಂದಿನ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಅಂದಿನ ಕಾಲಕ್ಕೆ ಜಾತಿಯನ್ನು ನಾಶ ಮಾಡದೆ ದೇಶದಲ್ಲಿ ಏನು ಕಟ್ಟಲು ಆಗುವುದಿಲ್ಲ, ಬಾಗು ಬೆನ್ನೆಲುಬಾಗಿದ್ದ ರೈತನ ಹೆಗಲನ್ನ ಮೇಲೆ ಎತ್ತಿದ ಕೀರ್ತಿ ಎಂ.ಡಿ ನಂಜುಂಡಸ್ವಾಮಿಯವರಿಗೆ ಸಲ್ಲುತ್ತದೆ. ಸಮಾಜವಾದಿ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ರೈತರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಿದವರು ಎಂ ಡಿ ನಂಜುಂಡಸ್ವಾಮಿ ಎಂದು ಹೇಳಿದರು.ಇತಿಹಾಸ ಮತ್ತು ಪುರಾತತ್ವ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಎಂ ಕೊಟ್ರೇಶ್ ಅಧ್ಯಕ್ಷೀಯ ನುಡಿಗಳನ್ನಾಡಿ, ನುಡಿದಂತೆ ನಡೆದವರು ಎಂ ಡಿ ನಂಜುಂಡಸ್ವಾಮಿಯವರು. ರೈತ ಸಂಘಗಳ ಅನೇಕ ಚಳುವಳಿಗೆ ಹಾದಿಯನ್ನು ಹಾಕಿ ಕೊಟ್ಟು ಸರಳ ಸಜ್ಜನ ಸಮಾಜವಾದಿ ಜೀವನವನ್ನು ನಡೆಸಿದರು. ರೈತಪರ ಧ್ವನಿ ಮಾತ್ರ ಅಲ್ಲ - ಎಂ.ಎನ್.ಸಿ.ಗಳ ವಿರುದ್ಧ ಧ್ವನಿ ಎತ್ತಿದರು. ರೈತ ಸರ್ಕಾರದ ಕನಸನ್ನು ಕಂಡಿದ್ದವರು ಎಂ.ಡಿ ನಂಜುಂಡಸ್ವಾಮಿಯವರು. ಜಪ್ತಿಯ ವಿರುದ್ಧ ಮರುಜಪ್ತಿಯ ನೀತಿಯನ್ನು ಆಳುವ ಪ್ರಭುತ್ವದ ವಿರುದ್ಧ ತಂದವರು ಎಂಡಿ ನಂಜುಂಡಸ್ವಾಮಿ ಎಂದರು.ಪ್ರೊ. ಎಂ ಡಿ ನಂಜುಂಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಡಾ. ಮುನಿರಾಜು ಎಂ., ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ರವೀಂದ್ರ ಕುಮಾರ್ ಬಿ. ಉಪಸ್ಥಿತರಿದ್ದರು.