ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ನಮ್ಮ ಭಾಷೆ, ನೆಲ, ಜಲ, ಸಾಹಿತ್ಯ, ಸಂಸ್ಕೃತಿ ಮತ್ತು ನಮ್ಮ ಸಭ್ಯತೆಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನದ್ದು ಎಂದು ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಅಪ್ಪಾಸಾಹೇಬ ಅಲಿಬಾದಿ ಹೇಳಿದರು.ನಗರದಲ್ಲಿ ಬೆಳಗಾವಿ ಜಿಲ್ಲಾ 4ನೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾಜನ ವರದಿ ಬೇಗ ಜಾರಿಗೆ ಬರಲಿ ಮತ್ತು ಕಳೆದು ಹೋದ ನಮ್ಮ ಜನ- ನಮ್ಮ ನೆಲ ಮತ್ತೆ ಕರ್ನಾಟಕಕ್ಕೆ ಸೇರುವಂತಾಗಲಿ ಎಂದರು. ಜಾಗತೀಕರಣದ ದಾಳಿಯಿಂದ ಭಾಷೆಗಳು ನಶಿಸುತ್ತಿವೆ. ಸಂಸ್ಕೃತಿಗಳು ಸೊರಗುತ್ತಿವೆ. ಭಾಷೆ ಇಲ್ಲದೆ ಹೋದರೆ ಸಂಸ್ಕೃತಿಗೆ ಉಳಿಗಾಲವಿಲ್ಲ. ಸಂಸ್ಕೃತಿಯ ಪ್ರಮುಖ ಅಂಗಗಳೆಂದರೆ ಸಾಹಿತ್ಯ, ಕಲೆ, ಸಂಗೀತ, ನೃತ್ಯ ಮುಂತಾದವುಗಳಾಗಿವೆ ಎಂದು ಹೇಳಿದರು.
ನಮ್ಮಲ್ಲಿಂದು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು ಪ್ರಾದೇಶಿಕ ಭಾಷೆಗಳ ಮೇಲೆ ಪ್ರಭಾವ ಬೀರುತ್ತವೆ. ಇದು ತಪ್ಪಬೇಕು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು, 1ರಿಂದ 1ನೇ ತರಗತಿಯವರೆಗೆ ಶಿಕ್ಷಣ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿಯೇ ಆಗಬೇಕು. ಒಂದನೇ ತರಗತಿಯಿಂದ ಇಂಗ್ಲಿಷ್ ಅನ್ನು ಕೂಡ ಒಂದು ಭಾಷೆಯನ್ನಾಗಿ ಬೋಧಿಸಬೇಕು, ಉನ್ನತ ತಾಂತ್ರಿಕ ಶಿಕ್ಷಣದಲ್ಲಿ ಭಹಾಗೂ ಕನ್ನಡ ನಾಡು-ನುಡಿ ಸಂಸ್ಕೃತಿ ಪರಂಪರೆ ಪರಿಚಯ ಮಾಡಿಸಲು ಕನ್ನಡ ಭಾಷೆ ಕಡ್ಡಾಯಗೊಳಿಸಬೇಕು. ಕಲಿಯಲು, ನಲಿಯಲು, ದುಡಿಯಲು, ಬದುಕಲು, ಬಾಳಲು, ಹಂಚಲು, ಪಡೆಯಲು ಕನ್ನಡ ಸಮರ್ಥ ಭಾಷೆಯಾಗಿ ಬೆಳೆಯಬೇಕು. ಜಪಾನ್, ಜರ್ಮನಿ, ಚೀನಾ , ಫ್ರಾನ್ಸ್, ರಷ್ಯಾ ಮುಂತಾದ ದೇಶಗಳಂತೆ ಕನ್ನಡ ಭಾಷೆಯಲ್ಲಿಯೂ ಜ್ಞಾನ, ವಿಜ್ಞಾನ , ತಂತ್ರಜ್ಞಾನ, ಉನ್ನತ ಶಿಕ್ಷಣ ಬೋಧಿಸಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಕನ್ನಡ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಒತ್ತಿ ಹೇಳಿದರು.ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸಿಎಂ ಸಿದ್ದರಾಮಯ್ಯನವರನ್ನು ಅಭಿನಂದಿಸಿದ ಅವರು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ 2022 ಎಲ್ಲ ಹಂತದಲ್ಲೂ ಜಾರಿಗೆ ಬರಲಿ ಎಂದರು. ತಮಿಳು ಭಾಷೆಯಂತೆ ಭಾಷಾ ಬೆಳವಣಿಗೆ ಆರ್ಥಿಕ ಸಹಾಯ ಸಿಗುವಂತಾಗಬೇಕು, ಪಂಚಾಯಿತಿಗೊಂದು ಗ್ರಂಥಾಲಯ ಬರಬೇಕು. ಪ್ರಕಾಶಕರಿಗೆ ಮತ್ತು ಲೇಖಕರಿಗೆ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಸರ್ಕಾರದಿಂದ ಐದುನೂರು ಗ್ರಂಥಗಳ ಸಗಟು ಖರೀದಿ ವ್ಯವಸ್ಥಿತವಾಗಿ ನಡೆಯಬೇಕು. ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು. ರಾಜ್ಯಗಳ ಗಡಿ, ಜಲ ತಂಟೆ ಪರಿಹಾರಕ್ಕಾಗಿ ಶಾಶ್ವತ ಆಯೋಗ ಒಂದನ್ನು ಕೇಂದ್ರ ಸರ್ಕಾರ ರಚಿಸಬೇಕು. ರಾಜ್ಯದಲ್ಲಿ ನಾಮಫಲಕಗಳು ಕನ್ನಡದಲ್ಲಿ ಇರಬೇಕು. ಕನ್ನಡ ಅಂಕಿಗಳನ್ನೇ ಬಳಸುವಂತೆ ಆಗಬೇಕು. ಕಲ್ಯಾಣ ಕರ್ನಾಟಕ ಮಾದರಿಯಲ್ಲಿ ಕಿತ್ತೂರು ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಬೇಕು ಎಂದರು.
ವಚನ ವಿಶ್ವವಿದ್ಯಾಲಯ ಸ್ಥಾಪನೆ, ಚುಟುಕು ಸಾಹಿತ್ಯ ಪರಿಷತ್ತಿಗೆ ಮತ್ತು ಸಾಹಿತ್ಯಿಕ, ಸಾಂಸ್ಕೃತಿಕ, ಸಂಘಟನೆಗಳಿಗೆ ಸರಕಾರದಿಂದ ಹೆಚ್ಚಿನ ಧನ ಸಹಾಯ, ಬೆಳಗಾವಿ ಜಿಲ್ಲೆಯ ಕವಿ, ಸಾಹಿತಿ, ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್, ಅಕಾಡೆಮಿ ಪ್ರಶಸ್ತಿಗಳು, ಅಕಾಡೆಮಿ ಸ್ಥಾನಮಾನಗಳು ಸಿಗಬೇಕು. ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲ ರಾಜ್ಯ ಮಟ್ಟದ ಕಚೇರಿಗಳು ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಬರಬೇಕು. ಪ್ರತಿ ಹೋಬಳಿ ಮಟ್ಟದಲ್ಲಿ ರೈತರಿಗೆ ನೀರು, ಮಣ್ಣು ಪರೀಕ್ಷೆ, ಬೆಳೆ ಮಾಹಿತಿ, ಬೀಜ ರಸಗೊಬ್ಬರ, ಕೀಟನಾಶಕಗಳು ದೊರೆಯುವಂತಾಗಬೇಕು. ಪ್ರತಿಯೊಂದು ಹೊಲಗಳಲ್ಲಿ ಮನೆಗಳಲ್ಲಿ ಮಳೆ ಕೊಯ್ಲು ಕಡ್ಡಾಯವಾಗಬೇಕು. ಮಳೆ ಕೊಯ್ಲು ವಿಧಾನ ಮತ್ತು ಕಲಿಕೆ ಪಠ್ಯದ ಪುಸ್ತಕಗಳಲ್ಲಿ ಅಳವಡಿಸಬೇಕು ಎಂದು ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಿದರು.ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನದ ಸರ್ವಾಧ್ಯಕ್ಷರಾದ ಅಪ್ಪಾಸಾಹೇಬ್ ಅಲಿಬಾದಿ ಮತ್ತು ಅವರ ಧರ್ಮಪತ್ನಿ ಭಾರತಿ ಅಲಿಬಾದಿ ರವರನ್ನು ಮೆರವಣಿಗೆ ಮೂಲಕ ಸಭಾ ಗ್ರಹಕ್ಕೆ ಕರೆತರಲಾಯಿತು. ಚುಟುಕು ಸಾಹಿತ್ಯ ಪರಿಷತ್ ರಾಜ್ಯ ಸಂಚಾಲಕ ಡಾ.ಎಂ.ಜಿ.ಆರ್.ಅರಸ್ ಮತ್ತು ಕೌಸ್ತುಭ ಪತ್ರಿಕೆ ಸಂಪಾದಕಿ ಡಾ.ರತ್ನಾ ಹಾಲಪ್ಪಗೌಡ ಸಾಂದರ್ಭಿಕವಾಗಿ ಮಾತನಾಡಿದರು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಲ್.ಎಸ್.ಶಾಸ್ತ್ರಿ ಸ್ವಾಗತಿಸಿ, ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಸಂಗೀತ ವಿದುಷಿ ನಿರ್ಮಲಾ ಪ್ರಕಾಶ್, ಸಿ.ಕೆ.ಜೋರಾಪುರ ಇದ್ದರು. ಸಪ್ತಸ್ವರ ಸಂಗೀತ ವಿದ್ಯಾಲಯದ ವಿದ್ಯಾರ್ಥಿನಿಯರಿಂದ ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದ ನಿರ್ವಹಣೆಯನ್ನು ನೀರಜಾ ಗಣಾಚಾರಿ ನಡೆಸಿಕೊಟ್ಟರೆ ನವಲಗುಂದ ವಂದಿಸಿದರು.